

ಈ ಬಾರಿ ಮುಂಗಾರು ಮಳೆಯ ಅಭಾವ ರಾಜ್ಯದಲ್ಲಿ ತೀವ್ರ ಬರಗಾಲದ ಸ್ಥಿತಿಯನ್ನು ಸೃಷ್ಟಿಸಿದೆ. ಇದರಿಂದ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳು ತಲ್ಲಣಗೊಂಡಿವೆ. ಗ್ರಾಮೀಣ ಜನತೆ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್ 1ರಿಂದ ಆಗಸ್ಟ್ 21ರವರೆಗೆ ರಾಜ್ಯದ 29 ಜಿಲ್ಲೆಗಳಲ್ಲಿ ಮಳೆಯ ಕೊರತೆ ದಾಖಲಾಗಿರುವುದು ಕೃಷಿ ಚಟುವಟಿಕೆಗಳಿಗೆ ಭಾರಿ ಹಿನ್ನಡೆ ಉಂಟುಮಾಡಿದೆ. ಪರಿಸ್ಥಿತಿಯನ್ನು ಅವಲೋಕಿಸಿರುವ ರಾಜ್ಯ ಸರ್ಕಾರ 175 ತಾಲೂಕುಗಳ ಪೈಕಿ 101 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಿ, ತುರ್ತು ನಿರ್ವಹಣೆಗೆ ತಲಾ 1 ಕೋಟಿ ರೂ. ಬಿಡುಗಡೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಮೊದಲ ಹೆಜ್ಜೆ. ಈ ಪೈಕಿ 89 ತಾಲೂಕುಗಳು ತೀವ್ರವಾಗಿ ಬಾಧಿತವಾಗಿದ್ದು, 12 ತಾಲೂಕುಗಳು ಮಧ್ಯಮ ಪ್ರಮಾಣದಲ್ಲಿ ಬಾಧಿತವಾಗಿವೆ. ಬರಪೀಡಿತ ತಾಲೂಕುಗಳಲ್ಲಿ ನೆರವು ಹಾಗೂ ಪರಿಹಾರದ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಹೆಚ್ಚು ಕಾಳಜಿಯಿಂದ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕಿದೆ.
ಬರಪೀಡಿತ ಪ್ರದೇಶಗಳ ಘೊಷಣೆಯಿಂದ ಸಮಸ್ಯೆ ಪೂರ್ಣವಾಗಿ ಬಗೆಹರಿಯುವುದಿಲ್ಲ.
ಅನುದಾನ ಹಂಚಿಕೆ ತ್ವರಿತವಾಗಿ ನಡೆಯಬೇಕಿದೆ. ಬಿಡುಗಡೆಯಾದ ಅನುದಾನವು ಕಾಗದದ ಮೇಲಷ್ಟೇ ಉಳಿಯದೆ ವಾಸ್ತವದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ, ತಾಲೂಕು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಜಂಟಿಯಾಗಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತೀವ್ರ ಅಗತ್ಯವಿರುವ ಹಾಗೂ ಜನರಿಗೆ ನೆರವಾಗುವಂಥ ಕಾಮಗಾರಿಗಳಿಗೆ ಈ ಅನುದಾನವನ್ನು ವಿನಿಯೋಗಿಸಬೇಕು.
