ಸಂಪಾದಕೀಯ: ಪಾವಿತ್ರ್ಯ ಮರುಸ್ಥಾಪನೆಯಾಗಲಿ

Editorial
Editorial
Published on
ಪೊಲೀಸ್​ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ಎಸಗಿ ಸಿಕ್ಕಿಬಿದ್ದಿರುವ 216 ಅಭ್ಯರ್ಥಿಗಳನ್ನು ಭವಿಷ್ಯದ ಎಲ್ಲ ಪರೀಕ್ಷೆಗಳಿಂದ ಶಾಶ್ವತವಾಗಿ ನಿಷೇಧಿಸಿರುವುದು, ಮುಂದಿನ ದಿನಗಳಲ್ಲಿ ಅಡ್ಡದಾರಿಯಲ್ಲಿ ಕೆಲಸ ಗಿಟ್ಟಿಸಲು ಯತ್ನಿಸುವ ಅಕ್ರಮ ಜಾಲಗಳಿಗೆ ನೀಡಿದ ಖಡಕ್​ ಎಚ್ಚರಿಕೆಯಾಗಿದೆ. ಸರ್ಕಾರಿ ಉದ್ಯೋಗದ ಕನಸು ಹೊತ್ತು ಹಗಲಿರುಳು ಶ್ರಮಿಸುವ ಲಕ್ಷಾಂತರ ಪ್ರಾಮಾಣಿಕ ಅಭ್ಯರ್ಥಿಗಳ ಹಿತರಕ್ಷಣೆ ಮಾಡಲು ಹಾಗೂ ನೇಮಕಾತಿ ವ್ಯವಸ್ಥೆಯಲ್ಲಿ ಕುಸಿದುಬಿದ್ದಿದ್ದ ನಂಬಿಕೆಯನ್ನು ಮರುಸ್ಥಾಪಿಸಲು ಪೊಲೀಸ್​ ಇಲಾಖೆ ತೆಗೆದುಕೊಂಡಿರುವ ನಿರ್ಧಾರ ಅತ್ಯಂತ ಸ್ವಾಗತಾರ್ಹವಾಗಿದೆ.
ಪ್ರಸ್ತುತ ಸಿವಿಲ್​, ಸಶಸ್ತ್ರ, ಕೆಎಸ್​ಆರ್​ಪಿ ಹಾಗೂ ಕೆಎಸ್​ಐಎಸ್​ಎಫ್​ ಘಟಕಗಳ ಒಟ್ಟು 7,905 ಕಾನ್​ಸ್ಟೆಬಲ್​ ಹುದ್ದೆಗಳ ಭರ್ತಿಗೆ ಆಯೋಜಿಸಲಾಗಿರುವ ಲಿಖಿತ ಪರೀಕ್ಷೆಗಳ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಹಿಂದಿನ ಪರೀಕ್ಷೆಗಳಲ್ಲಿ ಡಿಬಾರ್​ ಆದ ಕಳಂಕಿತರು ಮತ್ತೆ ಸುಳ್ಳು ಮಾಹಿತಿ ನೀಡಿ ಪರೀಕ್ಷೆಗೆ ಹಾಜರಾಗುವ ಸಾಧ್ಯತೆಯನ್ನು ಮನಗಂಡು, ಇಲಾಖೆಯ ನೇಮಕಾತಿ ವಿಭಾಗವು 216 ಆರೋಪಿಗಳ ಹೆಸರು, ತಂದೆಯ ಹೆಸರು, ಆಧಾರ್​ ಸಂಖ್ಯೆ, ಖಾಯಂ ವಿಳಾಸ ಮತ್ತು ಎಫ್​ಐಆರ್​ ವಿವರಗಳನ್ನೊಳಗೊಂಡ ಸಮಗ್ರ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಹಸ್ತಾಂತರಿಸಿದೆ. ಕೆಇಎ ಈ ಮಾಹಿತಿ ಆಧರಿಸಿ ಅಭ್ಯರ್ಥಿಗಳ ಪೂರ್ವಾಪರಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದು, ಕಳಂಕಿತರ ಅರ್ಜಿಗಳನ್ನು ತಿರಸ್ಕರಿಸಿ ಹಾಲ್​ಟಿಕೆಟ್​ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಇಲಾಖೆಯ ಪಾರದರ್ಶಕತೆಗೆ ಹಿಡಿದ ಕೈಗನ್ನಡಿಯಾಗಿದೆ.
ಇಲಾಖೆಯ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಉಳಿದಿದ್ದ 2021ರ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣವು ಇಡೀ ರಾಜ್ಯದ ಗಮನ ಸೆಳೆದಿತ್ತು. ಸಿಐಡಿ ತನಿಖೆಯ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್​ ಪೌಲ್​ರಂಥ ಹಿರಿಯ ಅಧಿಕಾರಿಯಿಂದ ಹಿಡಿದು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಸೇರಿದಂತೆ 113ಕ್ಕೂ ಹೆಚ್ಚು ಜನ ಜೈಲು ಪಾಲಾಗಿದ್ದರು. ಈ ಹಗರಣದಲ್ಲಿ ಭಾಗಿಯಾಗಿದ್ದ 53 ಪಿಎಸ್​ಐ ಅಭ್ಯರ್ಥಿಗಳನ್ನು ಈಗ ಶಾಶ್ವತವಾಗಿ ನಿಷೇಧಿಸಲಾಗಿದೆ. ಹಾಗೆಯೇ, 2018ರ ಸಿವಿಲ್​ ಕಾನ್​ಸ್ಟೆಬಲ್​ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ 120 ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್​ ಮಾಡಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ, ಓಎಂಆರ್​ ಶೀಟ್​ ತಿದ್ದುಪಡಿ, ಬ್ಲೂಟೂತ್​ ಬಳಕೆ, ನಕಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಕೂಡಿಸುವುದು ಹಾಗೂ ಮಧ್ಯವರ್ತಿಗಳಿಗೆ ಹಣ ನೀಡುವುದು ಸೇರಿದಂತೆ ಅಕ್ರಮದ ಎಲ್ಲ ಕಳ್ಳದಾರಿಗಳನ್ನು ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಸಿಐಡಿ ಸಂಗ್ರಹಿಸಿರುವ ಮೊಬೈಲ್​ ಸಂಭಾಷಣೆ, ವಾಟ್ಸ್​ಆ್ಯಪ್​ ಚಾಟ್​ಗಳು, ಸಿಸಿಟಿವಿ ದೃಶ್ಯಾವಳಿ, ಹಣ ವರ್ಗಾವಣೆ ದಾಖಲೆ ಹಾಗೂ ತಪ್ಪೊಪ್ಪಿಗೆ ಹೇಳಿಕೆಗಳು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣ ಪಟ್ಟಿಯಲ್ಲಿ ದೃಢಪಟ್ಟಿರುವುದರಿಂದಲೇ ಈ ಶಾಶ್ವತ ನಿಷೇಧದ ನಿರ್ಧಾರಕ್ಕೆ ಕಾನೂನಾತ್ಮಕ ಬಲ ಸಿಕ್ಕಿದೆ. ಆದರೆ, ಈ ಸುಧಾರಣಾ ಪ್ರಕ್ರಿಯೆ ಕೇವಲ ಅಭ್ಯರ್ಥಿಗಳ ನಿಷೇಧಕ್ಕೆ ಸೀಮಿತವಾಗಬಾರದು. ಹಗರಣಗಳಲ್ಲಿ ಭಾಗಿಯಾಗಿ ಅಮಾನತಾಗಿದ್ದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳುತ್ತಿರುವ ಪ್ರಕ್ರಿಯೆಗಳು ಉದ್ಯೋಗಾಕಾಂಕ್ಷಿಗಳಲ್ಲಿ ಅಪನಂಬಿಕೆ ಮೂಡಿಸದಂತೆ ನೋಡಿಕೊಳ್ಳಬೇಕಿದೆ. ಅಭ್ಯರ್ಥಿಗಳ ಮೇಲೆ ತೋರಿದಷ್ಟೇ ಕಠಿಣ ಕ್ರಮವನ್ನು ಅಕ್ರಮಕ್ಕೆ ಸಾಥ್​ ನೀಡಿದ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಮೇಲೆಯೂ ಜರುಗಿಸಿದಾಗ ಮಾತ್ರ ಈ ಸುಧಾರಣೆಗೆ ಪೂರ್ಣ ಅರ್ಥ ಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net