

ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶ ದಾಖಲೆ ಸೃಷ್ಟಿಸಿದೆ. ಶೇಕಡ 86.48 ಫಲಿತಾಂಶ ಬಂದಿದ್ದು, ವಿದ್ಯಾರ್ಥಿಗಳ ಪರಿಶ್ರಮಕ್ಕೆ, ಬೋಧಕ ಸಿಬ್ಬಂದಿಯ ನಿರಂತರ ಪ್ರಯತ್ನಕ್ಕೆ ತಕ್ಕ ಫಲ ದೊರೆತಿದೆ. ರಾಜ್ಯ ಶಿಕ್ಷಣ ಇಲಾಖೆಯ ಕ್ರಮಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಈ ವರ್ಷ 5.46 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮುಂದಿನ ಹಾದಿಯನ್ನು ಆಯ್ಕೆ ಮಾಡಲು ಇದು ಸುವರ್ಣ ಅವಕಾಶ. ಅಲ್ಲದೆ, ಮೂರು ಬಾರಿ ಪರೀಕ್ಷೆ ನಡೆಸುವ ಗೊಂದಲ ನಿವಾರಣೆಯಾಗಿದ್ದು, ಎರಡು ಬಾರಿ ಮಾತ್ರ ಪರೀಕ್ಷೆ ನಡೆಸುವ ನಿರ್ಧಾರ ಸೂಕ್ತವಾಗಿದೆ. ಈಗಾಗಲೇ ಎರಡನೇ ಪರೀಕ್ಷೆಯ ವೇಳಾಪಟ್ಟಿ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ಧೃತಿಗೆಡದೆ ಪರೀಕ್ಷೆಗೆ ತಯಾರಿ ನಡೆಸಲಿ.
ತೀವ್ರ ಬಡತನ, ಕೌಟುಂಬಿಕ ಸಂಕಷ್ಟ, ತಂದೆ ಅಥವಾ ತಾಯಿಯ ಸಾವಿನ ನೋವಿನ ನಡುವೆಯೇ ಹಲವು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆ ಬರೆದು ಉತ್ತಮ ಸಾಧನೆ ತೋರಿರುವುದು ನಿಜಕ್ಕೂ ಪ್ರಶಂಸಾರ್ಹ. ಇದು ವಿದ್ಯಾರ್ಥಿಗಳ ಪ್ರಬಲ ಇಚ್ಛಾಶಕ್ತಿಗೆ ಸಂದ ಗೆಲುವು. ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಪಾಲಕರಿಗೂ, ವಿದ್ಯಾಥಿಗಳಿಗೂ ಬೃಹತ್ ಪ್ರಶ್ನೆಯಾಗಿ ಕಾಡುವುದು ಸಹಜವೇ. ಆದರೆ, ಈಗಿನ ದಿನಗಳು ಮೊದಲಿನಂತಿಲ್ಲ. ಪ್ರಸ್ತುತ ಆಯ್ಕೆಗಳು ಕೂಡ ಹೆಚ್ಚಿದ್ದು, ಶೈಕ್ಷಣಿಕ ದಾರಿಯ ಪಯಣ ಸುಗಮವಾಗಿದೆ.
