ಇತ್ತೀಚಿನ ದಶಕಗಳಲ್ಲಿ ಕೃಷಿ ಹಲವು ಸ್ಥಿತ್ಯಂತರ ಕಂಡಿದೆ. ರಾಸಾಯನಿಕಗಳ ಅತಿಯಾದ ಬಳಕೆ ಹಲವು ಬಗೆಯ ಅಪಾಯಗಳನ್ನು ತಂದೊಡ್ಡಿದೆ. ಪಂಜಾಬ್ನಲ್ಲಿ ಕೀಟನಾಶಕ ಮತ್ತು ರಸಗೊಬ್ಬರಗಳ ಅತಿಯಾದ ಬಳಕೆಯಿಂದ ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚಿದೆ. ಇತರ ಕಾಯಿಲೆಗಳು ಆವರಿಸಿಕೊಳ್ಳುತ್ತಿವೆ. ಮನುಷ್ಯನಿಗೆ ಆಹಾರವೇ ಔಷಧ. ಆದರೆ, ರಾಸಾಯನಿಕ, ಕ್ರಿಮಿನಾಶಕಗಳ ಬಳಕೆಯಿಂದ ಕೃಷಿ ಭೂಮಿ ಮತ್ತು ಆಹಾರವನ್ನೇ ವಿಷಯುಕ್ತಗೊಳಿಸಲಾಗುತ್ತಿದ್ದು, ಮಣ್ಣಿನ ಸವಕಳಿಯೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕೆಲ್ಲ ಪರಿಹಾರ ಸಾವಯವ ಮತ್ತು ನೈಸರ್ಗಿಕ ಕೃಷಿ ವಿಧಾನ. ಆರಂಭದಲ್ಲಿ ಈ ಕೃಷಿ ಪದ್ಧತಿಯ ಬಗ್ಗೆ ರೈತರಲ್ಲಿ ತಪ್ಪು ತಿಳಿವಳಿಕೆಗಳಿದ್ದರೂ, ಈಗ ಅರಿವು ಮತ್ತು ಜಾಗೃತಿ ಹೆಚ್ಚಿದೆ. ಕೋವಿಡ್ ಕಾಲಟ್ಟದ ನಂತರ ಕೃಷಿ ಕ್ಷೇತ್ರಕ್ಕೆ ಯುವಕರು ಸಾಕಷ್ಟು ಸಂಖ್ಯೆಯಲ್ಲಿ ಪ್ರವೇಶಿಸಿದ್ದಾರೆ. ಇವರೆಲ್ಲ ಸಾವಯವ ಕೃಷಿ ವಿಧಾನವನ್ನು ಅನುಸರಿಸುವ ಜತೆಗೆ, ಸಾವಯವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಂಥ ನವೋದ್ಯಮಗಳನ್ನೂ ಆರಂಭಿಸಬಹುದು. ರೈತರ ನೆಮ್ಮದಿಯುಕ್ತ ಬದುಕಿಗೆ ಸಾವಯವ ಹಾದಿ ಅನಿವಾರ್ಯವಾಗಿತ್ತು. ಭಾರತ ಈಗ ಈ ನಿಟ್ಟಿನಲ್ಲಿ ಜಾಗತಿಕ ಕೇಂದ್ರ ಆಗುವ ಹಾದಿಯಲ್ಲಿರುವುದು ಆಶಾದಾಯಕ.