ಸಂಪಾದಕೀಯ: ಅರ್ಥಪೂರ್ಣ ಚರ್ಚೆಯಾಗಲಿ: ವಿಶೇಷ ಅಧಿವೇಶನದ ಮೇಲೆ ಜನರ ನಿರೀಕ್ಷೆ

Editorial
Editorial
Published on
ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿ ಹಾಗೂ ಪಶ್ಚಿಮ ಘಟ್ಟದ ಕುರಿತಂತೆ ಕಸ್ತೂರಿ ರಂಗನ್ ವರದಿ ಜಾರಿಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆ ಬಗ್ಗೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುವ ಉದ್ದೇಶದೊಂದಿಗೆ ರಾಜ್ಯ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು ಕರೆಯಲಾಗಿದ್ದು, ಮೂರು ದಿನಗಳ ಅಧಿವೇಶನ ಸೋಮವಾರ ಶುರುವಾಗಲಿದೆ. ಜನರ ಹಿತದೃಷ್ಟಿಯಿಂದ ಈ ಎರಡೂ ವಿಷಯಗಳು ಬಹು ಪ್ರಮುಖವಾಗಿರುವುದರಿಂದಾಗಿ, ರಾಜಕೀಯ ಪಕ್ಷಗಳು ರಾಜಕೀಯದಿಂದಾಚೆಗೆ ನೋಡಿ ಅರ್ಥಪೂರ್ಣ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳುವಂತಾಗಬೇಕು.
ಕಸ್ತೂರಿ ರಂಗನ್ ವರದಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಖುದ್ದಾಗಿ ಮಲೆನಾಡು ಭಾಗದ ಜನರ ಅಹವಾಲನ್ನು ಆಲಿಸುತ್ತಿರುವುದು ಗಮನಾರ್ಹ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿ, ತರುವಾಯ ಸರ್ವಪಕ್ಷ ನಿಯೋಗ ಕೊಂಡೊಯ್ದು ಕೇಂದ್ರ ಸರ್ಕಾರಕ್ಕೆ ಜನರ ಅಭಿಪ್ರಾಯಗಳನ್ನು ತಲುಪಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಕಸ್ತೂರಿ ರಂಗನ್ ವರದಿ ಜಾರಿ ವಿಷಯಕ್ಕೆ ಸಂಬಂಧಿಸಿ ಪಕ್ಷಗಳಲ್ಲಿ ಬಹುತೇಕ ಒಮ್ಮತವಿದೆ. ಜನಾಭಿಪ್ರಾಯಕ್ಕೆ ತಕ್ಕಂತೆ ಎಲ್ಲರೂ ಇದನ್ನು ವಿರೋಧಿಸುತ್ತಿದ್ದಾರೆ. ಹೀಗಾಗಿ ಈ ವಿಚಾರದಲ್ಲಿ ಸದನದಲ್ಲಿ ಭಿನ್ನಾಭಿಪ್ರಾಯ ಸಾಧ್ಯತೆ ಕಡಿಮೆ. ಮಾಧವ ಗಾಡ್ಗೀಳ್ ವರದಿ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾದ ತರುವಾಯ ಕೇಂದ್ರ ಸರ್ಕಾರವು ಕಸ್ತೂರಿ ರಂಗನ್ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ವರದಿಯು ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಶೇ.37ಕ್ಕೆ ತಗ್ಗಿಸಿದೆಯಾದರೂ, ಈ ವರದಿ ಜಾರಿಯಾದಲ್ಲಿ ಜನಜೀವನಕ್ಕೆ ಮತ್ತು ಚಿಕ್ಕಪುಟ್ಟ ಅಭಿವೃದ್ಧಿ ಕೆಲಸಗಳಿಗೂ ತೊಂದರೆಯಾಗುತ್ತದೆ ಎಂಬ ಭಾವನೆ ಪಶ್ಚಿಮ ಘಟ್ಟ ವಲಯದ ಜಿಲ್ಲೆಗಳ ಜನರಲ್ಲಿದೆ.
ಆ ಪ್ರದೇಶದ ಜನಪ್ರತಿನಿಧಿಗಳು ಸಹ ಇದೇ ಅನಿಸಿಕೆ ಹೊಂದಿದ್ದಾರೆ. ಅದೇ ಹೊತ್ತಿನಲ್ಲಿ, ಪಶ್ಚಿಮ ಘಟ್ಟ ಸಂರಕ್ಷಣೆಯ ಮಹತ್ವವನ್ನೂ ಕಡೆಗಣಿಸುವಂತಿಲ್ಲ. ಅಭಿವೃದ್ಧಿ ಮತ್ತು ಪರಿಸರ ಸಮತೋಲನದ ಮಾರ್ಗವನ್ನು ಅನುಸರಿಸುವುದು ಅನಿವಾರ್ಯ ಎಂಬ ಅಭಿಪ್ರಾಯವೂ ಇದೆ. ಕಸ್ತೂರಿ ರಂಗನ್ ಸಮಿತಿ ಶಿಫಾರಸು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 27 ಕೊನೇ ದಿನವಾಗಿದೆ. ಹೀಗಾಗಿ ಅಧಿವೇಶನದ ಮೊದಲ ದಿನವೇ ವರದಿ ತಿರಸ್ಕರಿಸುವ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ. ಇನ್ನೊಂದೆಡೆ, ಕರ್ನಾಟಕದಲ್ಲಿ ಈ ಬಾರಿ ತೀವ್ರ ಬರ ಕಾಣಿಸಿದ್ದು, ಈಗಾಗಲೇ 124 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಬರಪೀಡಿತ ಪ್ರದೇಶದ ಪಟ್ಟಿಗೆ ಇನ್ನಷ್ಟು ತಾಲೂಕುಗಳನ್ನು ಸೇರಿಸಿ ಬೆಳೆ ಹಾನಿಗೆ ಕೇಂದ್ರದ ನೆರವು ಕೋರಲು ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಬರ ನಿರ್ವಹಣೆ ವಿಷಯವು ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ವೇದಿಕೆಯಾಗುವ ಲಕ್ಷಣ ಗೋಚರಿಸಿದೆ. ಇದಲ್ಲದೆ, ವಿಪಕ್ಷಗಳು ಕೆಪಿಎಸ್ಸಿ ಹಗರಣ, ಸರ್ಕಾರದ ಶತದಿನೋತ್ಸವ ಆಚರಣೆ, ರಾಜ್ಯದಲ್ಲಿ ವಂದೇ ಮಾತರಂ ಗೀತೆಯ ಗಾಯನವನ್ನು ಎರಡು ಚರಣಕ್ಕೆ ಮೊಟಕುಗೊಳಿಸಿರುವುದು ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸುವ ಸಂಭವ ಇದೆ. ಮುಂಗಾರು ಅಧಿವೇಶನದಲ್ಲಿ, ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಷಯವೇ ಮೇಲುಗೈಯಾಗಿ ಕಲಾಪ ಸರಿಯಾಗಿ ನಡೆಯದೆ ನಿಗದಿತ ಅವಧಿಗಿಂತ ಎರಡು ದಿನ ಮೊದಲೇ ಅಧಿವೇಶನ ಮುಗಿದಿತ್ತು. ಈ ವಿಶೇಷ ಅಧಿವೇಶನವು ತನ್ನ ಉದ್ದೇಶ ಸಾಧಿಸಲಿ ಎಂಬುದು ಜನರ ಅಪೇಕ್ಷೆ ಹಾಗೂ ನಿರೀಕ್ಷೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net