_1765822130336.webp?w=480&auto=format%2Ccompress&fit=max)
_1765822130336.webp?w=480&auto=format%2Ccompress&fit=max)
ಭಾರತ ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ತುರ್ತು ಪರಿಸ್ಥಿತಿಯ ಅವಧಿಯನ್ನು ಹೊರತುಪಡಿಸಿದರೆ ಕಳೆದ 78 ವರ್ಷಗಳಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವದ ಬೇರುಗಳು ಸದೃಢಗೊಂಡಿವೆ. 2024ರ ಲೋಕಸಭೆ ಚುನಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಲು ಹಲವು ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡಿದ್ದರು. ಮಾತ್ರವಲ್ಲ, ವ್ಯವಸ್ಥಿತ ಚುನಾವಣೆ ವ್ಯವಸ್ಥೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು ಎಂಬುದು ಗೊತ್ತಿರುವಂಥದ್ದೇ. ಆದರೆ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸುವ ಭರದಲ್ಲಿ ಪ್ರತಿಪಕ್ಷಗಳು ಅದನ್ನು ‘ಮತಗಳ್ಳತನ’ ಎಂದು ಸಂಬೋಧಿಸಿರುವುದು ಪ್ರಜಾತಂತ್ರದ ನಂಬಿಕೆಗೆ ಅಪಮಾನ.
ರಾಜಕೀಯವಾಗಿ ಮತ್ತು ಇತರ ವಿಷಯಗಳಲ್ಲಿ ನಿಲುವುಗಳನ್ನು ತಿಳಿಸಲು, ವಿರೋಧಿಸಲು ಅವಕಾಶ ಇದ್ದೇ ಇದೆ. ಆದರೆ, ವಾಕ್ ಸ್ವಾತಂತ್ರ್ಯ ಸ್ವೇಚ್ಛಾಚಾರವಾಗಬಾರದು. ವಾಕ್ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದ್ವೇಷ ಬಿತ್ತುವ ಪ್ರಯತ್ನ ಮಾಡಬಾರದು.
ಪ್ರತಿಪಕ್ಷ ಕಾಂಗ್ರೆಸ್ ನವೆದಹಲಿಯಲ್ಲಿ ಭಾನುವಾರ ಎನ್ಡಿಎ ಸರ್ಕಾರದ ವಿರುದ್ಧ ನಡೆಸಿದ ‘ಮತಕಳವು’ ರ್ಯಾಲಿಯ ವೇಳೆ, ‘ಮೋದಿ ನಿಮ್ಮ ಸಮಾಧಿ ಅಗೆಯುತ್ತೇವೆ’ ಎಂಬ ಘೋಷಣೆಗಳು ಮೊಳಗಿದ್ದು, ನಿಜಕ್ಕೂ ಆತಂಕದ ವಿಚಾರ. ಯಾರೇ ಇಂಥ ಕೃತ್ಯ ಮಾಡಿದ್ದರೂ ಅದು ಅಕ್ಷಮ್ಯ. ಕಾರ್ಯಕರ್ತರು ಇಂಥ ಘೋಷಣೆಗಳನ್ನು ಹಾಕುತ್ತಿರಬೇಕಾದರೆ ನಾಯಕರಾದವರು ಅದನ್ನು ತಡೆಯಬೇಕು ಮತ್ತು ವ್ಯಕ್ತಿಗತ ವಿರೋಧ ಸಲ್ಲ ಎಂಬುದನ್ನು ತಿಳಿಹೇಳಬೇಕು. ದುರದೃಷ್ಟವಶಾತ್ ಇಂಥ ಯಾವುದೇ ಪ್ರಯತ್ನ ನಡೆಯಲಿಲ್ಲ. ಇದರಿಂದ ಸಮಾಜಕ್ಕೆ ತಪು್ಪ ಸಂದೇಶ ರವಾನೆಯಾಗುತ್ತದೆ ಮತ್ತು ದ್ವೇಷದ ಭಾವನೆಗಳಿಗೆ ಆಸ್ಪದ ಮಾಡಿಕೊಡುತ್ತದೆ.
