ಸಂಪಾದಕೀಯ: ಮರಳು ಮಾಫಿಯಾದ ಹಾವಳಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಕರ್ನಾಟಕದಲ್ಲಿ ಮರಳು ಮಾಫಿಯಾ ವಿರುದ್ಧ ಲೋಕಾಯುಕ್ತರು ಇತ್ತೀಚೆಗೆ ಕಠಿಣ ಕಾರ್ಯಾಚರಣೆ ಆರಂಭಿಸಿರುವುದು ಸ್ವಾಗತಾರ್ಹ ಹೆಜ್ಜೆ. ನೈಸರ್ಗಿಕ ಸಂಪನ್ಮೂಲಗಳ ಲೂಟಿ ಮತ್ತು ಭ್ರಷ್ಟಾಚಾರಕ್ಕೆ ಲಗಾಮು ಹಾಕಲು ಇದು ಅತ್ಯಗತ್ಯವಾಗಿತ್ತು. ಮೇ 20ರಂದು ಲೋಕಾಯುಕ್ತದ 20 ಅಧಿಕಾರಿಗಳು ಮತ್ತು 90 ಸಿಬ್ಬಂದಿ ಬಾಗಲಕೋಟೆ ಜಿಲ್ಲೆಯ 24 ಪ್ರದೇಶಗಳ 36 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೃಷ್ಣಾ ನದಿ ಪಾತ್ರದಲ್ಲಿ 65 ಟಿಪ್ಪರ್, 18 ಹಿಟಾಚಿ, 14 ಯಾಂತ್ರಿಕ ದೋಣಿ, 6 ಟಿಪ್ಪರ್, ಜೆಸಿಬಿಗಳನ್ನು ವಶಕ್ಕೆ ಪಡೆದಿದ್ದಾರೆ. ಮರಳು ಮಾಫಿಯಾ ಕೇವಲ ಕೆಲವು ವ್ಯಕ್ತಿಗಳ ಕಾನೂನುಬಾಹಿರ ಚಟುವಟಿಕೆಯಲ್ಲ, ಅದೊಂದು ವ್ಯವಸ್ಥಿತ ಜಾಲವಾಗಿ ಹಲವು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ರಾಜಕೀಯ ಆಶ್ರಯ ಇದಕ್ಕೆ ದೊಡ್ಡ ಕವಚವಾಗಿದೆ. ಸಮಾಜದ ದುಷ್ಟಶಕ್ತಿಗಳು ಮತ್ತು ಮಾಫಿಯಾ ಕಾನೂನಿಗೆ ಹೆದರದೆ, ನಿಯಮಗಳಿಗೆ ಬಗ್ಗದೆ ಈ ಬಗೆಯ ಕೃತ್ಯಗಳಲ್ಲಿ ತೊಡಗಿಕೊಂಡಿರುವುದು ಆತಂಕಕಾರಿ ವಿದ್ಯಮಾನ. ಇತ್ತೀಚಿನ ವರ್ಷಗಳಲ್ಲಿ ಮರಳು ಮಾಫಿಯಾ ನದಿಗಳ ಒಡಲನ್ನು ವೇಗವಾಗಿ ಖಾಲಿ ಮಾಡುತ್ತಿದೆ. ಪರಿಣಾಮ, ನದಿಗಳ ಹರಿವಿನ ದಿಕ್ಕು ಬದಲಾಗಿ, ಮಳೆಗಾಲದಲ್ಲಿ ಕೃತಕ ಪ್ರವಾಹ ಉಂಟಾಗುತ್ತಿದೆ. ನದಿ ತೀರದ ಕೃಷಿ ಭೂಮಿಗಳು ಕೊಚ್ಚಿಹೋಗುತ್ತಿವೆ. ನದಿಯ ಪರಿಸರ ವ್ಯವಸ್ಥೆ ಹಾಳಾಗಿ ಮೀನು ಹಾಗೂ ಇತರ ಜಲಚರಗಳ ಸಂತತಿ ನಾಶವಾಗುತ್ತಿದೆ.

