ಸಂಪಾದಕೀಯ: ಹುದ್ದೆ ಭರ್ತಿ ತುರ್ತಾಗಿ ಆಗಲಿ

Editorial
Editorial
Published on
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಅನುಮೋದನೆ ನೀಡುವ ಮೂಲಕ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿದೆ. ವಿವಿಧ ಇಲಾಖೆಗಳು ಸೇರಿದಂತೆ ಒಟ್ಟಾರೆ 2,84,881 ಹುದ್ದೆಗಳು ಖಾಲಿ ಇದ್ದು, ಈ ಪೈಕಿ 56,432 ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ವಿಧಾನ ಪರಿಷತ್​ನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಈ ಮಾಹಿತಿ ನೀಡಿದ್ದಾರೆ. ‘ವಿವಿಧ ಇಲಾಖೆಗಳಲ್ಲಿ 1,16,097, ವಿವಿಧ ನಿಗಮ ಮಂಡಳಿಗಳಲ್ಲಿ 1,01,420, ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳು ಖಾಲಿ ಇವೆ. ಈಗಾಗಲೇ 24,300 ಹುದ್ದೆಗಳ ನೇವಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ. ಕಲ್ಯಾಣ ಕರ್ನಾಟಕದ 371ಜೆ ಅಡಿ 32,132 ಹುದ್ದೆಗಳ ಭರ್ತಿಯಾಗಬೇಕಿದೆ. ಒಟ್ಟು 56,432 ಹುದ್ದೆಗಳ ನೇಮಕಾತಿಗೆ ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಸಿಎಂ ಹೇಳಿದ್ದಾರೆ. ತಜ್ಞ ವೈದ್ಯರು ಸೇರಿ 3 ಸಾವಿರ ವೈದ್ಯರ ಹುದ್ದೆ ಖಾಲಿ ಇದ್ದು, 1500 ಹುದ್ದೆಗಳನ್ನು ಜನವರಿಯೊಳಗೆ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಆಶ್ವಾಸನೆ ನೀಡಿದ್ದಾರೆ.
ಒಳ ಮೀಸಲು ಜಾರಿ ಹಿನ್ನೆಲೆಯಲ್ಲಿ ವಿಳಂಬಗೊಂಡಿದ್ದ ನಾನಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹಂತಹಂತವಾಗಿ ನಡೆಸಲು ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ 24,300 ಹುದ್ದೆಗಳ ಭರ್ತಿ ನಡೆಯಲಿದ್ದು, 2026ರ ವರ್ಷಾರಂಭದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಕಲ್ಯಾಣ ಕರ್ನಾಟಕ ಭಾಗದಲ್ಲಂತೂ ಎಲ್ಲ ಇಲಾಖೆಗಳಲ್ಲೂ ಖಾಲಿ ಹುದ್ದೆಗಳು ದೊಡ್ಡ ಪ್ರಮಾಣದಲ್ಲಿವೆ. 371ಜೆ ಅಡಿ ಈ ಭಾಗದಲ್ಲಿ 32,132 ಹುದ್ದೆಗಳ ಭರ್ತಿ ನಡೆಯಲಿರುವುದರಿಂದ ಉದ್ಯೋಗಾಕಾಂಕ್ಷಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 79,694 ಹುದ್ದೆಗಳು ಖಾಲಿ ಇವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,572, ಒಳಾಡಳಿತದಲ್ಲಿ 28,188, ಉನ್ನತ ಶಿಕ್ಷಣದಲ್ಲಿ 13,599, ಪಶುಸಂಗೋಪನೆಯಲ್ಲಿ 11,020, ಕಂದಾಯ ಇಲಾಖೆಯಲ್ಲಿ 10,867, ಗ್ರಾಮೀಣಾಭಿವೃದ್ಧಿ-ಪಂಚಾಯತ್ ರಾಜ್​ನಲ್ಲಿ 10,504, ಪರಿಶಿಷ್ಟ ಜಾತಿಗಳ ಕಲ್ಯಾಣ ಇಲಾಖೆಯಲ್ಲಿ 9,646 ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 8,525 ಹುದ್ದೆಗಳು ಭರ್ತಿ ಆಗಬೇಕಿವೆ.
ಬಹಳಷ್ಟು ಹುದ್ದೆಗಳು ಖಾಲಿ ಇರುವುದರಿಂದ ಇರುವ ಸಿಬ್ಬಂದಿಯ ಮೇಲೆ ಹೆಚ್ಚಿನ ಕಾರ್ಯಭಾರ, ದೈನಂದಿನ ಕೆಲಸಗಳಲ್ಲಿ ವಿಳಂಬ ಸೇರಿ ಅನೇಕ ಅಪಸವ್ಯಗಳು ಕಂಡುಬಂದಿವೆ. ಆಡಳಿತ ಯಂತ್ರವೇ ಅತಿ ನಿಧಾನ ಬಗೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಪರಿಸ್ಥಿತಿ ಬದಲಾಗಬೇಕಿದೆ. ಸರ್ಕಾರದ ಎಲ್ಲ ಇಲಾಖೆಗಳು ಸೇರಿ ಒಟ್ಟಾರೆ ಆಡಳಿತಯಂತ್ರ ಸುಗಮವಾಗಿ ಮತ್ತು ಚುರುಕಿನಿಂದ ಕೆಲಸ ಮಾಡಬೇಕಾದರೆ ಮಂಜೂರಾಗಿರುವಷ್ಟು ಸಿಬ್ಬಂದಿ ಭರ್ತಿಯಾಗಬೇಕು. ಹಲವು ವರ್ಷಗಳ ಆಶ್ವಾಸನೆಯನ್ನು ಸರ್ಕಾರ ಈಗ ಈಡೇರಿಸಲು ಹೊರಟಿರುವುದು ಸ್ವಾಗತಾರ್ಹ. ಆದರೆ, ನೇಮಕಾತಿ ಪ್ರಕ್ರಿಯೆ ತುರ್ತಾಗಿ ನಡೆದು, ಸಿಬ್ಬಂದಿ ನಿಯೋಜನೆ ಆಗಲಿ. ಅಲ್ಲದೆ, ಹೊಸ ನೇಮಕಾತಿಗಳ ವೇಳೆ ಯಾವುದೇ ಗೊಂದಲ ಏರ್ಪಡದಂತೆ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವುದು ಸರ್ಕಾರದ ಜವಾಬ್ದಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net