ವಿದ್ಯಾರ್ಥಿಗಳು ಮತ್ತು ಅವರ ಪಾಲಕರು ಬೇರೆಯವರ ಅನುಕರಣೆ ಮಾಡಿ ಅಥವಾ ಸ್ಪರ್ಧೆಗೆ ಬಿದ್ದು ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಮಕ್ಕಳ ಸಾಮರ್ಥ್ಯ, ಆಸಕ್ತಿ, ಜ್ಞಾನ, ಗ್ರಹಿಸುವಿಕೆಯ ಶಕ್ತಿ ಈ ನಾಲ್ಕೂ ಅಂಶಗಳನ್ನು ಸರಿಯಾಗಿ ಪರಾಮಶಿಸಿ, ಮುಂದಿನ ಶೈಕ್ಷಣಿಕ ದಾರಿಯನ್ನು ಆಯ್ದುಕೊಂಡರೆ ಯಶಸ್ಸು ಮತ್ತು ಸಂತೃಪ್ತಿ ಎರಡೂ ಸಿಗಲು ಸಾಧ್ಯ. ಅಲ್ಲದೆ, ಇಂದಿನ ದಿನಗಳಲ್ಲಿ ಕೌಶಲಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಅಂಕ ಗಳಿಕೆಯೊಂದೇ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲೂ ಗಮನ ಅವಶ್ಯಕ. ಕೌಶಲ ಹೆಚ್ಚಿಸಿಕೊಳ್ಳಲು, ಆ ಮೂಲಕ ಉದ್ಯೋಗ ಮಾರುಕಟ್ಟೆಯ ಬೇಡಿಕೆಗೆ ಸಿದ್ಧವಾಗಲು ಈಗಿನಿಂದಲೇ ಸೂಕ್ತ ತಯಾರಿ ಅಗತ್ಯ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ವೈದ್ಯಕೀಯ, ಇಂಜಿನಿಯರಿಂಗ್ ಮಾತ್ರವಲ್ಲದೆ ಬೇಡಿಕೆ ಹೆಚ್ಚಿರುವ ಬಿ.ಎಸ್ಸಿ ನರ್ಸಿಂಗ್, ಕೃಷಿ ವಿಜ್ಞಾನ ಮತ್ತು ಫಾರ್ಮಸಿಯಂಥ ಕೋರ್ಸ್ಗಳ ಕಡೆಗೂ ಗಮನ ನೀಡಬಹುದು. ವಾಣಿಜ್ಯ ವಿಭಾಗದಲ್ಲೂ ಸಾಕಷ್ಟು ಆಯ್ಕೆಗಳಿದ್ದು, ಕಲಾ ವಿಭಾಗದವರು ಒಂದಿಷ್ಟು ಕೌಶಲದ ಬಲದೊಂದಿಗೆ ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಭದ್ರ ಸ್ಥಾನ ಪಡೆಯಬಹುದು.
ಒಳ್ಳೆಯ ಅಂಕಗಳು ಬಂದಿವೆ ಎಂದು ಅಥವಾ ಸ್ನೇಹಿತರು ಸೇರುತ್ತಾರೆ ಎಂದು ಕೋರ್ಸ್ ಆಯ್ಕೆ ಮಾಡುವುದು ಬೇಡ. ವಿದ್ಯಾರ್ಥಿಗಳು ಅವರ ಆಸಕ್ತಿ ಮತ್ತು ಸಾಮರ್ಥ್ಯ ಎಲ್ಲಿದೆ ಎಂದು ಗಮನಿಸಿ ನಿರ್ಧಾರ ಕೈಗೊಳ್ಳುವುದು ಹೆಚ್ಚು ಸೂಕ್ತ. ದಾಖಲೆಯ ಫಲಿತಾಂಶ ಬಂದಿರುವುದರಿಂದ ಸ್ವಾಭಾವಿಕವಾಗಿಯೇ ಸ್ಪರ್ಧೆ ಹೆಚ್ಚಿರುತ್ತದೆ. ಆದ್ದರಿಂದ ಪ್ರವೇಶ ಪ್ರಕ್ರಿಯೆಯ ಮೇಲೆ ನಿಗಾ ಇಡುವುದು ಮುಖ್ಯ. ವಿದ್ಯಾರ್ಥಿಗಳ ಮುಂದಿನ ಹಾದಿ ಸುಗಮವಾಗಲಿ ಹಾಗೂ ಜ್ಞಾನಶಕ್ತಿಯ ಬಲದಿಂದ ಈ ಪ್ರತಿಭೆಗಳು ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎಂಬುದೇ ಆಶಯ.