ಬಿಪಿಎಲ್ ಪಡಿತರ ಚೀಟಿ ವಿತರಿಸಲು ಈಗಲೂ ವಾರ್ಷಿಕ 1.20 ಲಕ್ಷ ರೂ. ಆದಾಯವನ್ನು ಮಾನದಂಡವಾಗಿ ಅನುಸರಿಸುತ್ತಿರುವುದು ಸರಿಯಲ್ಲ. ಇದನ್ನು 3 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬ ಆಡಳಿತ ಸುಧಾರಣಾ ಆಯೋಗದ ಶಿಫಾರಸು ಜಾರಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಬಿಪಿಎಲ್ ಕಾರ್ಡ್ ಪಡೆಯಲು ಈಗಲೂ 9 ವರ್ಷಗಳ ಹಳೆಯ ಮಾನದಂಡವನ್ನೇ ಬಳಸಲಾಗುತ್ತಿದೆ. ಆದ್ದರಿಂದ, ಮಾನದಂಡ ಬದಲಿಸುವ ಅಗತ್ಯವಿದ್ದು, ನಿಜವಾದ ಫಲಾನುಭವಿಗಳಿಗೆ ಸವಲತ್ತು ತಲುಪಬೇಕಿದೆ. ಅನರ್ಹ ವ್ಯಕ್ತಿ ಅಥವಾ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಸಿಗದಂತೆ ಎಚ್ಚರವನ್ನೂ ವಹಿಸಬೇಕಿದೆ. ಯಾವುದೇ ಯೋಜನೆಗಳ ಮಾನದಂಡವಾಗಲಿ ಕಾಲಕಾಲಕ್ಕೆ ಅವನ್ನು ಪರಾಮಶಿಸಿ, ಸೂಕ್ತ ಮಾರ್ಪಾಡು ಮಾಡುವುದು ಅಗತ್ಯ. ಬಿಪಿಎಲ್ ಕಾರ್ಡ್ ವಿಷಯದಲ್ಲಿ ಸಾಕಷ್ಟು ಗೊಂದಲಗಳಿದ್ದು, ಸೂಕ್ತ ನಿಯಮಗಳನ್ನು ರೂಪಿಸಬೇಕು.