ಶಿಕ್ಷಣವೇ ಜೀವನ ಉನ್ನತಿಗೆ ದಾರಿ

ತಿ.ನರಸೀಪುರ ಸಮೀಪದ ತಾಯೂರು ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಬೋಧನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿದರು. ಮಾನಸ, ಎಂ.ಮಮತಾ, ಡಾ.ಪ್ರೀತಿ ಎನ್. ತಲ್ಲೂರ್, ಡಾ.ಹನುಮಂತಪ್ಪ ಮಕರಿ ಇತರರು ಇದ್ದರು.
ತಿ.ನರಸೀಪುರ ಸಮೀಪದ ತಾಯೂರು ಗ್ರಾಮದ ಟಿ.ಎಸ್.ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ಬೋಧನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಜೆಡಿಎಸ್ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಮಾತನಾಡಿದರು. ಮಾನಸ, ಎಂ.ಮಮತಾ, ಡಾ.ಪ್ರೀತಿ ಎನ್. ತಲ್ಲೂರ್, ಡಾ.ಹನುಮಂತಪ್ಪ ಮಕರಿ ಇತರರು ಇದ್ದರು.
Published on
ತಿ.ನರಸೀಪುರ: ಪ್ರಸ್ತುತ ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ವಿಜ್ಞಾನದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜೆಡಿಎಸ್ ರಾಜ್ಯ ಮಾಧ್ಯಮ ವಕ್ತಾರ ತಾಯೂರು ಪ್ರಕಾಶ್ ಹೇಳಿದರು.

ಸಮೀಪದ ತಾಯೂರು ಗ್ರಾಮದಲ್ಲಿನ ಟಿ.ಎಸ್. ಸುಬ್ಬಣ್ಣ ಪ್ರೌಢಶಾಲೆಯಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ವಿಜ್ಞಾನ ಬೋಧನಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಶಿಕ್ಷಣದ ಮೂಲಕ ಮನಸ್ಸುಗಳಿಗೆ ಪ್ರೇರಣೆ ನೀಡಿ, ಜೀವನವನ್ನು ಉನ್ನತಿಗೊಳಿಸುವುದೇ ಇಗ್ನೈಟಿಂಗ್ ಮೈಂಡ್ಸ್ ಟು ಇನ್‌ಸ್ಪ್ಪೈರ್ ಲೈವ್ಸ್ ಥ್ರೂ ಎಜುಕೇಶನ್’ ಔಟ್‌ರೀಚ್ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

ಕೋವಿಡ್ 19 ಸಂದರ್ಭದಲ್ಲಿ ವಿಜ್ಞಾನದ ಮಹತ್ವ ಎಲ್ಲರಿಗೂ ಸ್ಪಷ್ಟವಾಗಿ ಅರಿವಾಯಿತು. ಕೋವಿಡ್‌ಗೆ ಮೊದಲು ನಾವು ದೇವಾಲಯಗಳ ಮೇಲೆ ಹೆಚ್ಚಿನ ಅವಲಂಬನೆ ಹೊಂದಿದ್ದೇವು. ಆದರೆ ಆ ಸಂಕಷ್ಟದ ಕಾಲದಲ್ಲಿ ದೇವಾಲಯಗಳು ಮುಚ್ಚಿದ್ದರೂ ಆಸ್ಪತ್ರೆಗಳ ಬಾಗಿಲು ತೆರೆದಿದ್ದವು. ವಿಜ್ಞಾನ ಲಸಿಕೆ ಕಂಡುಹಿಡಿದು ಮಾನವ ಜೀವನವನ್ನು ರಕ್ಷಿಸಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮಾಂತರ ಶಾಲೆಯ ವಿದ್ಯಾರ್ಥಿಗಳಿಗೆ ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಉಪನ್ಯಾಸಕರು ಆಗಮಿಸಿ ವಿಜ್ಞಾನ ಜ್ಞಾನ ಹಾಗೂ ಪಠ್ಯ ಬೋಧನೆ ನೀಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಪ್ರೀತಿ ಮಾತನಾಡಿ, ಮಕ್ಕಳು ಮೊದಲಿಗೆ ಸಂಸ್ಕಾರ ಕಲಿಯಬೇಕು. ಈ ಶಾಲೆಯಲ್ಲಿ ಶಿಸ್ತು, ವಿನಯ ಹಾಗೂ ಮಾನವೀಯತೆ ಕಾಣುತ್ತಿರುವುದು ಸಂತೋಷ ತಂದಿದೆ. ಇಲ್ಲಿನ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಸ್ಪಷ್ಟವಾಗಿ ಕಾಣುತ್ತಿದ್ದು, ಆ ಆಸಕ್ತಿಯನ್ನು ಸರಿಯಾದ ದಾರಿಯಲ್ಲಿ ಬಳಸಿಕೊಳ್ಳಬೇಕು ಎಂದರು.
ಅಲ್ಲದೆ ನಿವೃತ್ತಿಯಾದರೂ ಮಕ್ಕಳಿಗಾಗಿ ಸೇವೆ ಸಲ್ಲಿಸುತ್ತಿರುವ ಮಹೇಶ್ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರೊ. ಡಿ.ಕೆ.ರವಿಶಂಕರ್ ಮಾತನಾಡಿ, ಮೂರು ದಿನಗಳ ವಿಜ್ಞಾನ ಬೋಧನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಮುಂದಿನ ವರ್ಷ ಇದನ್ನು ವಾರಪೂರ್ತಿ ನಡೆಸುವ ಉದ್ದೇಶವಿದೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮೇಲೆ ಆಸಕ್ತಿ ಮೂಡಿಸಲು ನಿರಂತರ ಪ್ರಯತ್ನ ನಡೆಸಲಾಗುವುದು ಎಂದರು.

ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ್ ಮಾತನಾಡಿ, ಸುಬ್ಬಣ್ಣ ಅವರು ಗ್ರಾಮಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂಬ ದೃಢ ಸಂಕಲ್ಪ ಹೊಂದಿದ್ದರು. ಸರ್ಕಾರ ಇಂದು ಕಾಣುತ್ತಿರುವ ಶಿಕ್ಷಣದ ಕನಸನ್ನು ಅವರು ಆಗಲೇ ಕಂಡಿದ್ದರು. ಸಾರಿಗೆ ಸೌಲಭ್ಯಗಳಿಲ್ಲದ ಊರುಗಳಲ್ಲಿ ಶಾಲೆಗಳನ್ನು ತೆರೆದರು. 3,600 ಜನಸಂಖ್ಯೆ ಹೊಂದಿದ್ದ ತಾಯೂರು ಗ್ರಾಮದಲ್ಲಿ ಆಗ ಕೇವಲ ಇಬ್ಬರು ಪದವೀಧರರು ಮಾತ್ರ ಇದ್ದರು. 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರು ಶಾಲೆ ಆರಂಭಿಸಿದ್ದರು ಎಂದು ಸ್ಮರಿಸಿದರು.

ಗಾಂಧೀವಾದಿಯಾಗಿದ್ದ ಸುಬ್ಬಣ್ಣ ಅವರ ಗುರಿ, ಪಟ್ಟಣದ ಶಿಕ್ಷಣ ಸೌಲಭ್ಯಗಳು ಹಳ್ಳಿಯ ಮಕ್ಕಳಿಗೂ ದೊರಕಬೇಕು ಎಂಬುದಾಗಿತ್ತು. ಮಕ್ಕಳು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಜೀವನದಲ್ಲಿ ಅಕ್ಷರಜ್ಞಾನ ಅತ್ಯಂತ ಮುಖ್ಯ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕರಾದ ಡಾ.ಹನುಮಂತಪ್ಪ ಮಕರಿ, ಮಾನಸ ಹಾಗೂ ಮಮತಾ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಟಿಎಸ್‌ಎಸ್‌ಎಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಲೋಲಕುಮಾರ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಎಸ್.ನಾಗಸುಂದರ, ಖಜಾಂಚಿ ನಾಗೇಂದ್ರ ಪ್ರಸಾದ್, ಶಿಕ್ಷಕರಾದ ಬಿ. ನಾಗರಾಜು, ಎಸ್. ಜಯಶಂಕರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net