

ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸಲು ಆಂಧ್ರಪ್ರದೇಶ ಸರ್ಕಾರ ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ವಿವಿಧ ದೇಶಗಳ ಮಾದರಿಗಳನ್ನು ಅಧ್ಯಯನ ಮಾಡಲು ಸಚಿವರ ಸಮಿತಿ ರಚನೆ ಮಾಡಲಾಗಿದೆ. ಆಸ್ಟ್ರೇಲಿಯಾ ಇತ್ತೀಚೆಗಷ್ಟೇ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸಿದೆ. ಮಲೇಷ್ಯಾ ಸರ್ಕಾರ ಕೂಡ ಈ ಕುರಿತಂತೆ ಗಂಭೀರ ಚಿಂತನೆ ನಡೆಸಿದೆ. ಸಾಮಾಜಿಕ ಜಾಲತಾಣಗಳ ಬಳಕೆಗೆ ವಯಸ್ಸಿನ ನಿರ್ಬಂಧ ವಿಧಿಸುವ ಮಲೇಷ್ಯಾ ಸರ್ಕಾರದ ನಿರ್ಧಾರಕ್ಕೆ ಸಂಸದರು ಹಾಗೂ ಶೇಕಡ 72ರಷ್ಟು ಜನರು ಬೆಂಬಲ ಸೂಚಿಸಿರುವುದು ಮಹತ್ವದ ಬೆಳವಣಿಗೆ.
ಆಂಧ್ರಪ್ರದೇಶದ ಮಾದರಿಯಲ್ಲಿ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸಹ ಈ ಬಗ್ಗೆ ಅಧ್ಯಯನ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯಿಂದ ವಿಚಲಿತರಾಗುತ್ತಿದ್ದು, ಇದು ಅವರ ಶೈಕ್ಷಣಿಕ ಚಟುವಟಿಕೆಗೂ ತೊಡಕಾಗಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲೂ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆ ನಿಷೇಧಿಸುವ ಆಗ್ರಹ ವ್ಯಾಪಕವಾಗುತ್ತಿದೆ. ‘ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದ ಹಾವಳಿಯಿಂದ ಮಕ್ಕಳ ಸುರಕ್ಷೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಇದಕ್ಕಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು’ ಎಂದು ಮದ್ರಾಸ್ ಹೈಕೋರ್ಟ್ನ ಮದುರೈ ಪೀಠ 2025ರ ಡಿಸೆಂಬರ್ನಲ್ಲಿ ಮಹತ್ವದ ಸೂಚನೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಭಾರತದಲ್ಲಿ 16 ವರ್ಷದೊಳಗಿನ ಮಕ್ಕಳ ಸಂಖ್ಯೆ 35 ಕೋಟಿಯಷ್ಟಿದೆ. ಈ ಪೈಕಿ ಬಹುತೇಕರು ಡಿಜಿಟಲ್ ವ್ಯಸನ ಅಥವಾ ಅತಿಯಾದ ಸ್ಕ್ರೀನ್ಟೈಮ್ವುದ ಬಳಲಿದ್ದಾರೆ. ಸ್ಮಾರ್ಟ್ ಫೋನ್ಗಳು ಮಕ್ಕಳ ಬಾಲ್ಯ, ಮುಗ್ಧತೆ, ಕುತೂಹಲ, ಉತ್ಸಾಹ ಎಲ್ಲವನ್ನೂ ಕಸಿದುಕೊಳ್ಳುತ್ತಿವೆ. 2024ರ ವರದಿಯ ಪ್ರಕಾರ ದೇಶದಲ್ಲಿ 14ರಿಂದ 16 ವಯೋಮಾನದ ಮಕ್ಕಳ ಪೈಕಿ ಶೇಕಡ 82ರಷ್ಟು ಚಿಣ್ಣರು ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ. 76% ಮಕ್ಕಳು ಸಾಮಾಜಿಕ ಜಾಲತಾಣದ ಖಾತೆ ಹೊಂದಿದ್ದು, ಅದರಲ್ಲಿ ಆಕ್ಟಿವ್ ಆಗಿದ್ದಾರೆ. ಲೋಕಲ್ ಸರ್ಕರ್ಲ್ಸ್ ಸಂಸ್ಥೆಯ ಸಮೀಕ್ಷೆ ವರದಿ ಪ್ರಕಾರ, ಈ ಮಕ್ಕಳು ಆನ್ಲೈನ್ನಲ್ಲಿ ಪ್ರತಿದಿನ ಸರಾಸರಿ ಮೂರು ಗಂಟೆ ಕಳೆಯುತ್ತಿದ್ದಾರೆ. ಸಾಮಾಜಿಕ ಮಾಧ್ಯಮ, ಒಟಿಟಿ ಹಾಗೂ ಗೇಮಿಂಗ್ನಿಂದ ಮಕ್ಕಳಲ್ಲಿ ಸಿಟ್ಟು, ಬೇಸರ, ದಣಿವು ಕಾಣಿಸಿಕೊಂಡಿದೆ ಎಂದು 9ರಿಂದ 17 ವರ್ಷದ ಮಕ್ಕಳ ಶೇಕಡ 66ರಷ್ಟು ಪಾಲಕರು ಒಪ್ಪಿಕೊಂಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮಕ್ಕಳು ಬೆಳೆಯುವ ಹಂತದಲ್ಲೇ ಗಂಭೀರ ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಹಾಗಾಗಿಯೇ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮಗಳ ಬಳಕೆಗೆ ನಿಯಂತ್ರಣ ಹೇರುವುದು ಅತ್ಯಗತ್ಯವಾಗಿದೆ ಎಂಬುದು ಹಲವು ಶಿಕ್ಷಣ ತಜ್ಞರು ಹಾಗೂ ಮಾನಸಿಕ ತಜ್ಞರ ಅಭಿಪ್ರಾಯವೂ ಆಗಿದೆ. ಆದ್ದರಿಂದ, ರಾಜ್ಯ ಸರ್ಕಾರಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಹೆಜ್ಜೆ ಇರಿಸಬೇಕಿದೆ.