ಸಂಪಾದಕೀಯ | ಜೈಲುಗಳ ಅವ್ಯವಸ್ಥೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Editorial: ತಪ್ಪಿತಸ್ಥರಿಗೆ ಶಿಕ್ಷೆಯ ಹಾಗೂ ಕೈದಿಗಳ ಮನಪರಿವರ್ತನೆಯ ತಾಣಗಳಾಗಬೇಕಿದ್ದ ಜೈಲುಗಳೇ ಅವ್ಯವಸ್ಥೆಯ ಆಗರ ಆಗಿರುವುದು ವ್ಯವಸ್ಥೆಯ ವೈಫಲ್ಯಕ್ಕೆ ಸಾಕ್ಷಿ. ಜೈಲುಗಳಲ್ಲಿ ಕೈದಿಗಳು ಮಾದಕದ್ರವ್ಯ ಸೇವಿಸುವುದು, ಮೊಬೈಲ್ ಫೋನ್ ಬಳಸುವುದು, ಪಾರ್ಟಿಗಳನ್ನು ಮಾಡುವುದು... ಹೀಗೆ ಹಲವು ಅಪಸವ್ಯಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ.
ಪ್ರಸ್ತುತ, ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಸಜಾ ಕೈದಿಗಳೇ ಪಲಾಯನಗೈದಿರುವ ಘಟನೆ ಮಂಗಳವಾರ ನಸುಕಿನ ಜಾವ ಸಂಭವಿಸಿದೆ. ಈ ಕೈದಿಗಳು ಕೊಲೆ ಪ್ರಕರಣದಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದರು. ಕೇಂದ್ರ ಕಾರಾಗೃಹದಲ್ಲೇ ಇಂಥ ಘಟನೆ ನಡೆದಿರುವುದು ಆಘಾತಕಾರಿ ವಿದ್ಯಮಾನ. ನಮ್ಮ ರಾಜ್ಯದ ಕಾರಾಗೃಹಗಳಿಗೆ ನಿಜಕ್ಕೂ ಏನಾಗಿದೆ? ಕಾರಾಗೃಹ ಸುಧಾರಣೆ ಮರೀಚಿಕೆ ಆಗಿರುವುದು ಏಕೆ? ಈ ಬೆಳವಣಿಗೆಗಳು ಸಮಾಜಕ್ಕೆ ಯಾವ ಸಂದೇಶ ನೀಡುತ್ತವೆ? ಎಂಬುದರ ಬಗ್ಗೆ ಪ್ರಾಮಾಣಿಕ ಅವಲೋಕನ ನಡೆಸಿ, ಸುಧಾರಣೆಯ ನಿಟ್ಟಿನಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಬಹುದು. 
ಕಾರಾಗೃಹಗಳ ಸುಧಾರಣೆಯ ಬಗ್ಗೆ ನಮ್ಮಲ್ಲಿ ದಶಕಗಳಿಂದಲೂ ಚರ್ಚೆ ನಡೆಯುತ್ತಲೇ ಇದೆ. ಜೈಲುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ನಡೆಸಿದಾಗ ಮಾತ್ರ ಒಂದಿಷ್ಟು ಸಮಯ ನಿಯಮಗಳ ಪಾಲನೆಯಾಗುತ್ತದೆ. ಆದರೆ, ಕೆಲ ದಿನಗಳ ಬಳಿಕ ಅದೇ ಹಳೆಯ ಅವ್ಯವಸ್ಥೆ ಪುನರಾವರ್ತನೆಯಾಗುತ್ತದೆ. ಕೈದಿಗಳು ಪಲಾಯನವಾಗುವಷ್ಟು ಭದ್ರತಾ ಲೋಪ ಇದೆ ಎಂದರೆ ಅದು ನಿಜಕ್ಕೂ ಗಂಭೀರ ಸಂಗತಿಯೇ ಹೌದು. ಈ ಪರಿಯ ನಿರ್ಲಕ್ಷ್ಯ ಭದ್ರತೆಯ ವಿಷಯದಲ್ಲಿ ಮಾತ್ರ ಸಾಬೀತಾಗಿಲ್ಲ. ಕೈದಿಗಳು ದುಡ್ಡು ಕೊಟ್ಟರೆ, ಅವರಿಗೆ ಸಕಲ ಸೌಲಭ್ಯ ಕಲ್ಪಿಸುವ ನಿದರ್ಶನಗಳು ಈ ಹಿಂದೆಯೂ ಬೆಳಕಿಗೆ ಬಂದಿವೆ. ಜೈಲುಗಳಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳು, ಚಾಕು-ತಲ್ವಾರ್-ಪಿಸ್ತೂಲ್​ನಂತಹ ಹತ್ಯಾರುಗಳು, ಮೊಬೈಲ್ ಫೋನುಗಳು ಸಿಗುತ್ತಲೇ ಇರುತ್ತವೆ. ಇದರ ಹಿಂದೆ ಲಕ್ಷಾಂತರ ರೂಪಾಯಿ ಹಣ ಕೈಬದಲಾಗುತ್ತಿರುತ್ತದೆ. 
ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕದ ಹೊರತು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೆ ಜೈಲುಗಳ ಶುದ್ಧೀಕರಣ ಸಾಧ್ಯವಿಲ್ಲ. ಕೈದಿಗಳ ಮನಃಪರಿವರ್ತನೆಯೂ ಸಾಧ್ಯವಿಲ್ಲ. ಆ ಬಗ್ಗೆ ಸರ್ಕಾರ ಗಂಭೀರ ಹೆಜ್ಜೆಗಳನ್ನು ಇಡಬೇಕು. ಕಾರಾಗೃಹಗಳು ಶಿಕ್ಷೆಯ ಕೇಂದ್ರಗಳಲ್ಲ, ಬದಲಿಗೆ ಪರಿವರ್ತನೆಯ ಕೇಂದ್ರಗಳಾಗಬೇಕು, ಅಪರಾಧಿಯು ಶಿಕ್ಷೆ ಮುಗಿಸಿ ಜೈಲಿನಿಂದ ಹೊರಬರುವಾಗ ಮನಪರಿವರ್ತನೆ ಹೊಂದಿ, ಸಮಾಜದ ಉತ್ತಮ ನಾಗರಿಕನಾಗಿ ಬಾಳಬೇಕು ಎಂಬ ಆಶಯ ಬರೀ ಕಡತಗಳಿಗೆ ಸೀಮಿತವಾಗಿದೆ. ಕಾರಾಗೃಹಗಳಲ್ಲಿ ಭದ್ರತಾ ಮೌಲ್ಯಮಾಪನ ಮತ್ತು ಕೈದಿಗಳ ಪ್ರತ್ಯೇಕತೆ ಸೂಕ್ತವಾಗಿ ಜಾರಿಯಾಗಿಲ್ಲವೆ? 
ಹಲವು ಜೈಲುಗಳಲ್ಲಿ ದಟ್ಟಣೆಯೇ ಸಮಸ್ಯೆಯಾಗಿದ್ದು, ಕೈದಿಗಳ ಸ್ಥಳಾಂತರಕ್ಕೆ ಏಕೆ ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ? ಎಂಬುದರ ಬಗ್ಗೆ ಸಂಬಂಧಪಟ್ಟವರು ಸೂಕ್ತ ಉತ್ತರ ನೀಡಬೇಕಿದೆ. ಜೈಲುಗಳಲ್ಲಿನ ಹುಳುಕುಗಳು ಪದೇಪದೆ ಬಯಲಾಗುತ್ತಿದ್ದರೂ, ಇದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಏಕೆ ಹಿಂಜರಿಕೆ? ಈ ನಿಟ್ಟಿನಲ್ಲಿ ಇಚ್ಛಾಶಕ್ತಿಯ ಕೊರತೆ ಸ್ಪಷ್ಟವಾಗಿ ಕಂಡುಬರುತ್ತಿದೆ. ಜೈಲುಗಳ ಸುಧಾರಣೆ, ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸುವ ಸಂಬಂಧ ನಿಯಮಗಳನ್ನು ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಬೇಕಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net