ಗೌರಿಬಿದನೂರು: ಕೈವಾರ ಶ್ರೀಯೋಗಿ ಅಮರನಾರೇಯಣ (ತಾತಯ್ಯ) 300ನೇ ಜಯಂತಿ ಪ್ರಯುಕ್ತ ಭಕ್ತರು ಜಿಲ್ಲೆಯಲ್ಲಿ ನಡೆಸುತ್ತಿರುವ ಶ್ರೀರಾಮದಂಡು ಸಂಕೀರ್ತನಾ ಪಾದಯಾತ್ರೆ ತಾಲೂಕಿನ ಹೊಸೂರು ಗ್ರಾಮಕ್ಕೆ ಆಗಮಿಸಿತ್ತು.teachings
ತಾಲೂಕಿನ ವಿವಿಧ ಹಳ್ಳಿಗಳಲ್ಲಿ ನಡೆದ ಪಾದಯಾತ್ರೆಯಲ್ಲಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿ ಸಂಕೀರ್ತನೆಗಳನ್ನು ಹಾಡುತ್ತಾ ಸಾಗಿದರು.
ಪಾದಯಾತ್ರೆ ಮುಂದಾಳತ್ವ ವಹಿಸಿದ್ದ ಕೈವಾರ ಕ್ಷೇತ್ರದ ಧಮಾರ್ಧಿಕಾರಿ ಎಂ.ಆರ್.ಜಯರಾಮ್ ಮಾತನಾಡಿ, ಸದಾ ಭಕ್ತಿ, ಭಜನೆ, ಧ್ಯಾನ ಮತ್ತು ಉಪದೇಶಗಳ ಮೂಲಕ ಅಂತರಂಗ ಶುದ್ಧಿಗೆ ಒತ್ತು ಕೊಟ್ಟವರು ಕೈವಾರ ತಾತಯ್ಯ. ಅವರು ಬಳೆ ವ್ಯಾಪಾರಿಯಾಗಿ ಜೀವನ ಸಾಗಿಸುತ್ತಾ ಮಕ್ಕಳನ್ನು ಪಡೆದು, ನಂತರದ ದಿನಗಳಲ್ಲಿ ಸಂಸಾರ ತ್ಯಜಿಸಿ ಸನ್ಯಾಸ ಸ್ವೀಕರಿಸಿ, ಸಮಾಜವನ್ನು ಆಧ್ಯಾತ್ಮಿಕ ಮಾರ್ಗಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ತೊಡಗಿಸಿಕೊಂಡರು.
ಸಾಹಿತ್ಯ, ವಿಜ್ಞಾನ, ಆರ್ಥಿಕ, ರಾಜಕೀಯ, ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಚಾರದಲ್ಲಿ ಸಮಹಿತ ಮಿಶ್ರಣವಿದ್ದು, ಅವು ಎಲ್ಲ ಕಾಲಕ್ಕೂ ಅನ್ವಯಗೊಳ್ಳುವ ಗುಣ ಹೊಂದಿವೆ. 300ನೇ ಜಯಂತಿ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ಮಾತನಾಡಿ, ತಾತಯ್ಯ ಈ ನಾಡು ಕಂಡ ಅಪರೂಪದ ಸಂತರು, ಸಮಾಜ ಸುಧಾರಕರು, ಮಹಾನ್ ಜ್ಞಾನಿಗಳು, ಯೋಗಿಗಳು, ಸಿದ್ಧಪುರುಷರು. ಶಾಂತ ಸ್ವಭಾವ, ಪ್ರೀತಿ, ಸರಳ ಬದುಕನ್ನು ಜಗತ್ತಿಗೆ ಸಾರಿದ ಮಹಾನ್ ಚೇತನ ಎಂದು ಹೇಳಿದರು.
ತಾಲೂಕಿನ ಕೋಟಾಲದಿನ್ನಿ, ಬೊಮ್ಮಶೆಟ್ಟಿಹಳ್ಳಿ, ರಮಾಪುರ, ಬೀಮನಹಳ್ಳಿ, ವೈಚ ಕೂರ್ಲಹಳ್ಳಿ, ಕಾದಲವೇಣಿ ಗ್ರಾಮಗಳಿಗೆ ತೆರಳಲಾಯಿತು.