

ಕಳೆದ ಒಂದು ವರ್ಷದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಲು ಸರ್ಕಾರ ಹತ್ತಾರು ಸುಧಾರಣೆಗಳನ್ನು ತಂದಿದೆ. ನಕಲಿ ದಾಖಲೆಗಳಿಗೆ ಕಡಿವಾಣ ಹಾಕಲು ‘ಇ-ಆಸ್ತಿ’ ಕಡ್ಡಾಯಗೊಳಿಸಿರುವುದು, ಗ್ರಾಮೀಣ ಭಾಗದಲ್ಲಿ ವಂಚನೆ ತಡೆಯಲು ಇ-ಸ್ವತ್ತು ಫಾರಂ 9 ಮತ್ತು 11 ಕಡ್ಡಾಯಗೊಳಿಸಿರುವುದು ಕ್ರಾಂತಿಕಾರಿ ಬದಲಾವಣೆಗಳೇ ಸರಿ. ಮಾರ್ಗಸೂಚಿ ದರ ಪರಿಷ್ಕರಣೆ ಮತ್ತು ಕಂದಾಯ ಭೂಮಿಯ ಸಕ್ರಮದಂತಹ ಕ್ರಮಗಳು ಸರ್ಕಾರಕ್ಕೆ ಆದಾಯ ತರುವುದರ ಜತೆಗೆ ಸಾರ್ವಜನಿಕ ಹಿತಾಸಕ್ತಿಯನ್ನೂ ಒಳಗೊಂಡಿವೆ.
ಆದರೆ, ಈ ಎಲ್ಲ ಜನೋಪಯೋಗಿ ಘೊಷಣೆಗಳು ಸಾಮಾನ್ಯ ಜನರನ್ನು ತಲುಪುವಲ್ಲಿ ವಿಫಲವಾಗುತ್ತಿರುವುದು ಕಳವಳಕಾರಿ ಸಂಗತಿ. ಇಂದು ಈ ಎಲ್ಲ ಯೋಜನೆಗಳು ಕೆಳಮಟ್ಟದಲ್ಲಿ ಸಮರ್ಪಕವಾಗಿ ಜಾರಿಯಾಗದೆ ಕೇವಲ ಸರ್ಕಾರದ ಕಡತಗಳಿಗೆ ಅಥವಾ ಸಚಿವರ ಹೇಳಿಕೆಗಳಿಗೆ ಸೀಮಿತವಾಗಿರುವಂತೆ ಕಾಣುತ್ತಿವೆ. ಹೈಟೆಕ್ ಎನ್ನಲಾದ ತಂತ್ರಾಂಶಗಳಲ್ಲಿ ಕಂಡುಬರುತ್ತಿರುವ ತಾಂತ್ರಿಕ ತೊಂದರೆಗಳು ಸಾರ್ವಜನಿಕರನ್ನು ಕಚೇರಿಗಳಿಂದ ಕಚೇರಿಗಳಿಗೆ ಅಲೆಯುವಂತೆ ಮಾಡುತ್ತಿವೆ.
ಉದಾಹರಣೆಗೆ, ಬೆಂಗಳೂರಿನಲ್ಲಿ ಲಕ್ಷಾಂತರ ಆಸ್ತಿಗಳಿಗೆ ಡಿಜಿಟಲ್ ಇ-ಖಾತಾ ವಿತರಿಸುವ ಗುರಿ ಹೊಂದಲಾಗಿದ್ದರೂ, ಸರ್ವರ್ ಸಮಸ್ಯೆ ಹಾಗೂ ದಾಖಲೆಗಳ ಹೊಂದಾಣಿಕೆ ಕೊರತೆಯಿಂದಾಗಿ ಸಾಮಾನ್ಯ ಜನರಿಗೆ ಇದು ಇಂದಿಗೂ ಮರೀಚಿಕೆಯಾಗಿದೆ. ಗ್ರಾಮೀಣ ಭಾಗದ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಇ-ಸ್ವತ್ತು ವ್ಯವಸ್ಥೆ ಈಗಲೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಇದರಿಂದಾಗಿ ರೈತರು ಮತ್ತು ಸಣ್ಣ ಆಸ್ತಿಗಳ ಮಾಲೀಕರು ಸಾಲ ಸೌಲಭ್ಯ ಪಡೆಯಲು ಪರದಾಡುತ್ತಿದ್ದಾರೆ. ಯಾವುದೇ ಯೋಜನೆಯ ಉದ್ದೇಶ ಎಷ್ಟೇ ಉದಾತ್ತವಾಗಿದ್ದರೂ, ಅದರ ಯಶಸ್ಸು ಇರುವುದು ಅದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ.
ಕೆಳಮಟ್ಟದ ಅಧಿಕಾರಿಗಳ ಮಂದಗತಿಯ ಕೆಲಸ ಮತ್ತು ತಾಂತ್ರಿಕ ದೋಷಗಳು ಹೀಗೆಯೇ ಮುಂದುವರಿದರೆ, ಸರ್ಕಾರದ ಆಶಯ ಈಡೇರದೆ ಹೋಗಬಹುದು. ಆದ್ದರಿಂದ, ಸರ್ಕಾರ ಕೇವಲ ಹೊಸ ಯೋಜನೆಗಳನ್ನು ಘೊಷಿಸುವುದಕ್ಕಷ್ಟೇ ಆದ್ಯತೆ ನೀಡದೆ, ಅವುಗಳ ಸುಗಮ ಅನುಷ್ಠಾನದತ್ತ ಗಮನ ಹರಿಸಬೇಕಿದೆ. ಹಂತಹಂತವಾಗಿ ಯೋಜನೆಗಳನ್ನು ಜಾರಿಗೆ ತಂದರೂ ಪರವಾಗಿಲ್ಲ, ಆದರೆ ಅವು ದೋಷಮುಕ್ತವಾಗಿರಬೇಕು.
ತಾಂತ್ರಿಕ ಸವಾಲುಗಳನ್ನು ತ್ವರಿತವಾಗಿ ಸರಿಪಡಿಸಿ, ಭ್ರಷ್ಟಾಚಾರ ರಹಿತ ಮತ್ತು ಸುಗಮ ಆಡಳಿತವನ್ನು ಜನರಿಗೆ ಒದಗಿಸುವುದು ಸರ್ಕಾರದ ಆದ್ಯತೆಯಾಗಲಿ. ಇಲ್ಲವಾದಲ್ಲಿ, ಈ ಶಾಪ ವಿಮೋಚನೆಯ ಯೋಜನೆಗಳು ಜನರಿಗೆ ಮತ್ತೊಂದು ಶಾಪವಾಗಿ ಪರಿಣಮಿಸುವ ಅಪಾಯವಿದೆ.