ಸಂಪಾದಕೀಯ: ಭಾವನಾತ್ಮಕ ವ್ಯಕ್ತಿಚಿತ್ರಗಳು

ಪುಸ್ತಕದ ಮುಖಪುಟಗಳು
ಪುಸ್ತಕದ ಮುಖಪುಟಗಳು
Published on
ವ್ಯಕ್ತಿಚಿತ್ರಗಳಿಗೆ ನಮ್ಮಲ್ಲೊಂದು ಪರಂಪರೆಯೇ ಇದೆ. ಡಿವಿಜಿಯವರ "ಜ್ಞಾಪಕ ಚಿತ್ರಶಾಲೆ' ಒಂದು ಪರಂಪರೆಯನ್ನೇ ಸಮರ್ಥವಾಗಿ ನಿಲ್ಲಿಸುತ್ತದೆ. ವಿಸೀಯವರು ಸಮರ್ಥ ವ್ಯಕ್ತಿ ಚಿತ್ರಗಳನ್ನು ನೀಡಿದ್ದಾರೆ. ಎ.ಎನ್​. ಮೂರ್ತಿರಾಯರ "ಪತ್ರಗಳು&ಚಿತ್ರಗಳು' ಅನನ್ಯ ಕೃತಿ. ಎಚ್ಚೆಸ್ಕೆಯವರಂತೂ ವ್ಯಕ್ತಿಚಿತ್ರಗಳಿಗೆ ಒಂದು ಮಾದರಿಯನ್ನೇ ರೂಪಿಸಿದರು. ಇವೆಲ್ಲವೂ ಸಾಂಸ್ಕೃತಿಕ ದಾಖಲಾತಿಯ ರೂಪಗಳು. ಇಂತಹದೇ ಮಾದರಿ ಇಟ್ಟುಕೊಂಡು ರೂಪುಗೊಂಡಿದ್ದು "ಕಾಡಸುರಗಿ& ಕಾನನದ ಕುಸುಮಗಳು' ಕೃತಿ. 
ಇಂದಿನ ಡಿಜಿಟಲ್​ ಜಗತ್ತಿನಲ್ಲಿ ವಿಕಿಪೀಡಿಯಾ ಮಾದರಿ ಪ್ರಚಲಿತವಾಗಿದೆ. ಹುಟ್ಟಿದ ಊರು, ತಂದೆ&ತಾಯಿ, ಬಾಲ್ಯ, ಸಾಧನೆ ಮುಂತಾದ ವಿವರಗಳೆಲ್ಲ ಅದರಲ್ಲಿರುತ್ತವೆ. ಆದರೆ ಅದಕ್ಕೆ ಭಾವನಾತ್ಮಕ ನೆಲೆ ಇರುವುದಿಲ್ಲ. ಗೂಗಲ್​ನಲ್ಲಿ ಸರ್ಚ್​ ಮಾಡಿದ ತಕ್ಷಣ ದೊರಕುವ ವಿವರ ನಿಮಗೆ ಒಬ್ಬ ವ್ಯಕ್ತಿಯ ಕುರಿತು ಮಾಹಿತಿ ನೀಡಬಹುದೇ ಹೊರತು ವ್ಯಕ್ತಿತ್ವವನ್ನು ಕಟ್ಟಿಕೊಡಲಾರದು. ಈ ನಿಟ್ಟಿನಲ್ಲಿ "ಕಾಡಸುರಗಿ' ಕೃತಿಯು ಸಂವೇದನೆಗಳೊಂದಿಗೆ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡುತ್ತದೆ.
ಬಿ.ಕೆ. ಸುಮಿತ್ರಾ, ಜಿ.ಕೆ. ವೆಂಕಟೇಶ್​, ಕೋಡ್ಲು ರಾಮಕೃಷ್ಣ, ಅರ್ಚನಾ ಉಡುಪ, ಕವಿರಾಜ್​, ಶಮಿತಾ ಮಲ್ನಾಡ್​ ಸೇರಿದಂತೆ ಒಟ್ಟು 40 ಸಾಧಕರ ಜೀವನ ಸಾಧನೆ ಚಿತ್ರಣ ಇದರಲ್ಲಿದೆ. ಬಹು ಎತ್ತರಕ್ಕೆ ಏರಿದವರು, ಏರುವ ಹಾದಿಯಲ್ಲಿರುವವರು, ಜಾಗತಿಕ ಮಟ್ಟವನ್ನು ತಲುಪಿದವರು ಇದರಲ್ಲಿದ್ದಾರೆ. ಇವರೆಲ್ಲರೂ ಬೇರೆ ಬೇರೆ ಕ್ಷೇತ್ರಗಳಿಗೆ ಸಂಬಂಧಿಸಿದವರು. ವಿವಿಧ ವಯೋಮಾನದವರು. ಅವರೆಲ್ಲ ಮಲೆನಾಡಿನಿಂದ ಬಂದವರು. ಅಲ್ಲಿಂದ ಏನನ್ನು ಪಡೆದಿದ್ದಾರೆ, ತಮ್ಮೊಳಗೆ ಮಲೆನಾಡನ್ನು ಹೇಗೆ ಉಳಿಸಿಕೊಂಡಿದ್ದಾರೆ ಎನ್ನುವ ಅಂಶಕ್ಕೆ ಪ್ರಾಧಾನ್ಯತೆ ಕೊಟ್ಟು ಇಲ್ಲಿನ ವ್ಯಕ್ತಿಚಿತ್ರಗಳನ್ನು ಕಟ್ಟಲಾಗಿದೆ. 
