ಸಂಪಾದಕೀಯ: ಎಚ್ಚರಿಕೆ ಇರಲಿ

ಸಂಪಾದಕೀಯ: ಎಚ್ಚರಿಕೆ ಇರಲಿ
ಸಂಪಾದಕೀಯ: ಎಚ್ಚರಿಕೆ ಇರಲಿ
Published on

ಸಂಪಾದಕೀಯ: ರಾಜ್ಯದಲ್ಲಿ ಜಲ ಅಪಘಾತಗಳು ಅಂದರೆ ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುತ್ತಿರುವ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿರುವುದು ತೀವ್ರ ಕಳವಳಕಾರಿ. ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚಿದೆ. ಆದರೆ, ಹೀಗೆ ಪ್ರವಾಸಕ್ಕೆ ತೆರಳಿದವರು ಅಲ್ಲಿನ ಭೌಗೋಳಿಕ ಮಾಹಿತಿ ಮತ್ತು ಜಲಮೂಲಗಳ ಆಳದ ಬಗ್ಗೆ ಸರಿಯಾದ ಅರಿವು ಇಲ್ಲದೆ ದಿಢೀರನೆ ನೀರಿಗಿಳಿದು ಆಪತ್ತನ್ನು ಬರಮಾಡಿಕೊಳ್ಳುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳ ಕೃಷಿ ಹೊಂಡಗಳಲ್ಲೂ ಇಂಥ ಘಟನೆಗಳು ಹೆಚ್ಚಿವೆ. ನದಿ, ಸಮುದ್ರ ಮತ್ತು ಜಲಪಾತಗಳಲ್ಲಿ ಮುಳುಗಿ ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಾವೇರಿ ನದಿಯಲ್ಲಿ ಏಪ್ರಿಲ್ 19ರಂದು ಪ್ರವಾಸಿಗರ ತಂಡವೊಂದು ಸ್ನಾನಕ್ಕೆ ಇಳಿದಾಗ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ನವವಿವಾಹಿತ ದಂಪತಿ ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಏ.19ರಂದೇ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕಾವೇರಿ ನದಿಯ ರಣಿಗೇಟ್ ಎಂಬಲ್ಲಿ ಈಜಲು ಹೋದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ಮೇಲಿನ ಘಟನೆಗಳನ್ನು ಗಮನಿಸಿದರೆ, ಅಪಾಯದ ಅರಿವಿಲ್ಲದೆ ನೀರಿಗೆ ಇಳಿಯುವುದು ಮತ್ತು ರಕ್ಷಣಾ ಕವಚಗಳ ಕೊರತೆಯೇ ಹೆಚ್ಚಿನ ಸಾವುಗಳಿಗೆ ಕಾರಣವಾಗಿರುವುದು ಕಂಡುಬರುತ್ತದೆ. ಸಾರ್ವಜನಿಕರು ಪ್ರವಾಸಿ ತಾಣಗಳಲ್ಲಿ ಸ್ಥಳೀಯ ಎಚ್ಚರಿಕೆಗಳನ್ನು ಪಾಲಿಸುವುದು ಅತ್ಯಂತ ಅವಶ್ಯಕವಾಗಿದೆ.