ಸೈದ್ಧಾಂತಿಕ ವಿರೋಧ ಎಷ್ಟೇ ತೀವ್ರವಾಗಿ ಇರಲಿ ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ವ್ಯಕ್ತಿಗತ ವಿರೋಧಕ್ಕೆ ಅವಕಾಶವಿಲ್ಲ. ಅದರಲ್ಲೂ, ದೇಶದ ಪ್ರಧಾನಿಯ ವಿರುದ್ಧ ತೀರಾ ಅವಹೇಳನಕಾರಿ ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಹಾಕುವುದು ರಾಜಕೀಯ ಅಪ್ರಬುದ್ಧತೆಗೆ ಮತ್ತು ತೀವ್ರ ಹತಾಶೆಗೆ ಸಾಕ್ಷಿ. ಅಷ್ಟಕ್ಕೂ, ದೇಶದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ನಡೆಯುತ್ತಿರುವುದು ಇದೇ ಮೊದಲಲ್ಲ. ಚುನಾವಣಾ ಆಯೋಗ ಕಾಲಕಾಲಕ್ಕೆ ಈ ಪ್ರಕ್ರಿಯೆಯನ್ನು ನಡೆಸಿಕೊಂಡು ಬಂದಿದೆ ಮತ್ತು ಚುನಾವಣೆ ವ್ಯವಸ್ಥೆಯನ್ನು ಸುಗಮ ಹಾಗೂ ಪರಿಣಾಮಗೊಳಿಸಲು ಅದು ಅನಿವಾರ್ಯ ಕೂಡ ಹೌದು. ಈ ಪ್ರಕ್ರಿಯೆಯಲ್ಲಿ ಲೋಪಗಳು ಇದ್ದರೆ ಪ್ರತಿಪಕ್ಷಗಳು ಖಂಡಿತವಾಗಿಯೂ ಆ ಬಗ್ಗೆ ದನಿ ಎತ್ತಲಿ. ಅದನ್ನು ಬಿಟ್ಟು ಪ್ರಧಾನಿಯ ವಿರುದ್ಧ ವಿಷ ಕಾರುವ, ಸಾಂವಿಧಾನಿಕ ಸಂಸ್ಥೆಗಳ ವಿರುದ್ಧ ಸುಳ್ಳು ಸಂಕಥನ ಸೃಷ್ಟಿಸುವ ಹಾಗೂ ಜನರನ್ನು ತಪು್ಪದಾರಿಗೆ ಎಳೆಯುವ ಕ್ರಮಗಳು ಭಾರಿ ಅಪಾಯಕಾರಿ. ಇಂಥ ಚಟುವಟಿಕೆಗಳಿಗೆ ಆಸ್ಪದ ಮಾಡಿಕೊಡಬಾರದು.
ಅನುಭವಿ ರಾಜಕಾರಣಿಯೂ ಆಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಪ್ರತಿಪಕ್ಷಗಳು ನಿರಂತರವಾಗಿ ಸುಳ್ಳಿನ ಸಂಕಥನ ಪ್ರಚಾರ ಮಾಡುತ್ತ ಹೋದರೆ, ಮತದಾರರ ಮನಸ್ಸಿನಲ್ಲಿ ಅನುಮಾನಗಳನ್ನು ಹುಟ್ಟು ಹಾಕಿದರೆ ಅದರಿಂದ ಯಾರಿಗೂ ಪ್ರಯೋಜನವಿಲ್ಲ’ ಎಂದಿದ್ದಾರೆ. ಆಡಳಿತಪಕ್ಷ ಮತ್ತು ಪ್ರತಿಪಕ್ಷ ರಾಷ್ಟ್ರನಿರ್ವಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆಳುವ ಪಕ್ಷಕ್ಕೂ, ಪ್ರತಿಪಕ್ಷಕ್ಕೂ ತನ್ನದೇ ಆದ ರಚನಾತ್ಮಕ ಜವಾಬ್ದಾರಿಗಳಿವೆ. ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಿ. ಸಮಾಜದಲ್ಲಿ ದ್ವೇಷವಲ್ಲ, ಸಾಮರಸ್ಯದ ಭಾವ ಬಿತ್ತಲಿ.