ಸಂಪಾದಕೀಯ: ಬಡವರ ಶೋಷಣೆ ಸಲ್ಲ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಆಹಾರ ಭದ್ರತೆ ಎನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಬಡ ಪ್ರಜೆಯ ಮೂಲಭೂತ ಹಕ್ಕು. ಬೆಲೆ ಏರಿಕೆಯ ಈ ಸವಾಲಿನ ದಿನಗಳಲ್ಲಿ ದಿನಗೂಲಿ ನೌಕರರು, ಕಾರ್ವಿುಕರು ಹಾಗೂ ಶೋಷಿತ ವರ್ಗದವರಿಗೆ ಸರ್ಕಾರದ ಉಚಿತ ಅಥವಾ ರಿಯಾಯಿತಿ ದರದ ಪಡಿತರ ಯೋಜನೆಯೇ ಜೀವನಾಧಾರ. ಆದರೆ, ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ, ಅದರಲ್ಲೂ ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್​ಗಳ ಕುರಿತಂತೆ ಸರ್ಕಾರ ಕೈಗೊಳ್ಳುತ್ತಿರುವ ನಿರ್ಧಾರಗಳು ಮತ್ತು ಪದೇಪದೆ ಬದಲಾಯಿಸುತ್ತಿರುವ ನಿಯಮಗಳು ಬಡವರ್ಗದವರನ್ನು ತೀವ್ರ ಸಂಕಷ್ಟಕ್ಕೆ ಈಡುಮಾಡಿವೆ.
ಸರ್ಕಾರವು ಬಿಪಿಎಲ್ ಕಾರ್ಡ್​ಗಳ ಪರಿಶೀಲನೆ ನಡೆಸುವ ನೆಪದಲ್ಲಿ ನಿರ್ಧರಿಸುತ್ತಿರುವ ಮಾನದಂಡಗಳು ಸಂವೇದನಶೀಲವಾಗಿಲ್ಲ. ಸಣ್ಣಪುಟ್ಟ ಕೆಲಸ ಮಾಡಿ ಜೀವನ ಸಾಗಿಸುವವರನ್ನೂ ತೆರಿಗೆ ಕಡಿತ (ಟಿಡಿಎಸ್) ಪ್ರಮಾಣಪತ್ರ ಸಲ್ಲಿಸಿರುವ ಕಾರಣಕ್ಕೆ ಆದಾಯ ತೆರಿಗೆದಾರರೆಂದು ಪರಿಗಣಿಸಿ ಬಿಪಿಎಲ್ ಕಾರ್ಡ್​ಗಳನ್ನು ರದ್ದುಗೊಳಿಸುತ್ತಿರುವುದು ಅತ್ಯಂತ ಖಂಡನೀಯ. ತಾತ್ಕಾಲಿಕ ಉದ್ಯೋಗ, ಬ್ಯಾಂಕ್ ವಹಿವಾಟು ಅಥವಾ ಇತರ ನಿಯಮಗಳ ಕಾರಣಕ್ಕೆ ಟಿಡಿಎಸ್ ಕಡಿತಗೊಂಡ ತಕ್ಷಣವೇ ಒಬ್ಬ ವ್ಯಕ್ತಿ ಶ್ರೀಮಂತನಾಗುವುದಿಲ್ಲ. ವಾರ್ಷಿಕವಾಗಿ ನಿಗದಿತ ಆದಾಯ ಮಿತಿಗಿಂತ ಕಡಿಮೆ ಗಳಿಸುವ ಸಣ್ಣ ವ್ಯಾಪಾರಿಗಳು, ಚಾಲಕರು ಹಾಗೂ ಗುತ್ತಿಗೆ ಕಾರ್ವಿುಕರ ಕಾರ್ಡ್​ಗಳು ಈ ರೀತಿಯ ಅವೈಜ್ಞಾನಿಕ ತೀರ್ವನಗಳಿಂದಾಗಿ ರದ್ದಾಗುತ್ತಿವೆ. ಇದರಿಂದಾಗಿ ಲಕ್ಷಾಂತರ ಕುಟುಂಬಗಳು ನಿತ್ಯದ ಅನ್ನದ ಹಕ್ಕಿನಿಂದ ವಂಚಿತವಾಗುತ್ತಿವೆ. ಬಡವರ ಆತ್ಮಗೌರವ ಹಾಗೂ ಜೀವನೋಪಾಯಕ್ಕೆ ಧಕ್ಕೆ ಆಗುತ್ತಿದೆ. ರದ್ದಾಗಿರುವ ಬಿಪಿಎಲ್ ಕಾರ್ಡ್​ಗಳನ್ನು ಮರಳಿ ಪಡೆಯಲು ಬಡವರು ದೈನಂದಿನ ಕೆಲಸಗಳನ್ನು ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ, ತಾಂತ್ರಿಕ ಲೋಪಗಳಿಂದಾಗಿ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ. ಬಡತನದಲ್ಲಿದ್ದರೂ ಅದನ್ನು ಸಾಬೀತುಪಡಿಸಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದೊದಗಿರುವುದು ಸಾಮಾಜಿಕ ನ್ಯಾಯಕ್ಕೆ ಎಸಗುತ್ತಿರುವ ಅಪಚಾರ.
