ದೇಶದಲ್ಲಿ ಇನ್ನಷ್ಟು ಕೈಗಾರಿಕೆಗಳ ಬೆಳವಣಿಗೆ ಒತ್ತು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ-HDK

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
Published on
ಬಿಷ್ಕೇಕ್ (ಕಿರ್ಗಿಸ್ತಾನ್ ಗಣರಾಜ್ಯ): ಕೈಗಾರಿಕೋತ್ಪಾದನೆ ವಲಯದಲ್ಲಿ ಪರಸ್ಪರ ಸಹಕಾರ ಹೊಂದುವ ನಿಟ್ಟಿನಲ್ಲಿ ಆ ರಾಷ್ಟ್ರದ ರಾಜಧಾನಿ ಬಿಷ್ಕೇಕ್‌ನಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಕಿರ್ಗಿಸ್ತಾನ್ ಗಣರಾಜ್ಯದ ಆರ್ಥಿಕ ಮತ್ತು ವಾಣಿಜ್ಯ ಸಚಿವ ಬಕಿತ್ ಸಿಡಿಕೋವ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಿತು.
ಭಾರತ ಮತ್ತು ಕಿರ್ಗೊಸ್ತಾನ್ ನಡುವೆ ಕೈಗಾರಿಕಾ ಸಂಬಂಧಗಳನ್ನು ಮತ್ತಷ್ಟು ದೃಢಗೊಳಿಸುವ ನಿಟ್ಟಿನಲ್ಲಿ ಇಬ್ಬರೂ ಸಚಿವರ ನಡುವೆ ಚರ್ಚೆ ಜತೆಗೆ ಉಭಯ ದೇಶಗಳ ನಡುವೆ ಆರ್ಥಿಕ ತೊಡಗಿಸಿಕೊಳ್ಳುವಿಕೆ, ಕೈಗಾರಿಕಾ ಸಹಕಾರ ಮತ್ತು ವ್ಯಾಪಾರ ಪಾಲುದಾರಿಕೆಯನ್ನು ಗಾಢಗೊಳಿಸುವ ಮಾರ್ಗಗಳ ಬಗ್ಗೆ ಸಚಿವದ್ವಯರು ಚರ್ಚಿಸಿದರು. ಶಾಂಘೈ ಸಹಕಾರ ಸಂಸ್ಥೆಯ (ಎಸ್‌ಸಿಒ) ಕೈಗಾರಿಕಾ ಸಚಿವರ 4ನೇ ಶೃಂಗಸಭೆಯ ಸಂದರ್ಭದಲ್ಲಿ ನಡೆದ ಈ ಸಭೆಯು ಭಾರತ-ಕಿರ್ಗಿಸ್ತಾನ್ ಸಂಬಂಧಗಳಲ್ಲಿ ಆಗುತ್ತಿರುವ ಮುನ್ನಡೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಮಧ್ಯ ಏಷ್ಯಾ ಭಾಗದಲ್ಲಿ ತನ್ನ ಆರ್ಥಿಕ ಹೆಜ್ಜೆಗುರುತನ್ನು ವಿಸ್ತರಿಸುವ ನಿಟ್ಟಿನಲ್ಲಿ ಭಾರತದ ಬದ್ಧತೆಯ ಬಗ್ಗೆ ಸಚಿವ ಕುಮಾರಸ್ವಾಮಿ ಅವರು ಕಿರ್ಗೀಜ್ ಸಚಿವರೊಂದಿಗೆ ವಿಸ್ತೃತ ಸಮಾಲೋಚನೆ ನಡೆಸಿದರು.
