ಸಂಪಾದಕೀಯ; ಕೃತಕ ಅಭಾವ ಸಲ್ಲ

Editorial
Editorial
Published on
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಂಘರ್ಷಗಳು ಸ್ಥಳೀಯ ಮಾರುಕಟ್ಟೆಯ ಮೇಲೆ ಹೇಗೆ ಗಂಭೀರ ಪರಿಣಾಮ ಬೀರಬಲ್ಲವು ಎಂಬುದಕ್ಕೆ ಪ್ರಸ್ತುತ ಎದುರಾಗಿರುವ ಅಡುಗೆ ಅನಿಲ ಬಿಕ್ಕಟ್ಟು ಒಂದು ಜ್ವಲಂತ ಉದಾಹರಣೆ.
ಇಸ್ರೇಲ್-ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ವೇಡ ಜಾಗತಿಕ ಇಂಧನ ಪೂರೈಕೆ ಸರಪಳಿ ಮೇಲೆ ಹೊಡೆತ ನೀಡುತ್ತಿವೆ. ಪರಿಣಾಮವಾಗಿ ದೇಶಾದ್ಯಂತ ಅಡುಗೆ ಅನಿಲದ ಕೊರತೆ ಕಾಣಿಸಿಕೊಂಡಿದ್ದು, ಹೋಟೆಲ್​ಗಳ ಕಾರ್ಯನಿರ್ವಹಣೆಗೆ ಸಮಸ್ಯೆಯಾಗಿದೆ. ಆದರೆ, ಈ ಕೊರತೆಗಿಂತಲೂ ಅಪಾಯಕಾರಿಯಾಗಿರುವುದು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವ. ವಾಣಿಜ್ಯ ಬಳಕೆ ಸಿಲಿಂಡರ್​ಗಳ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಮಧ್ಯವರ್ತಿಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಸಿಲಿಂಡರ್​ಗಳನ್ನು ಮಾರಾಟ ಮಾಡುತ್ತಿರುವುದು ಖಂಡನೀಯ.
ಹೋಟೆಲ್ ಉದ್ಯಮ ಈಗಾಗಲೇ ಬೆಲೆ ಏರಿಕೆ ಮತ್ತು ಕಾರ್ವಿುಕರ ಸಮಸ್ಯೆಯಿಂದ ಕಂಗೆಟ್ಟಿದೆ. ಅಡುಗೆ ಅನಿಲ ಕೊರತೆಯಿಂದಾಗಿ ಹಲವು ಸಣ್ಣಪುಟ್ಟ ಹೋಟೆಲ್​ಗಳು ಮುಚ್ಚುವ ಭೀತಿಯಲ್ಲಿವೆ. ಇಂತಹ ಸಂಕಷ್ಟದ ಸಮಯದಲ್ಲಿ ಜನಸಾಮಾನ್ಯರ ಮತ್ತು ಉದ್ಯಮಿಗಳ ಅಸಹಾಯಕತೆಯನ್ನು ಹಣ ಮಾಡುವ ದಾರಿಯನ್ನಾಗಿ ಬಳಸಿಕೊಳ್ಳುತ್ತಿರುವ ಕಾಳಸಂತೆಕೋರರ ವಿರುದ್ಧ ಸರ್ಕಾರ ಮತ್ತು ಜಿಲ್ಲಾಡಳಿತಗಳು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕಾಗಿದೆ. ಪೂರೈಕೆ ಮತ್ತು ಬೇಡಿಕೆ ನಡುವಿನ ಅಂತರ ಸರಿಪಡಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಲಭ್ಯವಿರುವ ಸಂಪನ್ಮೂಲಗಳು ಅರ್ಹ ಫಲಾನುಭವಿಗಳಿಗೆ ತಲುಪದಂತೆ ತಡೆಯುವ ಶಕ್ತಿಗಳನ್ನು ಮಟ್ಟಹಾಕದಿದ್ದರೆ ಯಾವುದೇ ಪ್ರಯೋಜನವಿಲ್ಲ.
ಅನಿಲ ಏಜೆನ್ಸಿಗಳ ಮೇಲೆ ನಿರಂತರ ನಿಗಾ, ದಾಸ್ತಾನು ಮಳಿಗೆಗಳ ಮೇಲೆ ಅನಿರೀಕ್ಷಿತ ದಾಳಿ ಮತ್ತು ಸಿಲಿಂಡರ್​ಗಳ ಅಕ್ರಮ ವರ್ಗಾವಣೆ ತಡೆಗೆ ಕಟ್ಟುನಿಟ್ಟಿನ ತಪಾಸಣೆ ಅಗತ್ಯ. ಕಾಳಸಂತೆಯಲ್ಲಿ ತೊಡಗಿರುವ ವ್ಯಕ್ತಿಗಳ ಪರವಾನಗಿ ರದ್ದುಪಡಿಸುವುದರ ಜತೆಗೆ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಮೂಲಕ ಸಮಾಜಕ್ಕೆ ಕಠಿಣ ಸಂದೇಶ ರವಾನಿಸಬೇಕಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ, ತೈಲ ಕಂಪನಿಗಳ ಜತೆ ರ್ಚಚಿಸಿ ಅನಿಲದ ಸುಗಮ ವಿತರಣೆಗೆ ತಕ್ಷಣದ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು.
ಪೂರೈಕೆ ವ್ಯವಸ್ಥೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಲು ಸರ್ಕಾರವು ತಕ್ಷಣವೇ ವಿಶೇಷ ಕಾರ್ಯಪಡೆಯನ್ನು ರಚಿಸಬೇಕು. ಕೇವಲ ಭರವಸೆಗಳಿಂದ ಸಮಸ್ಯೆ ಪರಿಹಾರವಾಗದು; ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರುವುದು ಇಂದಿನ ತುರ್ತು ಅಗತ್ಯ. ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಪ್ರತಿ ಸಿಲಿಂಡರ್ ಎಲ್ಲಿಗೆ ತಲುಪುತ್ತಿದೆ ಎಂಬುದನ್ನು ಟ್ರಾ್ಯಕ್ ಮಾಡುವುದರಿಂದ ಅಕ್ರಮಗಳನ್ನು ತಡೆಯಬಹುದು.
ಯುದ್ಧದಂತಹ ಜಾಗತಿಕ ಸಮಸ್ಯೆಗಳು ನಮ್ಮ ಹತೋಟಿಯಲ್ಲಿ ಇಲ್ಲದಿರಬಹುದು. ಆದರೆ, ನಮ್ಮೊಳಗಿನ ‘ಕೃತಕ ಅಭಾವ’ ಸೃಷ್ಟಿಸುವ ಶಕ್ತಿಗಳನ್ನು ನಿಗ್ರಹಿಸುವುದು ಖಂಡಿತವಾಗಿಯೂ ನಮ್ಮ ಕೈಯಲ್ಲಿದೆ. ಜನರ ದೈನಂದಿನ ಬದುಕಿನ ಜತೆ ಚೆಲ್ಲಾಟವಾಡುವ ಶಕ್ತಿಗಳ ವಿರುದ್ಧ ಸಮರ ಸಾರಬೇಕು. ಆಗ ಮಾತ್ರ ಹೋಟೆಲ್ ಉದ್ಯಮ ಮತ್ತು ಸಾಮಾನ್ಯ ಜನರ ಜೀವನ ಸುಗಮವಾಗಿ ಸಾಗಲು ಸಾಧ್ಯ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net