ವಿವಿಧ ಲೇಖಕರು ಈ ವ್ಯಕ್ತಿಚಿತ್ರಗಳನ್ನು ಬರೆದಿದ್ದಾರೆ. ಈ ಎಲ್ಲ ವ್ಯಕ್ತಿಚಿತ್ರಗಳ ಮೂಲಕ ಮಲೆನಾಡಿನ, ಅದರಲ್ಲಿಯೂ ತೀರ್ಥಹಳ್ಳಿ, ಶೃಂಗೇರಿ, ಕೊಪ್ಪ ಭಾಗದ ಮಲೆನಾಡಿನ ಚಿತ್ರಣ ಸಿಗುತ್ತದೆ. ಈ ಭಾಗಕ್ಕೆ ಪ್ರಾದೇಶಿಕ ವೈಶಿಷ್ಟ್ಯ ಇದೆ. ಕರಾವಳಿಯ ಘಟ್ಟ ಇಳಿದ ಕೂಡಲೇ ಆರಂಭವಾಗುವ ಇಲ್ಲಿ ಕರಾವಳಿಯ ಯಕ್ಷಗಾನದಿಂದ ಹಿಡಿದು ತಿನಿಸುಗಳವರೆಗಿನ ಸಂಬಂಧವಿದೆ. ಇನ್ನೊಂದು ದಿಕ್ಕಿನಲ್ಲಿ ಶಿವಮೊಗ್ಗೆಯ ಮಲೆನಾಡಿನ ಪರಿಸರವಿದೆ. ಕೊಂಚ ದೂರ ಹೋದರೆ ಅರೆಮಲೆನಾಡು ಸಿಗುತ್ತದೆ. ಇದೆಲ್ಲದರ ಜತೆಗೆ ಈ ಪ್ರದೇಶಕ್ಕೆ ತನ್ನದೇ ಆದ ಅಸ್ಮಿತೆ ಇದೆ. ಶೃಂಗೇರಿ ಸಂಸ್ಥಾನದ ಚೌಕಟ್ಟಿನಿಂದ ಹಿಡಿದು ಸಮಾಜವಾದಿ ಚಳವಳಿವರೆಗಿನ ರಾಜಕೀಯ ಹಿನ್ನೆಲೆಯೂ ಇದೆ. ಈ ಎಲ್ಲವೂ ವ್ಯಕ್ತಿಚಿತ್ರಗಳ ಮೂಲಕ ಮೂಡುವುದರಿಂದ ಇದು ಒಂದು ರೀತಿಯಲ್ಲಿ ಪ್ರದೇಶದ ಚರಿತ್ರೆ ಕೂಡ ಆಗಿದೆ. 
ಕಾಡಸುರಗಿ (ಕಾನನದ ಕುಸುಮಗಳು)
ಸಂಪಾದಕ ಮಂಡಳಿ: ಮಂಡಗದ್ದೆ ಶ್ರೀನಿವಾಸಯ್ಯ, ಎನ್​.ಎಸ್​. ಶ್ರೀಧರಮೂರ್ತಿ, ಚಿದಾನಂದ ಹೆಗ್ಗಾರ್​, ಎಚ್​.ಸಿ. ಜಯಪ್ರಕಾಶ್​
ಪುಟಗಳು: 272
ಬೆಲೆ: 400 ರೂ.
ಪ್ರಕಾಶನ: ಮಲೆನಾಡು ಬರಹಗಾರರ ವೇದಿಕೆ, ಸುಜನ, 137, 8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಆರ್​ಎಂವಿ 2ನೇ ಹಂತ, ಡಾಲರ್ಸ್​ ಕಾಲೋನಿ, ಬೆಂಗಳೂರು& 560 094.
ಅಕ್ಷರ ಲೋಕದ ನೋಟಗಳು (ಸಾಹಿತ್ಯ&ಭಾವ&ಲಹರಿ)
ಲೇಖಕರು: ಸುಪ್ತದಿಪ್ತಿ (ಜ್ಯೋತಿ ಮಹಾದೇವ್​)
ಪುಟಗಳು: 200 ಬೆಲೆ: 200 ರೂ.
ಪ್ರಕಾಶಕರು: ಶ್ರೀರಾಮ ಪ್ರಕಾಶನ, 893/ಡಿ, 3ನೇ ಕ್ರಾಸ್​, ನೆಹರೂ ನಗರ, ಪೂರ್ವ ಬಡಾವಣೆ, ಮಂಡ್ಯ&571401.
ಕಾಫಿ ಕಿಂಗ್​ (ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ. ಸಿದ್ಧಾರ್ಥ ಜೀವನಚಿತ್ರಣ) 
ಲೇಖಕರು: ರುಕ್ಮಿಣಿ ರಾವ್​, ಪ್ರಸೇನ್​ಜಿತ್​ ದತ್ತಾ
ಪುಟಗಳು: 210 ಬೆಲೆ: 699 ರೂ.
ಪ್ರಕಾಶಕರು: ಪ್ಯಾನ್​ ಮ್ಯಾಕ್​ಮಿಲನ್​ ಪಬ್ಲಿಷಿಂಗ್​ ಇಂಡಿಯಾ, 707, ಕೈಲಾಶ್​ ಬಿಲ್ಡಿಂಗ್​, 26, ಕೆಜಿ ಮಾರ್ಗ್​, ನವದೆಹಲಿ& 110001
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net