ವಿದ್ಯುತ್​ ಕಂಬ ಶಿಥಿಲ, ಆತಂಕದಲ್ಲಿ ಜನಜೀವನ

ಯಡ್ರಾಮಿ ವಾರ್ಡ್​ 1ರ ಕುಂಬಾರ ಓಣಿಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್​ ಕಂಬ.
ಯಡ್ರಾಮಿ ವಾರ್ಡ್​ 1ರ ಕುಂಬಾರ ಓಣಿಯಲ್ಲಿನ ಶಿಥಿಲಾವಸ್ಥೆಯಲ್ಲಿರುವ ವಿದ್ಯುತ್​ ಕಂಬ.
Published on

ಪ್ರಮುಖ ಮುಖ್ಯಾಂಶಗಳು

  • ಯಡ್ರಾಮಿಯ ವಾರ್ಡ್​ 1ರ ಕುಂಬಾರಿ ಓಣಿಯಲ್ಲಿ ಸಮಸ್ಯೆ
  • ಜನರ ಸಮಸ್ಯೆಗೆ ಸ್ಪಂದಿಸದ ಜೆಸ್ಕಾಂ
ಯಡ್ರಾಮಿ: ಪಟ್ಟಣದ ವಾರ್ಡ್​ 1ರ ಕುಂಬಾರ ಓಣಿಯಲ್ಲಿನ ವಿದ್ಯುತ್​ ಕಂಬ ಸಂಪೂರ್ಣ ಶಿಥಿಲಗೊಂಡಿದ್ದು, ಜನರು ನಿತ್ಯವೂ ಭಯದಲ್ಲಿಯೇ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹಲವು ವರ್ಷಗಳ ಹಿಂದೆ ಓಣಿಯಲ್ಲಿ ವಿದ್ಯುತ್​ ಕಂಬಗಳನ್ನು ಅಳವಡಿಸಿದ್ದು, ಅವುಗಳಲ್ಲಿ ಮೂರು ಕಂಬ ಶಿಥಿಲಗೊಂಡು ಯಾವುದೇ ಸಮಯದಲ್ಲಿ ಬೀಳುವಂತಹ ಸ್ಥಿತಿಯಲ್ಲಿವೆ. ಕಿರಿದಾದ ರಸ್ತೆ ಪಕ್ಕದಲ್ಲಿಯೇ ಕಂಬಗಳನ್ನು ಅಳವಡಿಸಲಾಗಿದೆ. ವಾರ್ಡ್​ ನಿವಾಸಿಗಳು ಸೇರಿ ನಿತ್ಯ ನೂರಾರು ಸಾರ್ವಜನಿಕರು ಇದೇ ಮಾರ್ಗದಲ್ಲಿ ಅಲೆದಾಡುತ್ತಾರೆ. ಕಂಬಗಳ ಅಕ್ಕಪಕ್ಕದಲ್ಲಿ ಹಳೆಯ ಮಣ್ಣಿನ ಮನೆಗಳಿದ್ದು, ಒಂದು ವೇಳೆ ಮುರಿದು ಬಿದ್ದರೆ ದೊಡ್ಡ ಅಪಾಯ ಸಂಭವಿಸಬಹುದಾಗಿದೆ. ಕಂಬಗಳಲ್ಲಿನ ಕಬ್ಬಿಣ ಹೊರಗೆ ಬಂದಿದೆ. ಬದಲಾವಣೆ ಮಾಡಲು ಜೆಸ್ಕಾಂಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಸದ್ಯ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ದುರಸ್ತಿಯಾಗಿರುವ ವಿದ್ಯುತ್​ ಕಂಬ ಸರಿಪಡಿಸಬೇಕು ಎಂಬುದು ಜನರ ಒತ್ತಾಯವಾಗಿದೆ.
"

ಶಿಥಿಲಗೊಂಡ ವಿದ್ಯುತ್​ ಕಂಬ ಬದಲಾವಣೆಗೆ ಕಳೆದ ಆರು ತಿಂಗಳಿಂದ ನಿರಂತರ ಮನವಿ ಸಲ್ಲಿಸುತ್ತಿದ್ದೇವೆ. ಅಲ್ಲದೆ ಜೆಸ್ಕಾಂ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಅಹವಾಲು ಸ್ವೀಕಾರದ ವೇಳೆಯೂ ಗಮನಕ್ಕೆ ತರಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ನಿತ್ಯವೂ ಜೀವ ಕೈಯಲ್ಲಿಡುವ ಬದುಕುವ ಸ್ಥಿತಿಯಿದೆ. ಕೂಡಲೇ ಕಂಬ ಬದಲಾಯಿಸಬೇಕು, ಇಲ್ಲದಿದ್ದರೆ ವಾರ್ಡ್​ ನಿವಾಸಿಗಳೊಂದಿಗೆ ಜೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.

— > ಮುರುಗೆಣ್ಣ ಕುಂಬಾರ, ಸ್ಥಳಿಯ ನಿವಾಸಿ
"

ವಾರ್ಡ್​ 1ರಲ್ಲಿ ವಿದ್ಯುತ್​ ಕಂಬ ಹಾಳಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಕೆಲವರು ಮನೆ ಕಟ್ಟಿಕೊಳ್ಳುವ ಸಲುವಾಗಿ ಕಂಬ ಬದಲಾವಣೆ ಮಾಡಲು ತಿಳಿಸಿರುತ್ತಾರೆ. ಅದಕ್ಕೆ ಬಜೆಟ್​ ಹೊಂದಿಸಬೇಕಾದ ಕಾರಣ ವಿಳಂಭವಾಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಕಂಬದ ಕುರಿತು ಪರಿಶೀಲನೆ ಮಾಡಲು ಅಧಿಕಾರಿಗೆ ಸೂಚನೆ ನೀಡಿ ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುತ್ತೇನೆ.

— > ಭಾಗ್ಯವಂತ, ಜೆಸ್ಕಾಂ ಎಇಇ, ಯಡ್ರಾಮಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net