ಸಂಪಾದಕೀಯ: ಡಿಜೆ ನಿಷೇಧ ಸೂಕ್ತ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಸಾಂಸ್ಕೃತಿಕ ಹಾಗೂ ಧಾರ್ವಿುಕ ಸಮಾರಂಭಗಳಲ್ಲಿ ಡಿಜೆ ಅಬ್ಬರ ಇತ್ತೀಚಿನ ದಿನಗಳಲ್ಲಿ ಮಿತಿ ಮೀರಿದೆ. ಇದು ಹೃದ್ರೋಗಿಗಳಿಗೆ ತೊಂದರೆಯುಂಟು ಮಾಡುತ್ತಿದ್ದು, ಶಬ್ದದ ಅತಿಯಾದ ಅಬ್ಬರ ಇತರರಿಗೂ ಕಿರಿಕಿಯನ್ನು ಉಂಟುಮಾಡುತ್ತಿದೆ. ಆದ್ದರಿಂದ, ಡಿಜೆ ನಿಷೇಧಿಸಬೇಕು ಎಂಬ ಒಕ್ಕೋರಲ ಆಗ್ರಹ ವಿಧಾನಸಭೆಯಲ್ಲಿ ಪಕ್ಷಾತೀತವಾಗಿ ಕೇಳಿಬಂದಿದೆ. ಈ ಕುರಿತಂತೆ ಸರ್ಕಾರ ಸೂಕ್ತ ನಿರ್ಣಯ ತಳೆಯುವುದು ಅಗತ್ಯ. ಸಾಂಸ್ಕೃತಿಕ ಹಾಗೂ ಧಾರ್ವಿುಕ ಕಾರ್ಯಕ್ರಮಗಳಲ್ಲಿ ಅಬ್ಬರದ ಸಂಗೀತಕ್ಕೆ ಕಡಿವಾಣ ಹಾಕಲು, ಡಿಜೆ ನಿಷೇಧಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪ್ರತಿಕ್ರಿಯಿಸಿದ್ದಾರೆ.

ಡಿಜೆ ಶಬ್ದವು ನಿಗದಿತ ಡೆಸಿಬಲ್ ಮಿತಿಗಿಂತ ಹತ್ತಾರು ಪಟ್ಟು ಹೆಚ್ಚಾಗಿರುತ್ತದೆ. ಇದು ಕಿವುಡುತನ, ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಅತಿಯಾದ ಬೇಸ್ ಮತ್ತು ಕಂಪನದಿಂದಾಗಿ ಹಿರಿಯ ನಾಗರಿಕರು, ಹೃದಯ ಸಂಬಂಧಿ ಕಾಯಿಲೆ ಇರುವವರು ಮತ್ತು ಸಣ್ಣ ಮಕ್ಕಳಲ್ಲಿ ಹೃದಯಾಘಾತ ಅಥವಾ ತೀವ್ರ ಅಸ್ವಸ್ಥತೆ ಕಾಣಿಸಿಕೊಳ್ಳುವ ಅಪಾಯವಿರುತ್ತದೆ. ಪಕ್ಷಿಗಳು ಮತ್ತು ಸಾಕುಪ್ರಾಣಿಗಳು ಈ ಭೀಕರ ಶಬ್ದಕ್ಕೆ ಹೆದರಿ ದಿಕ್ಕಾಪಾಲಾಗುತ್ತವೆ. ಭಕ್ತಿಗೀತೆಗಳ ಬದಲು ಅಬ್ಬರದ ಸಿನಿಮಾ ಹಾಡುಗಳು ಮತ್ತು ರಿಮಿಕ್ಸ್ ಸಂಗೀತವನ್ನು ಹಾಕುವುದರಿಂದ ಧಾರ್ವಿುಕ ಸಮಾರಂಭದ ಗಂಭೀರತೆ ಮತ್ತು ಪಾವಿತ್ರ್ಯತೆ ಕೂಡ ಹಾಳಾಗುತ್ತಿದೆ. ಹಲವು ಬಾರಿ ಮೆರವಣಿಗೆಗಳಲ್ಲಿ ಅಬ್ಬರದ ಡಿಜೆ ಹಾಕಿ ಪ್ರಚೋದನಕಾರಿ ವರ್ತನೆ ತೋರುವುದು ಗುಂಪು ಘರ್ಷಣೆಗಳಿಗೆ ದಾರಿ ಮಾಡಿಕೊಡುತ್ತಿದೆ.

