ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಇ-ಸ್ವತ್ತು ದಾಖಲೆ ಪಡೆಯಲು ಅಲೆದಾಡಿ ಬೇಸತ್ತ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ಇಂದಿನ ಆಡಳಿತ ವ್ಯವಸ್ಥೆಯ ಕ್ರೌರ್ಯ ಮತ್ತು ಸಂವೇದನಾಶೂನ್ಯತೆಗೆ ಹಿಡಿದ ಕನ್ನಡಿಯಾಗಿದೆ. ಒಬ್ಬ ರೈತ ತನ್ನದೇ ಜಮೀನಿನ ಹಕ್ಕಿನ ದಾಖಲೆಗಾಗಿ ಕಚೇರಿಗಳ ಮೆಟ್ಟಿಲು ಹತ್ತಿ, ಅಲ್ಲಿನ ಸಿಬ್ಬಂದಿಯ ಅಸಹಕಾರದಿಂದ ನೊಂದು ಪ್ರಾಣ ಕಳೆದುಕೊಳ್ಳಲು ಮುಂದಾಗುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿ. ಇದು ಕೇವಲ ಒಂದು ತಾಲೂಕಿನ ಸಮಸ್ಯೆಯಲ್ಲ, ಬಹುತೇಕ ಜಿಲ್ಲೆಗಳ ವ್ಯವಸ್ಥೆಯ ಪ್ರತಿಬಿಂಬ.