ದ್ವಿಪಕ್ಷೀಯ ವ್ಯಾಪಾರವನ್ನು ಬಲಪಡಿಸುವುದು, ಕೈಗಾರಿಕಾ ಸಹಕಾರವನ್ನು ವೃದ್ಧಿಸುವುದು, ಹೂಡಿಕೆ ಅವಕಾಶಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ತೇಜಿಸುವುದು, 2 ದೇಶಗಳ ವ್ಯವಹಾರಗಳು ಮತ್ತು ಉತ್ಪಾದನಾ ವಲಯಗಳ ನಡುವೆ ಹೆಚ್ಚಿನ ಸಹಯೋಗವನ್ನು ಉತ್ತೇಜಿಸುವ ಕುರಿತು ಸಚಿವರಿಬ್ಬರೂ ಮಾತುಕತೆ ನಡೆಸಿದರು. ಪರಸ್ಪರ ಪ್ರಯೋಜನಕಾರಿ ಆರ್ಥಿಕ ಪಾಲುದಾರಿಕೆಗಳನ್ನು ಸೃಷ್ಟಿಸಲು ಮತ್ತು ಪೂರಕ ಸಾಮರ್ಥ್ಯ ಬಳಸಿಕೊಳ್ಳುವ ಅವಕಾಶಗಳನ್ನು ಈ ಸಮಾಲೋಚನೆಯಲ್ಲಿ ಅನ್ವೇಷಿಸಿದರು.ಕಿರ್ಗಿಸ್ತಾನ್ ಗಣರಾಜ್ಯದ ಭಾರತದ ರಾಯಭಾರಿ ಬೀರೇಂದರ್ ಸಿಂಗ್ ಯಾದವ್ ಭಾಗಿಯಾಗಿದ್ದರು.
ಉಭಯ ದೇಶಗಳ ಸಂಬಂಧ ಗಟ್ಟಿ:
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತವು ಶಾಂಘೈ ಸಹಕಾರ ಸಂಸ್ಥೆಯ ಸದಸ್ಯ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ಸಭೆ ಮಹತ್ವದ್ದಾಗಿದೆ. ಸದಸ್ಯ ರಾಷ್ಟ್ರಗಳಲ್ಲಿ ಕೈಗಾರಿಕಾ ಸಹಕಾರ ಮತ್ತು ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸಲು ಭಾರತ ಬದ್ಧವಾಗಿದೆ. ಈ ಪ್ರದೇಶದಾದ್ಯಂತ ಶಾಂತಿ, ಸ್ಥಿರತೆ, ಆರ್ಥಿಕ ಬೆಳವಣಿಗೆ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಮುನ್ನಡೆಸಲು ಶಾಂಘೈ ಸಹಕಾರ ಸಂಸ್ಥೆಯನ್ನು ಪ್ರಮುಖ ವೇದಿಕೆಯಾಗಿ ಭಾರತ ಪರಿಗಣಿಸುತ್ತದೆ ಎಂದು ಸಚಿವ ಕುಮಾರಸ್ವಾಮಿ ಪ್ರತಿಪಾದಿಸಿದರು. ಭಾರತದ ಗಮನಾರ್ಹ ಕೈಗಾರಿಕಾ ಬೆಳವಣಿಗೆ ಬಗ್ಗೆ ಒತ್ತಿ ಹೇಳಿದ ಸಚಿವರು, ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ ಭಾರತ ಹೊರಹೊಮ್ಮಿದೆ. ಭಾರತದ ಉತ್ಪಾದನಾ ವಲಯದ ಪೂರಕ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಿದೆ, ಸುಧಾರಿತ ಮೂಲಸೌಕರ್ಯ ಮತ್ತು ವ್ಯಾವಹಾರಿಕ ಸುಲಭತೆಯನ್ನು ಹೆಚ್ಚಿಸಿದ ಮೇಕ್ ಇನ್ ಇಂಡಿಯಾ, ನವೋದ್ಯಮ ಇಂಡಿಯಾ, ಪಿಎಂ ಗತಿಶಕ್ತಿ ಮತ್ತು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಗಳಂತಹ ಪ್ರಮುಖ ಉಪಕ್ರಮಗಳ ಬಗ್ಗೆ ಪ್ರಸ್ತಾಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net