ಗ್ರಾಮೀಣದಲ್ಲಿ ಬಿಜೆಪಿ ಬಲವರ್ಧನೆಗೆ ಒತ್ತು ನೀಡಿ / KUNDANA
ಕುಂದಾಣ ಮಹಾಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ನೇಮಕ ಮತ್ತು ನೇಮಕಾತಿ ಪ್ರಮಾಣ ಪತ್ರ ವಿತರಿಸಲಾಯಿತು. ಮಾಜಿ ಶಾಸಕ ಜಿ.ಚಂದ್ರಣ್ಣ, ಪಕ್ಷದ ಅಧ್ಯಕ್ಷ ಅಂಬರೀಶ್ಗೌಡ, ಹಿರಿಯ ಮುಖಂಡರಾದ ಬುಳ್ಳಹಳ್ಳಿ ರಾಜಪ್ಪ, ಬಿ.ಕೆ.ನಾರಾಯಣಸ್ವಾಮಿ, ಯುವ ಮುಖಂಡರಾದ ಬಿದಲೂರು ತಮ್ಮಯಣ್ಣ, ಚನ್ನಕೇಶವ ಇದ್ದರು.
ಕುಂದಾಣ : ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಬಲಪಡಿಸುವ ಉದ್ದೇಶದಿಂದ ಹೋಬಳಿ ಮಟ್ಟದ ಪದಾಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಕುಂದಾಣ ಮಹಾಶಕ್ತಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ನೇಮಕ ಹಾಗೂ ನೇಮಕಾತಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಲು ಸ್ಥಾನಮಾನ ಪಡೆದ ಪದಾಧಿಕಾರಿಗಳು ಬೂತ್ ಕಮಿಟಿಗಳನ್ನು ಸದೃಢಗೊಳಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತವನ್ನು ಹಾಗೂ ವಿಬಿ ಜಿ ರಾಮ್ ಜಿ ಯೋಜನೆ, 2026ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟಿನ ಬಗ್ಗೆ ಪ್ರತಿಯೊಬ್ಬ ನಾಗರಿಕರಿಗೆ ಜಾಗೃತಿ ಮೂಡಿಸಬೇಕು ಎಂದರು.
ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನರಿಗೆಅರ್ಥೈಸಬೇಕು. ಪಕ್ಷ ಸದೃಢಗೊಂಡರೆ ಕಾರ್ಯಕರ್ತರು ಕೂಡ ಪ್ರಬಲವಾಗಿ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಹೋಬಳಿ ನೂತನ ಅಧ್ಯಕ್ಷರಾಗಿ ಬಸವ ರಾಜು, ಉಪಾಧ್ಯಕ್ಷರಾಗಿ ಸಿದ್ದಲಿಂಗೇಶ, ಮುನಿರಾಜು, ರಮೇಶ್, ಲೋಕೇಶ್, ಪ್ರಧಾನ ಕಾರ್ಯದರ್ಶಿಯಾಗಿ ವಿನಯ್, ಕಾರ್ಯದರ್ಶಿಗಳಾಗಿ ರಾಘವೇಂದ್ರ, ಮಹೇಶ್, ಪ್ರಕಾಶ್ ಅವರನ್ನು ನೇಮಕ ಮಾಡಲಾಗಿದೆ ಎಂದರು.
ನೇಮಕಾತಿ ಪ್ರಮಾಣ ಪತ್ರ ಸ್ವೀಕರಿಸಿದ ಕುಂದಾಣ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಬಸವರಾಜ್ ಮಾತನಾಡಿ, ಕಾರ್ಯಕರ್ತರನ್ನುಒಗ್ಗೂಡಿಸಿ ಬೂತ್ ಕಮಿಟಿಗಳಿಗೆ ತರಬೇತಿ ನೀಡಿ ಮುಂಬರುವ ತಾಪಂ, ಜಿಪಂ ಹಾಗೂ ಗ್ರಾಪಂ ಚುನಾವಣೆಗಳಲ್ಲಿ ಸಮರ್ಥ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಾಗುವುದು ಎಂದರು.