ನೀರಿನ ಆಳ, ಸೆಳೆತ ಅಥವಾ ನೀರಿನ ಅಡಿಯಲ್ಲಿರುವ ಸುಳಿಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ನೀರಿಗೆ ಇಳಿಯುವುದರಿಂದ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ. ಕೆಲವೊಮ್ಮೆ, ಈಜು ಬರುತ್ತದೆ ಎಂಬ ಅತಿ ಆತ್ಮವಿಶ್ವಾಸದಿಂದ ಅಪಾಯಕಾರಿ ಜಾಗಗಳಲ್ಲಿ ಈಜಲು ಹೋಗುವುದು ದುರಂತಕ್ಕೆ ಕಾರಣ. ನದಿ ಮತ್ತು ಸಮುದ್ರದ ಸೆಳೆತವು ಈಜುಕೊಳದ ನೀರಿಗಿಂತ ಭಿನ್ನವಾಗಿರುತ್ತದೆ ಎಂಬುದು ಅನೇಕರ ಗಮನಕ್ಕೆ ಬರುವುದಿಲ್ಲ. ಪ್ರವಾಸಿ ತಾಣಗಳಲ್ಲಿ ಮದ್ಯಪಾನ ಮಾಡಿ ನೀರಿಗೆ ಇಳಿಯುವುದು ಅಥವಾ ಸೆಲ್ಫಿ ತೆಗೆದುಕೊಳ್ಳುವ ಹಪಾಹಪಿಯಿಂದ ಕಾಲು ಜಾರಿ ಬೀಳುವುದರಿಂದ ಅನೇಕ ಅವಘಡಗಳು ಸಂಭವಿಸುತ್ತಿವೆ. ಸಂಬಂಧಿತ ಆಡಳಿತ ಮಂಡಳಿ ಹಾಕಿರುವ ‘ಅಪಾಯ’ದ ಸೂಚನಾ ಫಲಕಗಳನ್ನು ನಿರ್ಲಕ್ಷಿಸಿ ನಿರ್ಬಂಧಿತ ಪ್ರದೇಶಗಳಿಗೆ ಪ್ರವೇಶಿಸುವುದು ಸರ್ವೆಸಾಮಾನ್ಯ ಎಂಬಂತಾಗಿದೆ.

ಪರಿಚಯವಿಲ್ಲದ ಅಥವಾ ನಿರ್ಜನವಾಗಿರುವ ಜಲಮೂಲಗಳಿಗೆ ಇಳಿಯುವ ಮುನ್ನ ಸ್ಥಳೀಯರ ಬಳಿ ಮಾಹಿತಿ ಪಡೆಯುವುದು ಅಗತ್ಯ. ನೀರಿನಲ್ಲಿ ಸೆಲ್ಫಿ ಕ್ರೇಜ್ ಬೇಡ; ಬಂಡೆಗಳ ಮೇಲೆ ಪಾಚಿ ಕಟ್ಟಿರುವುದರಿಂದ ಕಾಲು ಜಾರುವ ಸಾಧ್ಯತೆ ಹೆಚ್ಚು. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಇಲಾಖೆ ತನ್ನ ಜವಾಬ್ದಾರಿ ಮರೆಯುವಂತಿಲ್ಲ. ಪ್ರವಾಸಿ ತಾಣಗಳಲ್ಲಿ ನುರಿತ ಈಜುಗಾರರನ್ನು ಮತ್ತು ಕರಾವಳಿ ಕಾವಲು ಪಡೆಯನ್ನು ನಿಯೋಜಿಸಬೇಕು. ಅಪಾಯಕಾರಿ ಸ್ಥಳಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಎದ್ದುಕಾಣುವಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು. ಅತೀ ಹೆಚ್ಚು ಸಾವುಗಳು ಅಥವಾ ಅವಘಡಗಳು ಸಂಭವಿಸುವ ಜಲಪಾತ ಅಥವಾ ನದಿ ತೀರದ ಆಯ್ದ ಭಾಗಗಳಿಗೆ ತಡೆಗೋಡೆ ಅಥವಾ ಕಬ್ಬಿಣದ ಬೇಲಿಗಳನ್ನು ಅಳವಡಿಸುವುದು ಅಗತ್ಯ. ಶಾಲೆ ಮತ್ತು ಕಾಲೇಜುಗಳಲ್ಲಿ ನೀರಿನಲ್ಲಿನ ಸುರಕ್ಷತೆಯ ಬಗ್ಗೆ ತರಬೇತಿ ನೀಡಬೇಕು ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಅಭಿಯಾನಗಳನ್ನು ನಡೆಸಬೇಕು. ಸಣ್ಣ ಅಜಾಗರೂಕತೆಯೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. ನೀರು ಜೀವವನ್ನೂ ಕೊಡಬಲ್ಲದು, ಜೀವವನ್ನೂ ತೆಗೆಯಬಲ್ಲದು ಎಂಬ ಎಚ್ಚರಿಕೆ ಸದಾ ಇರಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net