ಬೆಳೆ ಸಾಲ ಪಡೆದ ರೈತರಿಗೆ ಶೇ.100ರಷ್ಟು ಬೆಳೆ ವಿಮೆ ನೋಂದಣಿ ಮಾಡಿಸಿ -ಇಕ್ರಮ್ ಶರೀಫ್

,
,
Published on
ಕಲಬುರಗಿ: ಜಿಲ್ಲೆಯಲ್ಲಿ ಪ್ರಸಕ್ತ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಸಾಲ ಪಡೆದಂತಹ ಎಲ್ಲಾ ರೈತರನ್ನು ಕಡ್ಡಾಯವಾಗಿ ಕರ್ನಾಟಕ ರೈತ ಸುರಕ್ಷಾ ಫ್ರದಾನಮಂತ್ರಿ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹೆಸರು ನೊಂದಣಿ ಮಾಡುವಂತೆ ಬ್ಯಾಂಕರ್ಸ್ , ಪ್ಯಾಕ್ಸ್ ಸಂಸ್ಥೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್, ಖಾಸಗಿ ಬ್ಯಾಂಕ್, ಡಿ.ಸಿ.ಸಿ. ಬ್ಯಾಂಕ್ ಸೇರಿದಂತೆ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ ಅವರು, ಪ್ರಸಕ್ತ 2026-27ನೇ ಸಾಲಿನಲ್ಲಿ 1.93 ಲಕ್ಷ ರೈತರು ಸಾಲ ಪಡೆದಿದ್ದು, ಇದರಲ್ಲಿ  ಫ್ರದಾನಮಂತ್ರಿ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಹೆಸರು ನೊಂದಾಯಿಸಿದ್ದವರು ಕೇವಲ 9,980 ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾ ಆಯಾ ಬ್ಯಾಂಕ್‌ಗಳಿಗೆ ನೀಡಿದ ಗುರಿಯಂತೆ ಮುಂದಿನ ಒಂದು ವಾರದೊಳಗೆ ರೈತರಿಂದ ಬೆಳೆ ವಿಮೆ ನೋಂದಣಿ ಮಾಡಿಸಬೇಕೆಂದು ಸೂಚಿಸಿದರು.
ರೈತರಿಗೆ ಕಷ್ಟದ ಕಾಲದಲ್ಲಿ ನೆರವಾಗಬೇಕೆಂದು ಸರ್ಕಾರ ಬೆಳೆ ವಿಮೆ ಯೋಜನೆ ಜಾರಿಗೆ ತಂದಿದೆ. ಯಾವುದೇ ಅರ್ಹ ರೈತರು ಈ ಯೋಜನೆಯಿಂದ ವಂಚಿತರಾಗದಂತೆ ಬ್ಯಾಂಕ್‌ಗಳು, ಪ್ಯಾಕ್ಸ್ ಸಂಸ್ಥೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 1.93 ಲಕ್ಷ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿ 3,260 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ. ಸಾಲ ಪಡೆದ ರೈತರು ಬೆಳೆ ವಿಮೆ ಮಾಡಿಸದೆ ಹೋದಲ್ಲಿ ಪ್ರಕೃತಿ ವಿಕೋಪ ಸೇರಿದಂತೆ ಇನ್ನಿತರ ಕಾರಣದಿಂದ ಬೆಳೆ ಹಾನಿಯಾದಲ್ಲಿ ರೈತ ಸಂಕಷ್ಟ ಎದುರಿಸಬೇಕಾಗುತ್ತದೆ. ಬ್ಯಾಂಕ್ ಅಥವಾ ಸಂಸ್ಥೆ ವ್ಯವಸ್ಥಾಪಕರು ಬೆಳೆ ವಿಮೆ ಕಂತನ್ನು ರೈತರ ಪರವಾಗಿ ವಿಮಾ ಸಂಸ್ಥೆಗೆ ತುಂಬದಿದ್ದಲ್ಲಿ ಬೆಳೆ ಹಾಳಾದಾಗ ವಿಮೆ ಪರಿಹಾರದ ಮೊತ್ತವನ್ನು ಹಾನಿಗೊಂಡ ರೈತರಿಗೆ ನೀಡುವುದು ಸಾಲ ನೀಡಿದ ಸಂಸ್ಥೆಯ ಜವಬ್ದಾರಿಯಾಗಿರುತ್ತದೆ ಎಂದು ಬ್ಯಾಂಕರ್ಸ್ ಗಳಿಗೆ ಎಚ್ಚರಿಕೆ ನೀಡಿದರು.
ಬ್ಯಾಂಕ್ ಗಳಿಗೆ ಗುರಿ:
ಜಿಲ್ಲೆಯ ಬ್ಯಾಂಕ್ ಆಫ್ ಬರೋಡಾ ಅವರಿಗೆ 850, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗೆ 1,000, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಸ್ಥೆಗೆ 12,000, ಕರ್ನಾಟಕ ಗ್ರಾಮೀಣ ಬ್ಯಾಂಕ್ ನವರಿಗೆ 37,000, ಡಿ.ಸಿ.ಸಿ ಬ್ಯಾಂಕ ನವರಿಗೆ 80,000 ಹಾಗೂ ಪ್ಯಾಕ್ಸ್ ಸಂಸ್ಥೆಗಳಿಗೆ 30,000 ರೈತರನ್ನು ಬೆಳೆ ವಿಮೆ ಯೋಜನೆಯಡಿ ಹೆಸರು ನೋಮದಾಯಿಸಲು ಗುರಿ ನಿಗದಿ ಮಾಡಿದ್ದು, ಕಾಲಮಿತಿಯಲ್ಲಿ ನೊಂದಣಿ ಮಾಡಿ ಶೇ.100ರಷ್ಟು ಪ್ರಗತಿ ಸಾಧಿಸುವಂತೆ ಬ್ಯಾಂಕ್ ಅಧಿಕಾರಿಗಳಿಗೆ ಡಿ.ಸಿ. ಸೂಚಿಸಿದರು.ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ, ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆದ ಜಿಲ್ಲೆಯ ಎಲ್ಲಾ ರೈತರನ್ನು 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ವಿಮೆ ನೊಂದಣಿ ಮಾಡಿಸುವಂತೆ ತಿಳಿಸಿದಲ್ಲದೆ ಯೋಜನೆಯ ಅನುಷ್ಠಾನ, ನೋಂದಣಿ ಪ್ರಕ್ರಿಯೆ, ಗಡುವು ಹಾಗೂ ರೈತರಿಗೆ ದೊರೆಯುವ ಪ್ರಯೋಜನಗಳ ಕುರಿತು ವಿವರವಾದ ಮಾಹಿತಿ ನೀಡಿದರು. 
ಸಭೆಯಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಕಿಶೋರ, ಜಿಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅಂಬ್ರೀಶ್ ತೆಗನೂರ ಸೇರಿದಂತೆ ಜಿಲ್ಲೆಯ ವಿವಿಧ ರಾಷ್ಟ್ರೀಕೃತ, ಖಾಸಗಿ ಬ್ಯಾಂಕ್ಗಳ ಜಿಲ್ಲಾ ವ್ಯವಸ್ಥಾಪಕರು, ಪ್ಯಾಕ್ಸ್ ಸಂಸ್ಥೆಯ ಪ್ರತಿನಿಧಿಗಳು  ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net