

ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅತ್ಯಂತ ಜನಪ್ರಿಯ ಹಾಗೂ ಮಹತ್ವಾಕಾಂಕ್ಷೆಯ ಯೋಜನೆಯಾದ ಗೃಹಜ್ಯೋತಿಯ ಫಲಾನುಭವಿಗಳು ಇದೀಗ ಅನಿಶ್ಚಿತತೆ ಮತ್ತು ಆತಂಕದ ನಡುವೆ ಸಿಲುಕಿದ್ದಾರೆ. ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆ ಕಾರ್ಯ ಮಂದಗತಿಯಲ್ಲಿ ಸಾಗಿರುವುದೇ ಇದಕ್ಕೆ ಕಾರಣ. ಉಚಿತ ವಿದ್ಯುತ್ ಪಡೆಯುವ ಮನೆ ಮಾಲೀಕರು ಹಾಗೂ ಬಾಡಿಗೆದಾರರಲ್ಲಿ ಗೊಂದಲ ಏರ್ಪಟ್ಟಿರುವ ಪರಿಣಾಮ ಎಸ್ಕಾಂ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ವಣವಾಗಿದೆ. ಆಧಾರ್ ಮತ್ತು ಮೀಟರ್ ಲಿಂಕಿಂಗ್ ಪ್ರಕ್ರಿಯೆಯು ಆಡಳಿತಾತ್ಮಕ ಮತ್ತು ತಾಂತ್ರಿಕ ಹಿನ್ನಡೆಯಿಂದಾಗಿ ಮಂದಗತಿಯಲ್ಲಿ ಸಾಗುತ್ತಿದೆ.
ಯಾವುದೇ ಸಾರ್ವಜನಿಕ ಕಲ್ಯಾಣ ಯೋಜನೆಯಲ್ಲಿ ನಕಲಿ ಫಲಾನುಭವಿಗಳನ್ನು ತಡೆಗಟ್ಟುವುದು ಮತ್ತು ದತ್ತಾಂಶವನ್ನು ನವೀಕರಿಸುವುದು ಆಡಳಿತಾತ್ಮಕವಾಗಿ ಅವಶ್ಯಕ ಕ್ರಮವೇ ಸರಿ. ಆದರೆ, ಸೂಕ್ತ ಪೂರ್ವಸಿದ್ಧತೆಗಳಿಲ್ಲದೆ ಜಾರಿಗೆ ತರುವ ಇಂತಹ ಕ್ರಮಗಳು ಜನಹಿತ ಯೋಜನೆಯನ್ನೇ ಜನವಿರೋಧಿ ಅನುಭವವನ್ನಾಗಿ ಪರಿವರ್ತಿಸುತ್ತವೆ. ಸದ್ಯ ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆಗೆ 1.64 ಕೋಟಿ ಗ್ರಾಹಕರು ಫಲಾನುಭವಿಗಳಾಗಿದ್ದಾರೆ. ಅರ್ಹ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಜುಲೈ 1ರಿಂದ ಆರಂಭವಾಗಿದ್ದು, ವಿವಿಧ ಕಾರಣಗಳಿಂದ ಆಮೆಗತಿಯಲ್ಲಿ ನಡೆಯುತ್ತಿದೆ. ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಈವರೆಗೆ ಹೆಚ್ಚಿನ ಮನೆಗಳಿಗೆ ಸಿಬ್ಬಂದಿ ಬಂದಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ರಾಜ್ಯದ ಪ್ರತಿಯೊಂದು ಮನೆಗೆ ಪ್ರತಿ ತಿಂಗಳು ಗರಿಷ್ಠ 200 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ನೀಡುವುದು ಗೃಹಜ್ಯೋತಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಇಂಧನ ಇಲಾಖೆ ಬಿಡುಗಡೆ ಮಾಡಿರುವ ಮೊಬೈಲ್ ಫೋನ್ ಅಪ್ಲಿಕೇಶನ್ ಹಾಗೂ ತಂತ್ರಾಂಶದಲ್ಲಿ ಸರ್ವರ್ ಸಮಸ್ಯೆಗಳು, ಒಟಿಪಿ ವಿಳಂಬ ಮತ್ತು ಆಧಾರ್ ದೃಢೀಕರಣದಲ್ಲಿ ದೋಷಗಳು ಕಾಣಿಸಿಕೊಂಡಿರುವುದರಿಂದ ಫಜೀತಿ ಇನ್ನಷ್ಟು ಹೆಚ್ಚಾಗಿದೆ. ಮನೆ ಬದಲಾಯಿಸಿದ ಬಾಡಿಗೆದಾರರು ತಮ್ಮ ಹಿಂದಿನ ಮೀಟರ್ನಿಂದ ಆಧಾರ್ ಡಿ-ಲಿಂಕ್ ಮಾಡಿ ಹೊಸ ಸಂಪರ್ಕಕ್ಕೆ ಜೋಡಿಸುವ ಪ್ರಕ್ರಿಯೆ ಜಟಿಲವಾಗಿದೆ. ಅಲ್ಲದೆ, ಮಾಹಿತಿಯ ಕೊರತೆಯೂ ಸಮಸ್ಯೆಯನ್ನು ಉಲ್ಬಣಗೊಳಿಸಿದೆ. ಪರಿಶೀಲನೆಗೆ ನಿಗದಿಪಡಿಸಿದ ದಿನಾಂಕ, ಅಗತ್ಯ ದಾಖಲೆಗಳು ಹಾಗೂ ವಿಧಾನಗಳ ಬಗ್ಗೆ ಸಾರ್ವಜನಿಕರಲ್ಲಿ ಸ್ಪಷ್ಟತೆಯಿಲ್ಲದಿರುವುದು ಆತಂಕವನ್ನು ಇಮ್ಮಡಿಗೊಳಿಸಿದೆ.
ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಎಸ್ಕಾಂ ಉಪವಿಭಾಗ ಕಚೇರಿಗಳು ಮತ್ತು ಗ್ರಾಮ್ ಒನ್/ಕರ್ನಾಟಕ ಒನ್ ಕೇಂದ್ರಗಳ ಮುಂದೆ ದಿನವಿಡೀ ಕಾಯುವ ಪರಿಸ್ಥಿತಿ ನಿರ್ವಣವಾಗಿರುವುದು ಶೋಚನೀಯ. ತಾಂತ್ರಿಕ ಅಡೆತಡೆಗಳ ಕಾರಣದಿಂದಾಗಿ ಅರ್ಹ ಬಡ ಕುಟುಂಬಗಳು ಮುಂದಿನ ತಿಂಗಳ ವಿದ್ಯುತ್ ಬಿಲ್ ಪಾವತಿಸಬೇಕಾಗಿ ಬರಬಹುದೇನೋ ಎಂಬ ಭಯದಲ್ಲಿವೆ.
ಇಂಧನ ಇಲಾಖೆ ಮೊದಲನೆಯದಾಗಿ, ಸರ್ವರ್ ಸಾಮರ್ಥ್ಯವನ್ನು ಹೆಚ್ಚಿಸಿ ಮೊಬೈಲ್ ಫೋನ್ ಆಪ್ನ ತಾಂತ್ರಿಕ ದೋಷಗಳನ್ನು ಸರಿಪಡಿಸಬೇಕು. ಸಾರ್ವಜನಿಕರಿಗೆ ಯಾವುದೇ ದಂಡ ಅಥವಾ ಗ್ಯಾರಂಟಿ ರದ್ದತಿಯ ಭಯವಿಲ್ಲದಂತೆ ಸಾಕಷ್ಟು ಕಾಲಾವಕಾಶವನ್ನು ನೀಡಬೇಕು. ಕಚೇರಿಗಳಿಗೆ ಅಲೆಯುವ ಬದಲು, ಮೀಟರ್ ರೀಡರ್ಗಳು ಅಥವಾ ಸ್ಥಳೀಯ ಆಡಳಿತ ಸಿಬ್ಬಂದಿ ಮೂಲಕ ಮನೆ-ಮನೆಗೆ ತೆರಳಿ ಮರುಪರಿಶೀಲನೆ ಮಾಡುವ ಪ್ರಕ್ರಿಯೆ ವೇಗ ಪಡೆಯಬೇಕು. ಸ್ಪಷ್ಟ ಮಾರ್ಗಸೂಚಿಗಳೊಂದಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಜಾಗೃತಿ ಮೂಡಿಸಬೇಕು.
ತಂತ್ರಜ್ಞಾನವು ಜನರ ಬದುಕನ್ನು ಸುಲಭಗೊಳಿಸಬೇಕೇ ಹೊರತು ಶ್ರಮವನ್ನು ಹೆಚ್ಚಿಸಬಾರದು. ಸರ್ಕಾರ ಮತ್ತು ಇಂಧನ ಇಲಾಖೆಯು ತಕ್ಷಣ ಎಚ್ಚೆತ್ತುಕೊಂಡು, ಗೊಂದಲಗಳನ್ನು ಪರಿಹರಿಸಿ, ಜನಸಾಮಾನ್ಯರಿಗೆ ಅನಗತ್ಯ ಮಾನಸಿಕ ಹಾಗೂ ಆರ್ಥಿಕ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕಿದೆ.