ಸಂಪಾದಕೀಯ: ಇ&ಕೆವೈಸಿ ಕಿರಿಕಿರಿ ನಿಲ್ಲಲಿ

Editorial | ಸಂಪಾದಕೀಯ: ಇ&ಕೆವೈಸಿ ಕಿರಿಕಿರಿ ನಿಲ್ಲಲಿ
Editorial | ಸಂಪಾದಕೀಯ: ಇ&ಕೆವೈಸಿ ಕಿರಿಕಿರಿ ನಿಲ್ಲಲಿ
Published on
ಬಡ ಕುಟುಂಬಗಳಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ತಲುಪಿಸುವ ಪಡಿತರ ವ್ಯವಸ್ಥೆಯು ಕಲ್ಯಾಣ ರಾಜ್ಯವೊಂದರ ಸಾಮಾಜಿಕ ಭದ್ರತೆಯ ಅಡಿಪಾಯ. ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಿ ಆಡಳಿತದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದಿರುವ "ಇ&ಕೆವೈಸಿ' ನಿಯಮವು ಪ್ರಸ್ತುತ ಬಡವರ ಪಾಲಿಗೆ ದೊಡ್ಡ ಕಿರಿಕಿರಿಯಾಗಿ ಪರಿಣಮಿಸಿದೆ. ಸಾರ್ವಜನಿಕ ಸೇವೆಗಳನ್ನು ಸುಲಭಗೊಳಿಸಬೇಕಾದ ತಂತ್ರಜ್ಞಾನವು, ಸೂಕ್ತ ಪೂರ್ವಸಿದ್ಧತೆಯಿಲ್ಲದೆ ಜಾರಿಯಾದಾಗ ಹೇಗೆ ಜನಜೀವನಕ್ಕೆ ಕಂಟಕವಾಗಬಲ್ಲದು ಎಂಬುದಕ್ಕೆ ಪ್ರಸ್ತುತ ಪಡಿತರ ಕೇಂದ್ರಗಳ ಮುಂದೆ ಕಂಡುಬರುತ್ತಿರುವ ಗೊಂದಲಗಳೇ ಸಾಕ್ಷಿ. ಮೂಲಸೌಕರ್ಯಗಳ ಕೊರತೆಯಿಂದಾಗಿ ರಾಜ್ಯಾದ್ಯಂತ ಲಕ್ಷಾಂತರ ಬಡವರು, ದಿನಗೂಲಿ ಕಾರ್ಮಿಕರು, ವೃದ್ಧರು ಹಾಗೂ ಅಂಗವಿಕಲರು ದಿನವಿಡೀ ಸಾಲಿನಲ್ಲಿ ನಿಲ್ಲುವಂತಾಗಿದೆ.
ಈ ಇ&ಕೆವೈಸಿ ಪ್ರಕ್ರಿಯೆಯಲ್ಲಿ ಎದುರಾಗುತ್ತಿರುವ ಅತಿ ದೊಡ್ಡ ತೊಡಕೆಂದರೆ ನಿರಂತರವಾಗಿ ಕುಸಿಯುತ್ತಿರುವ ಸರ್ಕಾರದ ಸರ್ವರ್​ ವ್ಯವಸ್ಥೆ ಮತ್ತು ಬಯೋಮೆಟ್ರಿಕ್​ ತಾಂತ್ರಿಕ ಅಡಚಣೆಗಳು. ಬೆಳಗಿನ ಜಾವದಿಂದಲೇ ಪಡಿತರ ಹಾಗೂ ಆಧಾರ್​ ಕೇಂದ್ರಗಳ ಮುಂದೆ ಸಾಲಿನಲ್ಲಿ ನಿಲ್ಲುವವರು ತಮ್ಮ ಅಂದಿನ ದುಡಿಮೆಯನ್ನು ಕಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಶ್ರಮಜೀವಿಗಳು ಹಾಗೂ ಇಳಿವಯಸ್ಸಿನವರ ಬೆರಳಚ್ಚುಗಳು (ಫಿಂಗರ್​ಪ್ರಿಂಟ್​) ಕಠಿಣ ದೈಹಿಕ ಶ್ರಮದಿಂದಾಗಿ ಅಥವಾ ವಯೋಸಹಜವಾಗಿ ಸವೆದು ಹೋಗಿರುವುದರಿಂದ, ಬಯೋಮೆಟ್ರಿಕ್​ ಯಂತ್ರಗಳು ಅವರ ಗುರುತನ್ನು ಸ್ವೀಕರಿಸುತ್ತಿಲ್ಲ. ಇದರಿಂದಾಗಿ ದಶಕಗಳಿಂದ ಅರ್ಹರಾಗಿದ್ದು ಪಡಿತರ ಪಡೆಯುತ್ತಿದ್ದ ಬಡ ಕುಟುಂಬಗಳು, ಕೇವಲ ತಾಂತ್ರಿಕ ಲೋಪಗಳ ಕಾರಣಕ್ಕಾಗಿ ಆಹಾರ ಧಾನ್ಯದಿಂದ ವಂಚಿತವಾಗುವ ಭೀತಿ ಎದುರಿಸುತ್ತಿವೆ.