ದೇಶದ ಕೊನೆಯ ವ್ಯಕ್ತಿಗೂ ಹಸಿವಿನಿಂದ ಮುಕ್ತಿ ಸಿಗಬೇಕು ಎನ್ನುವುದೇ ಸಾಮಾಜಿಕ ಸುರಕ್ಷಾ ಯೋಜನೆಗಳ ಮೂಲ ಉದ್ದೇಶ. ಆದರೆ, ನಿಯಮಗಳ ಸರಳೀಕರಣದ ಬದಲು ಕಠಿಣ ಮತ್ತು ಜಟಿಲ ಷರತ್ತುಗಳನ್ನು ವಿಧಿಸುವ ಮೂಲಕ ಅರ್ಹ ಫಲಾನುಭವಿಗಳನ್ನೇ ಯೋಜನೆಯಿಂದ ಹೊರಗಿಟ್ಟರೆ ಅಂತಹ ಯೋಜನೆಗಳಿಂದ ಏನು ಪ್ರಯೋಜನ? ಇದು ಅರ್ಹ ಬಡವರಿಗೆ ಎಸಗುವ ಅನ್ಯಾಯವಲ್ಲವೇ? ಅನರ್ಹರನ್ನು ಹೊರಗಿಡುವ ಪ್ರಕ್ರಿಯೆಗೆ ಯಾರ ಅಭ್ಯಂತರವೂ ಇಲ್ಲ, ಆದರೆ ಆ ನೆಪದಲ್ಲಿ ನೈಜ ಬಡವರ ಪಡಿತರ ಹಕ್ಕನ್ನು ಕಸಿದುಕೊಳ್ಳುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.
ಆಡಳಿತ ಯಂತ್ರವು ಬಡವರ ಕಷ್ಟಕ್ಕೆ ಸ್ಪಂದಿಸುವ ಸಂವೇದನಾಶೀಲತೆಯನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಕೇವಲ ತಾಂತ್ರಿಕ ಡೇಟಾ ಅಥವಾ ತಪ್ಪು ಅಂಕಿಅಂಶಗಳನ್ನು ಆಧಾರವಾಗಿಟ್ಟುಕೊಂಡು ಕಾರ್ಡ್​ಗಳನ್ನು ಏಕಾಏಕಿ ರದ್ದುಗೊಳಿಸುವ ಬದಲು, ತಳಮಟ್ಟದಲ್ಲಿ ಸರಿಯಾದ ಪರಿಶೀಲನೆ ನಡೆಸಬೇಕು. ಟಿಡಿಎಸ್ ಒಂದನ್ನೇ ಮಾನದಂಡವನ್ನಾಗಿ ಮಾಡದೆ ಅವರ ನೈಜ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಬೇಕು.
ಆಹಾರ ಧಾನ್ಯ ಪಡೆಯುವುದು ಬಡವರ ಸಂವಿಧಾನಾತ್ಮಕ ಹಕ್ಕು. ನಿಯಮಗಳ ಪರಿಷ್ಕರಣೆ ಎನ್ನುವುದು ಬಡವರ ಹೊಟ್ಟೆಗೆ ಹೊಡೆಯುವ ಅಸ್ತ್ರವಾಗಬಾರದು. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net