ಸಂಪಾದಕೀಯ: ನೈತಿಕತೆಯ ಅಡಿಪಾಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಶಾಲಾ ಶಿಕ್ಷಣ ಕೇವಲ ಅಕ್ಷರಾಭ್ಯಾಸಕ್ಕೆ ಸೀಮಿತವಲ್ಲ; ಅದು ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವ, ಸಂಸ್ಕಾರ ನೀಡುವ ಮತ್ತು ನೈತಿಕತೆಯ ಅಡಿಪಾಯ ಹಾಕುವ ಪವಿತ್ರ ತಾಣ. ಇಂತಹ ಜಾಗದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆಯಾಗಬೇಕೇ ಹೊರತು, ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆಯ ಪ್ರದರ್ಶನವಾಗಬಾರದು. ಈ ನಿಟ್ಟಿನಲ್ಲಿ, ಶಾಲೆಗಳಲ್ಲಿ ಅಸಭ್ಯ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುವುದನ್ನು ನಿಷೇಧಿಸಿರುವ ಶಿಕ್ಷಣ ಇಲಾಖೆಯ ನಿರ್ಧಾರ ಅತ್ಯಂತ ಸಮಯೋಚಿತ ಮತ್ತು ಸ್ವಾಗತಾರ್ಹ.

ಇತ್ತೀಚಿನ ವರ್ಷಗಳಲ್ಲಿ ಶಾಲಾ ವಾರ್ಷಿಕೋತ್ಸವ ಅಥವಾ ಪ್ರತಿಭಾ ಕಾರಂಜಿಗಳಂತಹ ಕಾರ್ಯಕ್ರಮಗಳಲ್ಲಿ ಚಲನಚಿತ್ರಗಳ ಐಟಂ ಸಾಂಗ್​ಗಳು ಹಾಗೂ ದ್ವಂದ್ವಾರ್ಥದ ಸಾಹಿತ್ಯವಿರುವ ಹಾಡುಗಳಿಗೆ ಪುಟ್ಟ ಮಕ್ಕಳು ಹೆಜ್ಜೆ ಹಾಕುತ್ತಿರುವುದು ವಿಷಾದನೀಯ ಸಂಗತಿಯಾಗಿತ್ತು. ಜನಪ್ರಿಯತೆಯ ಬೆನ್ನುಹತ್ತಿದ ಕೆಲವು ಶಾಲಾ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರು, ಮಕ್ಕಳ ವಯಸ್ಸಿಗೆ ಮೀರಿದ ಉಡುಪು ಹಾಗೂ ನೃತ್ಯದ ವೈಖರಿಯನ್ನು ಪೋ›ತ್ಸಾಹಿಸುತ್ತಿದ್ದರು. ಇದು ನೋಡುವವರಿಗೆ ತಾತ್ಕಾಲಿಕವಾಗಿ ಖುಷಿ ನೀಡಬಹುದಾದರೂ, ಮಗುವಿನ ಮಾನಸಿಕ ಬೆಳವಣಿಗೆ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ, ಬಾಲ್ಯದಲ್ಲಿ ಮಕ್ಕಳು ಏನನ್ನು ಕಲಿಯುತ್ತಾರೋ ಅದೇ ಅವರ ಭವಿಷ್ಯದ ವ್ಯಕ್ತಿತ್ವಕ್ಕೆ ಭದ್ರ ಬುನಾದಿಯಾಗುತ್ತದೆ. ಶಾಲಾ ಹಂತದಲ್ಲಿ ಮಕ್ಕಳಿಗೆ ನಮ್ಮ ನಾಡು, ನುಡಿ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆಯಿದೆ. ಜಾನಪದ ನೃತ್ಯಗಳು, ದೇಶಭಕ್ತಿ ಗೀತೆಗಳು ಹಾಗೂ ಸ್ಪೂರ್ತಿದಾಯಕ ನಾಟಕಗಳು ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಅಶ್ಲೀಲ ಹಾಡುಗಳ ಅಬ್ಬರದಲ್ಲಿ ಈ ಮೌಲ್ಯಗಳು ಕಣ್ಮರೆಯಾಗುತ್ತಿವೆ. ಸರ್ಕಾರದ ಈ ಕಟ್ಟುನಿಟ್ಟಿನ ಆದೇಶದಿಂದಾಗಿ ಈಗ ಮತ್ತೆ ಶಾಲಾ ವೇದಿಕೆಗಳಲ್ಲಿ ಸಭ್ಯತೆ ಮತ್ತು ಸಂಸ್ಕಾರದ ವಾತಾವರಣ ಮರಳುವ ನಿರೀಕ್ಷೆಯಿದೆ.

ಈ ಆದೇಶವನ್ನು ಯಶಸ್ವಿಗೊಳಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದಿದೆ. ಶಿಕ್ಷಕರು ‘ವ್ಯೂವ್ಸ್’ ಮತ್ತು ಚಪ್ಪಾಳೆಗಾಗಿ ಮಕ್ಕಳನ್ನು ಅಸಭ್ಯ ನೃತ್ಯಗಳಿಗೆ ಬಳಸಿಕೊಳ್ಳಬಾರದು. ಕಲೆ ಎಂಬುದು ಆನಂದ ನೀಡುವ ಜತೆಗೆ ಜ್ಞಾನವನ್ನೂ ನೀಡಬೇಕು. ಅರ್ಥಪೂರ್ಣ ಗೀತೆಗಳನ್ನು ಆಯ್ದುಕೊಳ್ಳುವುದು, ಮಕ್ಕಳ ವಯಸ್ಸಿಗೆ ತಕ್ಕ ಉಡುಪುಗಳನ್ನು ಹಾಕಿಸುವುದು ಮತ್ತು ಸಭ್ಯತೆಯ ಚೌಕಟ್ಟಿನಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಅಗತ್ಯ. ಪೋಷಕರು ಕೂಡ ತಮ್ಮ ಮಕ್ಕಳು ಯಾವ ರೀತಿಯ ಹಾಡುಗಳಿಗೆ ಅಭ್ಯಾಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಿಗಾ ವಹಿಸಬೇಕು.

ಶಿಕ್ಷಣ ಇಲಾಖೆಯ ಈ ಆದೇಶ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಸೀಮಿತವಾಗದೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೂ ವಿಸ್ತರಣೆಯಾಗಬೇಕು. ಯುವಜನತೆ ದಾರಿ ತಪ್ಪದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಬೇಕು. ಶಿಕ್ಷಣ ಸಂಸ್ಥೆಗಳು ಕೇವಲ ಅಂಕಗಳನ್ನು ನೀಡುವ ಕಾರ್ಖಾನೆಗಳಾಗದೆ, ಉತ್ತಮ ನಾಗರಿಕರನ್ನು ಸಮಾಜಕ್ಕೆ ನೀಡುವ ಕೇಂದ್ರಗಳಾಗಬೇಕು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ಮಕ್ಕಳ ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ಸರ್ಕಾರದ ಈ ಶಿಸ್ತು ಕ್ರಮ ನಾಳಿನ ಸುಸಂಸ್ಕೃತ ಭಾರತದ ನಿರ್ವಣಕ್ಕೆ ಪೂರಕವಾಗಿದೆ. ಸಭ್ಯತೆಯ ಗೆರೆ ದಾಟದ ಕಲೆಗೆ ಎಂದಿಗೂ ಗೌರವ ಇದ್ದೇ ಇರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net