ಕರ್ನಾಟಕದಲ್ಲಿ ವಿಶೇಷವಾಗಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಮೆರವಣಿಗೆಗಳ ಸಂದರ್ಭದಲ್ಲಿ ಡಿಜೆ ಬಳಕೆ ವಿಪರೀತವಾಗಿದೆ. ಮೆರವಣಿಗೆಗಳಲ್ಲಿ ಡಿಜೆ ಹಚ್ಚಿ ಪ್ರಚೋದನಕಾರಿ ಹಾಡುಗಳನ್ನು ಹಾಕುವುದರಿಂದ ಕೋಮು ಸಂಘರ್ಷ ಉಂಟಾಗುವ ಸಾಧ್ಯತೆ ಇರುತ್ತದೆ ಎಂದು ಪೊಲೀಸ್ ಇಲಾಖೆ ಹಲವು ಜಿಲ್ಲೆಗಳಲ್ಲಿ ಡಿಜೆ ಬಳಕೆಗೆ ನಿರ್ಬಂಧ ಹೇರಲು ಮುಂದಾಗಿದೆ. ಅಲ್ಲದೆ, ಡಿಜೆಯಿಂದಾಗಿ ನಾಡಿನ ಸಾಂಪ್ರದಾಯಿಕ ವಾದ್ಯಗಳಾದ ಡೋಲು, ತಮಟೆ ಮತ್ತು ವೀರಗಾಸೆಯಂತಹ ಜಾನಪದ ಕಲೆಗಳು ನಶಿಸುತ್ತಿವೆ ಎಂಬ ಆತಂಕ ಸಾಂಸ್ಕೃತಿಕ ವಲಯದಲ್ಲಿದೆ.

ಭಾರತದ ಕೆಲವು ರಾಜ್ಯಗಳು ಈಗಾಗಲೇ ಡಿಜೆ ಬಳಕೆಯ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಕನ್ವರ್ ಯಾತ್ರೆ ಮತ್ತು ಇತರ ಧಾರ್ವಿುಕ ಮೆರವಣಿಗೆಗಳಲ್ಲಿ ಅಶ್ಲೀಲ ಹಾಡು ಮತ್ತು ಅತಿ ಹೆಚ್ಚಿನ ಶಬ್ದದ ಡಿಜೆ ಬಳಕೆಯನ್ನು ನಿಷೇಧಿಸಿದೆ. ಭಕ್ತಿಗೀತೆಗಳನ್ನು ಮಾತ್ರ ಕಡಿಮೆ ಶಬ್ದದಲ್ಲಿ ಬಳಸಲು ಅನುಮತಿ ನೀಡಲಾಗಿದೆ. ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯಂತಹ ನಗರಗಳಲ್ಲಿ ಗಣೇಶೋತ್ಸವದ ಸಮಯದಲ್ಲಿ ಶಬ್ದ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸುವ ಡಿಜೆ ಮಾಲೀಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲಿನ ಹೈಕೋರ್ಟ್ ಕೂಡ ಡಿಜೆ ನಿಷೇಧವನ್ನು ಎತ್ತಿ ಹಿಡಿದಿದೆ. ಗೋವಾದಲ್ಲಿ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ರಾತ್ರಿ 10 ಗಂಟೆಯ ನಂತರ ಬಯಲು ಪ್ರದೇಶಗಳಲ್ಲಿ ಡಿಜೆ ಮತ್ತು ಧ್ವನಿವರ್ಧಕಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮೆರವಣಿಗೆಗಳಲ್ಲಿ ಡಿಜೆ ಸಂಪೂರ್ಣ ನಿಷೇಧಿಸುವ ಬಗ್ಗೆ ಒಡಿಶಾ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ. ಕರ್ನಾಟಕ ಕೂಡ ಈ ನಿಟ್ಟಿನಲ್ಲಿ ಸೂಕ್ತ ನಿಯಮ ಅಥವಾ ಕಾನೂನು ರೂಪಿಸಿ, ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net