ಸ್ವಚ್ಛತೆ ಪ್ರೇರಣೆಗೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಅಗತ್ಯ

ಕಲಬುರಗಿ ಆದರ್ಶನಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಹೈಕೋರ್ಟ್​ ನ್ಯಾಯಾಧೀಶ ಆರ್​.ದೇವದಾಸ್​ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಶ್ರೀನಿವಾಸ ನವಲೆ, ಜಿ.ಎಲ್​.ಲಕ್ಷ್ಮೀನಾರಾಯಣ, ಬಸವರಾಜ ಚೇಂಗಟಿ, ಎಸ್​.ವಿ.ಪಸಾರ್​ ಇತರರಿದ್ದರು.
ಕಲಬುರಗಿ ಆದರ್ಶನಗರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಹೈಕೋರ್ಟ್​ ನ್ಯಾಯಾಧೀಶ ಆರ್​.ದೇವದಾಸ್​ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಶ್ರೀನಿವಾಸ ನವಲೆ, ಜಿ.ಎಲ್​.ಲಕ್ಷ್ಮೀನಾರಾಯಣ, ಬಸವರಾಜ ಚೇಂಗಟಿ, ಎಸ್​.ವಿ.ಪಸಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೈಕೋರ್ಟ್​ ನ್ಯಾಯಾಧೀಶ ನ್ಯಾ.ಆರ್​.ದೇವದಾಸ್​ ಹೇಳಿಕೆ
  • ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಶ್ವ ಪರಿಸರ ದಿನ
ಕಲಬುರಗಿ: ಪರಿಸರ ಸಂರಕ್ಷಣೆ ಕೇವಲ ಗಿಡ ನೆಡುವುದಕ್ಕೆ ಸೀಮಿತವಾಗಿಲ್ಲ. ಅದು ನಮ್ಮ ವೈಯಕ್ತಿಕ ಸ್ವಚ್ಛತೆ ಹಾಗೂ ನಿತ್ಯದ ನಡವಳಿಕೆಯಿಂದ ಆರಂಭವಾಗಬೇಕು. ಸ್ವಚ್ಛತೆ ಪ್ರೇರಣೆಗೆ ಮಕ್ಕಳಿಗೆ ಶೈಕ್ಷಣಿಕ ಪ್ರವಾಸ ಅಗತ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಆರ್​.ದೇವದಾಸ್​ ಹೇಳಿದರು.
ನಗರದ ಆದರ್ಶ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಗುಲ್ಬರ್ಗ ಜಿಲ್ಲಾ ನ್ಯಾಯವಾದಿಗಳ ಸಂ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲಾ ಆವರಣ ಸ್ವಚ್ಛವಾಗಿಟ್ಟುಕೊಳ್ಳಿ
ಮೊದಲು ನಮ್ಮ ದೇಹ, ಮನೆ ಹಾಗೂ ಶಾಲಾ ಆವರಣ ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು. ವಿವೇಕಾನಂದರ ಚಿಂತನೆಗಳನ್ನು ಸ್ಮರಿಸುತ್ತಾ, ಶಕ್ತಿಯುತ ದೇಹದಲ್ಲಿ ಶಕ್ತಿಯುತ ಮನಸ್ಸು ಇರುತ್ತದೆ. ಓದಿನ ಒತ್ತಡದ ನಡುವೆಯೂ ಮಕ್ಕಳಿಗೆ ಆಟ ಹಾಗೂ ವ್ಯಾಯಾಮ ಅತ್ಯಗತ್ಯ. ಮಕ್ಕಳಲ್ಲಿ ಸ್ವಚ್ಛತೆಯ ಪ್ರೇರಣೆ ಮೂಡಿಸಲು ಶೈಕ್ಷಣಿಕ ಪ್ರವಾಸದ ಅಗತ್ಯವಿದೆ ಎಂದರು.
ವಿದ್ಯಾರ್ಥಿಗಳನ್ನು ಬೇರೆ ನಗರಗಳಲ್ಲಿನ ಶಿಸ್ತು ಹಾಗೂ ಸ್ವಚ್ಛತೆಯುಳ್ಳ ಶಿಕ್ಷಣ ಸಂಸ್ಥೆಗಳಿಗೆ ಕರೆದೊಯ್ಯಬೇಕು. ಅಲ್ಲಿನ ಪರಿಸರ ನೋಡಿದಾಗ ಮಕ್ಕಳಲ್ಲಿ ತಮ್ಮ ಶಾಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪ್ರೇರಣೆ ದೊರೆಯಲಿದೆ ಎಂದರು.
ಗಿಡ ಮರಗಳ ಪೋಷಣೆ ಅಗತ್ಯ
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್​.ಲಕ್ಷ್ಮೀನಾರಾಯಣ ಮಾತನಾಡಿ, ಪರಿಸರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೆ, ಹಸಿ ಕಸ-ಒಣ ಕಸದ ವಿಲೇವಾರಿ ಹಾಗೂ ಗಿಡಮರಗಳ ಪೋಷಣೆ ನಿರಂತರವಾಗಿ ಮಾಡುವುದು ಪ್ರತಿಯೊಬ್ಬರ ಸಂವಿಧಾನಬದ್ಧ ಕರ್ತವ್ಯ ಎಂದು ಹೇಳಿದರು.
ಕಣ್ಣಿನ ಆರೋಗ್ಯಕ್ಕೆ ಹಸಿರು ಹಿತಕರವಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡ ಬೆಳೆಸಬೇಕು. ಪೋಷಕರ ಕನಸಿನಂತೆ ಕಷ್ಟಪಟ್ಟು ಓದಿ, ದೃಢವಾದ ಗುರಿಯೊಂದಿಗೆ ಉನ್ನತ ಹುದ್ದೆಗೇರುವುದೇ ಶಿಕ್ಷಕರಿಗೆ ನೀಡುವ ನಿಜವಾದ ಗುರುದಣೆ ಎಂದರು.
ಹಿರಿಯ ಸಿವಿಲ್​ ನ್ಯಾಯಾಧೀಶ ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಮಾತನಾಡಿ, ಕೇವಲ ಸಸಿ ನೆಡುವುದಷ್ಟೇ ಅಲ್ಲದೆ, ಸಾಲುಮರದ ತಿಮ್ಮಕ್ಕನವರಂತೆ ಗಿಡಗಳನ್ನು ನಿತ್ಯ ನೀರುಣಿಸಿ ಪೋಷಿಸುವುದು ಮುಖ್ಯ. ಭವಿಷ್ಯದ ಪೀಳಿಗೆಯ ಆರೋಗ್ಯಕರ ಜೀವನಕ್ಕಾಗಿ ಕಾನೂನು ಸೇವೆಗಳ ಪ್ರಾಧಿಕಾರವು ಒಟ್ಟು 5 ಕೋಟಿ ಸಸಿಗಳನ್ನು ನೆಡುವ ಬೃಹತ್​ ಯೋಜನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಸಾಲುಮರದ ತಿಮ್ಮಕ್ಕನ ಸ್ಮರಣೆ
ವಿಠ್ಠಲ್​ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, 1972ರಿಂದ ವಿಶ್ವದಾದ್ಯಂತ ಪರಿಸರ ದಿನ ಆಚರಿಸಿಕೊಂಡು ಬರಲಾಗುತ್ತಿದೆ. ಪರಿಸರ ಸಂರಕ್ಷಣೆ ನಮ್ಮ ಆದ್ಯತೆಯಾಗಬೇಕು. ಇಂದಿನ ವಿದ್ಯಾರ್ಥಿ ಹಂತದಲ್ಲೇ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಅತ್ಯಂತ ಅವಶ್ಯಕ. ಪರಿಸರದ ರಕ್ಷಣೆಯಲ್ಲೇ ನಮ್ಮ ರಕ್ಷಣೆಯೂ ಅಡಗಿದೆ. ಇಂದಿನ ದಿನಗಳಲ್ಲಿ ಲಾಂತರ ಗಿಡಗಳನ್ನು ನೆಟ್ಟು ಬೆಳೆಸಿದ ಪರಿಸರ ಪ್ರೇಮಿ, ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಪರಿಸರ ಸೇವೆ ನಾವೆಲ್ಲರೂ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಲಬುರಗಿ ಹೈಕೋರ್ಟ್​ನ ಅಪರ ಮಹಾವಿಲೇಖನಾಧಿಕಾರಿ ಬಸವರಾಜ ಚೇಂಗಟಿ, ಹೆಚ್ಚುವರಿ ರಿಜಿಸ್ಟ್ರರ್​ ಜುಡೀಷಿಯಲ್​ ಕುಮಾರ ಡಿ.ಕೆ, ನ್ಯಾಯವಾದಿಗಳ ಸಂ ಅಧ್ಯಕ್ಷ ಎಸ್​.ವಿ.ಪಸಾರ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಅಕ್ಕಣ್ಣ, ಕಲಬುರಗಿ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ ಹಂಚಿನಾಳ, ವಲಯ ಅರಣ್ಯ ಅಧಿಕಾರಿ ಗುರುರಾಜ, ಆದರ್ಶ ನಗರ ಸರ್ಕಾರಿ ಪದವಿ ಪೂರ್ವ ಕಾಲೇಜು (ಕೆಪಿಎಸ್​) ಪ್ರಾಂಶುಪಾಲ ರಾಜು ಗಂಗಾಧರ, ಕೆ.ಪಿ.ಎಸ್​. ಎಂ.ಬಿ. ನಗರ ಎಸ್​ಡಿಎಂಸಿ ಅಧ್ಯಕ್ಷ ರಾಮಚಂದ್ರ ಕಾಂಬಳೆ ಇತರರಿದ್ದರು.
"

ಕಲಬುರಗಿ ಜಿಲ್ಲೆಯಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ.5ಕ್ಕಿಂತಲೂ ಕಡಿಮೆಯಿದೆ. ಹಸಿರು ಕೊರತೆಯಿಂದಾಗಿ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.

— ಶ್ರೀನಿವಾಸ ನವಲೆ, ಸದಸ್ಯ ಕಾರ್ಯದರ್ಶಿ, ಕಾನೂನು ಸೇವೆಗಳ ಪ್ರಾಧಿಕಾರ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net