

ಬೆಂಗಳೂರು: ರಾಜ್ಯದಲ್ಲಿ ಒಂದಿಲ್ಲ ಒಂದು ಅಡ್ಡಿ ಆತಂಕ ಸೃಷ್ಟಿಯಾಗಿ ಸರ್ಕಾರಿ ನೇಮಕಾತಿಗಳು ನನೆಗುದಿಗೆ ಬಿದ್ದಿವೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕ ಕಾಯಿಲೆ ಆವರಿಸಿಕೊಂಡಾಗಿನಿಂದ ಪರಿಸ್ಥಿತಿ ಬಹುತೇಕ ಇದೇ ರೀತಿ ಇದೆ. ಕೋವಿಡ್ ಸಂಕಷ್ಟ ಮುಗಿದ ಮೇಲೂ ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿಗಲೇ ಇಲ್ಲ. ಇದರಿಂದ ಯುವ ಉದ್ಯೋಗಾಕಾಂಕ್ಷಿಗಳಲ್ಲಿ ನಿರಾಸೆ ಆವರಿಸಿದರೆ, ಸರ್ಕಾರದ ಹಲವು ಇಲಾಖೆಗಳು ಸಿಬ್ಬಂದಿ ಕೊರತೆಯಿಂದ ಬಳಲುತ್ತಿವೆ. ಈ ನಿಟ್ಟಿನಲ್ಲಿ ಉದ್ಯೋಗಾಕಾಂಕ್ಷಿಗಳ ಮನವಿಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಮಹತ್ವದ ನಿರ್ಣಯ ತಳೆದಿದೆ.
ರಾಜ್ಯ ಸಿವಿಲ್ ಸೇವೆಗಳ ನೇರ ನೇಮಕಾತಿಗಾಗಿ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯನ್ನು ಒಂದು ಬಾರಿಗೆ ಮಾತ್ರ ಅನ್ವಯವಾಗುವಂತೆ 5 ವರ್ಷಗಳ ಕಾಲ ಸಡಿಲಿಸಲು ಐತಿಹಾಸಿಕ ತೀರ್ಮಾನವನ್ನು ಗುರುವಾರ ನಡೆದ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ನಿರ್ಧಾರವು 2027ರ ಡಿ. 31ರವರೆಗೆ ಹೊರಡಿಸಲಾಗುವ ಎಲ್ಲ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.
ವಿವಿಧ ತಾಂತ್ರಿಕ ಕಾರಣ, ಒಳ ಮೀಸಲು ವಿಚಾರಕ್ಕೆ ನೇಮಕಾತಿ ಪ್ರಕ್ರಿಯೆಗಳು ಸಕಾಲಕ್ಕೆ ನಡೆದಿಲ್ಲ. ಇದರಿಂದಾಗಿ ಕೆಎಎಸ್, ಎಫ್ಡಿಎ, ಎಸ್ಡಿಎ ಮತ್ತು ಶಿಕ್ಷಕರು, ಪಿಡಿಒನಂಥ ಹುದ್ದೆಗಳ ನಿರೀಕ್ಷೆಯಲ್ಲಿದ್ದ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುವ ಮೊದಲೇ ವಯೋಮಿತಿ ಮೀರಿ ಹತಾಶರಾಗಿದ್ದರು. ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಆಸೆಯೇ ಕಮರಿಹೋಗಿತ್ತು.
ಈಗ ಸರ್ಕಾರ ಐದು ವರ್ಷಗಳ ರಿಯಾಯಿತಿ ನೀಡಿರುವುದರಿಂದ ಸುಮಾರು 2 ರಿಂದ 3 ಲಕ್ಷ ಹೆಚ್ಚುವರಿ ಅಭ್ಯರ್ಥಿಗಳಿಗೆ ಮತ್ತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಅವಕಾಶ ಲಭ್ಯವಾಗಲಿದೆ. ಆದ್ದರಿಂದ, ವಯೋಮಿತಿ ಮೀರುತ್ತಿದ್ದ ಉದ್ಯೋಗಾಕಾಂಕ್ಷಿಗಳ ಪಾಲಿಗೆ ಇದು ಶುಭ ಸಮಾಚಾರವೇ ಹೌದು. ಪ್ರಸ್ತುತ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 2.5 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಗರಿಷ್ಠ ಸಂಖ್ಯೆಯ ಅಂದರೆ ಸುಮಾರು 45,000 ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ.
ಹಂತ-ಹಂತವಾಗಿ ಇವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ. ಮುಂಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿಶೇಷ ನೇಮಕಾತಿ ಅಡಿಯಲ್ಲಿ 15,000 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಸಜ್ಜಾಗಿದೆ. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗಳಲ್ಲಿ ಶೀಘ್ರವೇ ಅಧಿಸೂಚನೆ ಹೊರಬೀಳುವ ನಿರೀಕ್ಷೆಯಿದೆ. ಆದರೆ, ಒಳಮೀಸಲು ವಿಷಯದಲ್ಲಿ ಗೊಂದಲ ಇನ್ನೂ ಮುಂದುವರಿದಿದ್ದು, ನೇಮಕಾತಿ ಪ್ರಕ್ರಿಯೆಗೆ ಅಡ್ಡಿಯಾಗಿದೆ.
ಸರ್ಕಾರ ಉದ್ಯೋಗಾಕಾಂಕ್ಷಿಗಳ ತಾಳ್ಮೆಯನ್ನು ಪರೀಕ್ಷಿಸದೆ ನೇಮಕಾತಿ ಪ್ರಕ್ರಿಯೆಗೆ ಇರುವ ತಾಂತ್ರಿಕ ಅಡಚಣೆಗಳನ್ನು ನಿವಾರಿಸಲಿ. ನೇಮಕಾತಿ ಪ್ರಕ್ರಿಯೆಯನ್ನು ಚುರುಕುಗೊಳಿಸಲಿ. ಇದರಿಂದ ಆಡಳಿತ ಯಂತ್ರವೂ ಸಿಬ್ಬಂದಿ ಕೊರತೆ ಸಮಸ್ಯೆಯಿಂದ ಹೊರಬಂದು ದಕ್ಷತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ.