ಸಕಲೇಶಪುರ: ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಕಾಡಾನೆ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರದೊಂದಿಗೆ ನಿರಂತರ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.
ಹಾಸನ ಜಿಲ್ಲಾ ಬೆಳೆಗಾರರ ಸಂಘದಿಂದ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಬೆಳೆಗಾರರ ಸಮಾವೇಶ, ಕಾಫಿ ಕೃಷಿ ಮೇಳ ಹಾಗೂ 30ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಕಾಫಿ ಬೆಳೆಗಾರರ ಸಮಸ್ಯೆ ಬಗ್ಗೆ ಅರಿವಿದೆ. ಬೆಳೆ ಇದ್ದ ವೇಳೆ ಧಾರಣೆ ಇಲ್ಲ..ಧಾರಣೆ ಬಂದ ವೇಳೆ ಬೆಳೆ ಇಲ್ಲ ಎಂಬ ಪರಿಸ್ಥಿತಿ ಬೆಳೆಗಾರರನ್ನು ಕಾಡುತ್ತಿದೆ. ಇದರೊಂದಿಗೆ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಕಾಡುಪ್ರಾಣಿಗಳ ಸಮಸ್ಯೆಯೊಂದಿಗೆ ಬೆಳೆಗಾರರ ಹೋರಾಟ ನಡೆಸಬೇಕಿದೆ. ಆದ್ದರಿಂದ ಈ ಸಮಸ್ಯೆ ಬಗೆಹರಿಸಲು ನಾನು ಶಕ್ತಿ ಮೀರಿ ಶ್ರಮಿಸುತ್ತಿದ್ದೇನೆ ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ಸಮಸ್ಯೆಗಳ ಸರಮಾಲೆ ಹೊದ್ದಿರುವ ಕಾಫಿ ಕೃಷಿಕರು ಸಮಸ್ಯೆಯಿಂದ ಹೊರಬರಬೇಕಾದರೆ, ಆಧುನಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದು ಅನಿವಾರ್ಯ. ಸಮಸ್ಯೆಗಳ ನಡುವೆ ಹೋರಾಡುತ್ತಿರುವ ಬೆಳೆಗಾರರಿಗೆ ಪ್ರಸಕ್ತ ವರ್ಷ ಮಳೆ ಕೈಕೊಟ್ಟಿರುವುದರಿಂದ ಬೆಳೆ ಉಳಿಸಿಕೊಳ್ಳುವ ಸಮಸ್ಯೆ ಎದುರಾಗಿದೆ. ಈಗಾಗಲೇ ಜಲಮೂಲಗಳು ಬತ್ತಿರುವುದರಿಂದ ಹನಿನೀರಾವರಿ ಮಾಡಲು ಸಾಧ್ಯವಿಲ್ಲದಾಗಿದೆ. ಕಾಫಿ ಬೆಳೆಗೆ ಕಾರ್ಮಿಕರ ಸಮಸ್ಯೆ ಅತಿಯಾಗಿದ್ದು ಇದನ್ನು ನಿವಾರಣೆ ಮಾಡಬೇಕಾದರೆ ಆಧುನಿಕ ಕೃಷಿ ಪದ್ಧತಿ ಆಳವಡಿಸಿಕೊಳ್ಳುವ ಅನಿವಾರ್ಯತೆ ಬೆಳೆಗಾರರಿಗೆ ಇದೆ. ಕಾಫಿ ಬೆಳೆಗಾರರಿಗೆ ಸರ್ಕಾರದಿಂದ ದೊರೆಯಬೇಕಾದ ಎಲ್ಲ ಸೌಕರ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.
ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮಾತನಾಡಿ, ಬೆಳೆಗಾರರು ಆರ್ಥಿಕವಾಗಿ ಶ್ರೀಮಂತರಾಗಬೇಕಿದ್ದರೆ, ಹಣಕಾಸು ನಿವಹಣೆ ಮುಖ್ಯ. ಹಣಕಾಸು ನಿರ್ವಹಣೆ ಸರಿಯಾಗಿದ್ದರೆ ಉತ್ಪಾದನಾ ವೆಚ್ಚವನ್ನು ಅತ್ಯಂತ ಕನಿಷ್ಠಮಟ್ಟಕ್ಕೆ ಇಳಿಸ ಬಹುದಾಗಿದೆ. ಸದ್ಯ ಕಾಫಿ ಬೆಳೆಗಾರರನ್ನು ಕಾಡುತ್ತಿರುವ ಸಮಸ್ಯೆಗಳಿಂದ ಹೊರಬರಲು ಬೆಳೆಗಾರರು ವಿಭಿನ್ನವಾಗಿ ಚಿಂತಿಸಿ ಕಾರ್ಯಚರಣೆಗೆ ಇಳಿಯುವ ಅಗತ್ಯವಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆಗಳಿಂದ ಹೊರಬರಬಹುದು ಎಂದರು.
ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ದಿನೇಶ್ ಮಾತನಾಡಿ, ನಿಯಮಿತ ಕಾಫಿ ಸೇವನೆ ಹೃದಯದ ಆರೋಗ್ಯ ಕಾಪಾಡಲು ಸಹಕಾರಿಯಾಗಿದೆ. ಆದ್ದರಿಂದ ಕಾಫಿಯಲ್ಲಿ ಅತಿಯಾಗಿ ವಿಷ ಬೆರೆಸುವುದು ಒಳ್ಳೆಯದಲ್ಲ. ಇಳುವರಿ ಕಡಿಮೆಯಾದರೂ ಸರಿ ನೈಸರ್ಗಿಕ ಕಾಫಿ ಬೆಳೆ ಬೆಳೆಯಲು ಒತ್ತು ನೀಡಿ ಎಂದರು.
ವೇದಿಕೆಯಲ್ಲಿ ಸಮಾಜ ಸೇವಕ ಸಿದ್ದೇಶ್ ನಾಗೇಂದ್ರ, ಕಾಫಿ ಮಂಡಳಿ ಸಿಇಒ ಡಾ.ಕೊರ್ಮರಾವ್, ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ಪರಮೇಶ್, ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.