ತೀವ್ರ ಬರಪೀಡಿತ 89 ತಾಲೂಕುಗಳಲ್ಲಿ ಜನರಿಗೆ ಟ್ಯಾಂಕರ್ ಅಥವಾ ಇತರ ಜಲಮೂಲದಿಂದ ನೀರಿನ ವ್ಯವಸ್ಥೆ ಕಲ್ಪಿಸುವುದು ಮತ್ತು ಜಾನುವಾರುಗಳಿಗೆ ಮೇವಿನ ಬ್ಯಾಂಕ್ಗಳನ್ನು ತಕ್ಷಣವೇ ಸ್ಥಾಪಿಸುವುದು ಅತ್ಯಗತ್ಯ. ಕೃಷಿ ಚಟುವಟಿಕೆಗಳು ಸ್ತಬ್ಧವಾಗಿರುವುದರಿಂದ ಕೃಷಿಕರು ಮತ್ತು ಕೃಷಿ ಕಾರ್ವಿುಕರು ಉದ್ಯೋಗ ಹುಡುಕಿಕೊಂಡು ನಗರಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳಿಂದ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ವಿಬಿ-ಜಿರಾಮ್ ಯೋಜನೆಯ ಅಡಿಯಲ್ಲಿ ಕೆಲಸದ ದಿನಗಳನ್ನು ಹೆಚ್ಚಿಸಿ, ಕೂಲಿಯನ್ನು ಸಕಾಲದಲ್ಲಿ ಪಾವತಿಸಬೇಕು. ಈ ಯೋಜನೆ ಮತ್ತು ಅದರ ಜಾರಿಯ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವ ವಿಶೇಷ ಪ್ರಯತ್ನಗಳಾಗಬೇಕು. ಪರಿಸ್ಥಿತಿಯ ಗಂಭೀರತೆಯನ್ನು ಮನದಟ್ಟು ಮಾಡಲು ಕೇಂದ್ರ ಸರ್ಕಾರಕ್ಕೆ ತಕ್ಷಣವೇ ಅಧಿಕೃತ ಅಧ್ಯಯನ ವರದಿಯನ್ನು ಸಲ್ಲಿಸಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್ಡಿಆರ್ಎಫ್) ಅಡಿಯಲ್ಲಿ ಸೂಕ್ತ ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು.
‘ರೈತರಿಗೆ ತುರ್ತು ಪರಿಹಾರ ಮತ್ತು ಬೆಂಬಲವನ್ನು ಒದಗಿಸಲು, ಎಸ್ಡಿಆರ್ಎಫ್ ನಿಯಮಗಳಡಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಹಾಗೂ ಆದ್ಯತೆಯ ಮೇರೆಗೆ ಜಂಟಿ ಬೆಳೆ ನಷ್ಟ ಸಮೀಕ್ಷೆ ನಡೆಸಿ ತಕ್ಷಣವೇ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಳೆಯ ಮುನ್ಸೂಚನೆ ಹಾಗೂ ಬೆಳೆಗಳ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ, ಸರ್ಕಾರವು ಪ್ರತಿವಾರವೂ ಈ ಪರಿಸ್ಥಿತಿಯನ್ನು ಪರಿಶೀಲಿಸುವುದನ್ನು ಮುಂದುವರಿಸಲಿದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಗೆ ತಕ್ಕಂತೆ, ಅಗತ್ಯವಿರುವ ಕಡೆಗಳಲ್ಲಿ ಹೆಚ್ಚಿನ ತಾಲೂಕುಗಳನ್ನು ಬರಪೀಡಿತ ಎಂದು ಘೊಷಿಸಲಾಗುವುದು’ ಎಂಬುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಶ್ವಾಸನೆ ನೀಡಿದ್ದಾರೆ. ಒಟ್ಟಾರೆ, ಬರ ನಿರ್ವಹಣೆಯು ಕೇವಲ ಆಡಳಿತಾತ್ಮಕ ಪ್ರಕ್ರಿಯೆಯಾಗದೆ ಮಾನವೀಯ ಕಳಕಳಿಯ ಹೊಣೆಗಾರಿಕೆಯಾಗಬೇಕು. ಅನುದಾನದ ಸಮರ್ಪಕ ಬಳಕೆ ಮತ್ತು ತ್ವರಿತ ಸ್ಪಂದನೆಯ ಮೂಲಕ ಮಾತ್ರ ಸಂಕಷ್ಟದಲ್ಲಿರುವ ಗ್ರಾಮೀಣ ಜನರಿಗೆ ನೈಜ ನೆಮ್ಮದಿ ಒದಗಿಸಲು ಸಾಧ್ಯ.