

ದೊಡ್ಡಬಳ್ಳಾಪುರ :
ಬರಗಾಲಮುನ್ಸೂಚನೆ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಲಭ್ಯತೆ ಹಾಗೂ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವಿಬಿ- ಜಿ ರಾಮ್ ಜಿ ಯೋಜನೆಯಡಿ ಮೇವು ಬೆಳೆಯಲು ತಾಲೂಕು ಆಡಳಿತ ಸಿದ್ಧತೆ ಮಾಡಿಕೊಂಡಿದೆ.
ತಾಲೂಕಿನ ಕೆಸ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆಣಸಿ ಗ್ರಾಮದಲ್ಲಿ ಮೇವು ಬೆಳೆಯಲು ಸ್ಥಳ ಗುರುತಿಸಿರುವ ಬಮುಲ್ ಮಾಲೀಕತ್ವದ 12 ಎಕರೆ ಜಮೀನಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಹರ್ತಿ ಭೇಟಿ ನೀಡಿ ಪರಿಶೀಲಿಸಿದರು.
ಎನ್ಎಂಆರ್ ಸೇರಿದಂತೆ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಅನುಷ್ಠಾನದ ಪ್ರಗತಿ ಪರಿಶೀಲಿಸಿ ಮಾತನಾಡಿ,ಬರಗಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮೇವು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಮೇವು ಉತ್ಪಾದನೆ ಮಾಡುವುದರಿಂದ ಸ್ಥಳಿಯವಾಗಿ ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಪೂರೈಕೆಗೆ ಅನುಕೂಲವಾಗುವುದಲ್ಲದೆ, ಬರಗಾಲದ ಸಂದರ್ಭದಲ್ಲಿ ರೈತರು ಹಾಗೂ ಜಾನುವಾರು ಸಾಕಿದವರಿಗೆ ನೆರವಾಗಲಿದೆ. ಬರಗಾಲದ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜಾನುವಾರುಗಳಿಗೆ ಅಗತ್ಯವಿರುವ ಮೇವಿನ ಲಭ್ಯತೆಯನ್ನು ಮುಂಚಿತವಾಗಿಯೇ ಖಚಿತಪಡಿಸಿಕೊಳ್ಳುವುದು ಇದು ಮುಖ್ಯ ಉದ್ದೇಶವಾಗಿದೆ ಎಂದರು.
ವಿಬಿ- ಜಿ ರಾಮ್ ಜಿ ಯೋಜನೆಯಡಿ ಮೇವು ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ನೆಪಿಯರ್ನಂತಹ ಉತ್ತಮ ಮೇವಿನ ತಳಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ಸ್ಥಳಿಯವಾಗಿ ಮೇವಿನ ಲಭ್ಯತೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಾಮಗಾರಿಗಳ ಗುಣಮಟ್ಟ, ಪಾರದರ್ಶಕ ಅನುಷ್ಠಾನ ಹಾಗೂ ಎನ್ಎಂಆರ್ ಸೇರಿ ಎಲ್ಲದಾಖಲೆಗಳ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೇವು ಅಭಿವೃದ್ಧಿ ಕಾಮಗಾರಿಗಳು ಗ್ರಾಮೀಣ ಪ್ರದೇಶದಲ್ಲಿ ಜಾನುವಾರು ಸಾಕಣೆಗೆ ಉತ್ತೇಜನ ನೀಡಲಾಗುವುದು ಎಂದರು.