ಅನುಮತಿ ಇಲ್ಲದ ನದಿ ಪಾತ್ರಗಳು, ಕರಾವಳಿ ತೀರಗಳು ಮತ್ತು ಕೃಷಿ ಭೂಮಿಗಳಲ್ಲಿ ಯಂತ್ರಗಳನ್ನು ಬಳಸಿ ಹಗಲು-ರಾತ್ರಿ ಎನ್ನದೆ ಮರಳು ಎತ್ತಲಾಗುತ್ತದೆ. ಈ ದಂಧೆಯನ್ನು ವಿರೋಧಿಸುವ ಪ್ರಾಮಾಣಿಕ ಅಧಿಕಾರಿಗಳು, ಪರಿಸರವಾದಿಗಳು ಮತ್ತು ಸ್ಥಳೀಯ ಗ್ರಾಮಸ್ಥರ ಮೇಲೆ ದೈಹಿಕ ಹಲ್ಲೆ ಅಥವಾ ಕೊಲೆ ಮಾಡುವ ಮಟ್ಟಿಗೆ ಮಾಫಿಯಾ ಬಲಿಷ್ಠವಾಗಿದೆ. ಮರಳು ಮಾಫಿಯಾದಿಂದಾಗಿ ರಾಜ್ಯ ಭೀಕರ ಪರಿಸರ ಮತ್ತು ಆರ್ಥಿಕ ನಷ್ಟವನ್ನು ಅನುಭವಿಸುತ್ತಿದೆ. ಲೋಕಾಯುಕ್ತ ತಂಡದ ಪ್ರಸ್ತುತ ಕಾರ್ಯಾಚರಣೆಯು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಆದರೆ ಈ ಹೋರಾಟ ಕೇವಲ ತಾತ್ಕಾಲಿಕ ದಾಳಿಯಾಗದೆ, ವ್ಯವಸ್ಥಿತ ಬದಲಾವಣೆಗೆ ನಾಂದಿಯಾಗಬೇಕಿದೆ.

ಹಿಟಾಚಿ, ಜೆಸಿಬಿ ಮತ್ತಿತರ ಯಂತ್ರೋಪಕರಣ, ಟಿಪ್ಪರ್, ಟ್ರಾ್ಯಕ್ಟರ್​ಗಳನ್ನು ನದಿಗೆ ಇಳಿಸಬಾರದು, ನದಿಯಲ್ಲಿ ಎರಡು ಅಡಿಗಿಂತ ಹೆಚ್ಚು ಆಳ ತೋಡಬಾರದು, ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪರವಾನಗಿ ಪಡೆದಷ್ಟು ಮರಳು ಸಾಗಿಸಬೇಕು ಎಂಬೆಲ್ಲ ನಿಯಮಗಳಿದ್ದರೂ, ಅವುಗಳನ್ನು ಗಾಳಿಗೆ ತೂರಲಾಗಿದೆ. ನದಿಯ ಒಡಲು ಮಲಿನವಾದರೆ, ಅದರಿಂದ ಗಂಭೀರ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಪ್ರಕೃತಿಯನ್ನು ಶೋಷಿಸಬಾರದು ಎಂಬ ಎಚ್ಚರಿಕೆಯನ್ನು ನಿಸರ್ಗವೇ ಹಲವಾರು ಬಾರಿ ನೀಡಿದರೂ ಮನುಷ್ಯ ಪಾಠ ಕಲಿಯುತ್ತಿಲ್ಲ. ಇಂಥ ಕೃತ್ಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ವಾಸ್ತವವನ್ನು ಮರೆತು, ಕೆಲ ಪ್ರಭಾವಿಗಳು ಅಕ್ರಮಕ್ಕೆ ಸಹಕರಿಸುತ್ತಿರುವುದು ಸರಿಯಲ್ಲ. ಮುಖ್ಯವಾಗಿ, ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಕಾನೂನಿನ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಂಡಾಗ ಮಾತ್ರ, ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಲು ಸಾಧ್ಯ. ಕೃಷ್ಣೆಯನ್ನು, ಇತರ ನದಿಗಳನ್ನು ಉಳಿಸಿಕೊಳ್ಳುವ ಸಾಮೂಹಿಕ ಪ್ರಯತ್ನ ನಡೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net