ಇನ್ನೂ ಅರ್ಧಕ್ಕಿಂತ ಹೆಚ್ಚು ಪಡಿತರದಾರರು ಈ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ ಎಂಬುದು ಸಮಸ್ಯೆಯ ತೀವ್ರತೆಯನ್ನು ಬಿಂಬಿಸುತ್ತದೆ. ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ಮಾಧ್ಯಮಗಳ ಒತ್ತಡಕ್ಕೆ ಮಣಿದು ಸರ್ಕಾರವು ಇ&ಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆಯಾದರೂ, ಕೇವಲ ಗಡುವು ಹೆಚ್ಚಿಸುವುದರಿಂದ ಮೂಲ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಪ್ರಮುಖ ಸಮಸ್ಯೆಯಾಗಿರುವ ಸರ್ವರ್​ ಸಾಮರ್ಥ್ಯವನ್ನು ತಕ್ಷಣವೇ ಹೆಚ್ಚಿಸುವುದು ಹಾಗೂ ತಾಂತ್ರಿಕ ಅಡೆತಡೆಗಳನ್ನು ಸಂಪೂರ್ಣವಾಗಿ ನಿವಾರಿಸುವುದು ಸರ್ಕಾರದ ಪ್ರಥಮ ಆದ್ಯತೆಯಾಗಬೇಕು. ತಂತ್ರಜ್ಞಾನವು ನಾಗರಿಕರಿಗೆ ಸೇವೆ ತಲುಪಿಸುವ ಮಾಧ್ಯಮವಾಗಬೇಕೇ ಹೊರತು, ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕುವಂತಾಗಬಾರದು.
ಇಂತಹ ಸೂಕ್ಷ್ಮ ವಿಷಯಗಳಲ್ಲಿ ಆಡಳಿತ ವ್ಯವಸ್ಥೆಯು ಕಟ್ಟುನಿಟ್ಟಿನ ನಿಯಮಗಳಿಗಿಂತ ಮಾನವೀಯ ದೃಷ್ಟಿಕೋನಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಅನಾರೋಗ್ಯ ಪೀಡಿತರಿಗೆ ಮತ್ತು ಬೆರಳಚ್ಚು ಸಿಗದ ವೃದ್ಧರಿಗೆ ಕಣ್ಣಿನ ಪಾಪೆ (ಐರಿಸ್​ ಸ್ಕಾನ್​) ಅಥವಾ ಮುಖಚಹರೆ ಗುರುತಿಸುವಿಕೆ (ಫೇಸ್​ ರಿಕಗ್ನಿಷನ್​) ಮೂಲಕ ಇ&ಕೆವೈಸಿ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಪಡಿತರ ಸಿಬ್ಬಂದಿಯೇ ವಯೋವೃದ್ಧರು ಮತ್ತು ಅಂಗವಿಕಲರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುವ ವಿಶೇಷ ವ್ಯವಸ್ಥೆಯಾಗಬೇಕು. ಪಡಿತರ ಪಡೆಯುವುದು ಬಡವರ ಮೂಲಭೂತ ಹಕ್ಕಾಗಿದ್ದು, ತಾಂತ್ರಿಕ ನೆಪ ಒಡ್ಡಿ ಯಾವುದೇ ಒಬ್ಬ ಅರ್ಹ ಪ್ರಜೆಯನ್ನೂ ಈ ಯೋಜನೆಯಿಂದ ಹೊರಗಿಡಬಾರದು. ಸರ್ಕಾರ ತಕ್ಷಣವೇ ಸರ್ವರ್​ ದೋಷಗಳನ್ನು ಸರಿಪಡಿಸಿ, ಗೊಂದಲಗಳಿಗೆ ತೆರೆ ಎಳೆದು ಪ್ರತಿಯೊಬ್ಬ ಬಡ ನಾಗರಿಕನ ಆಹಾರ ಭದ್ರತೆಯನ್ನು ಖಾತ್ರಿಪಡಿಸಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net