ಸಂಪಾದಕೀಯ: ಯೋಜಿತ ನೀತಿ ಅಗತ್ಯ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಪಾದಚಾರಿ ಮಾರ್ಗ ಒತ್ತುವರಿ ತೆರವು ವಿಷಯದ್ದೇ ಸುದ್ದಿ, ಚರ್ಚೆ. ಕೃಷ್ಣ ಬೈರೇಗೌಡ ಅವರು ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಪ್ರಮುಖ ಅಧಿಕಾರಿಗಳ ಜತೆ ನಿರಂತರವಾಗಿ ಸಭೆಗಳನ್ನು ನಡೆಸುತ್ತ, ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಕಸದ ಸಮಸ್ಯೆ, ರಸ್ತೆಗಳು, ವಾಹನ ರ್ಪಾಂಗ್ ಇತ್ಯಾದಿ ವಿಷಯಗಳ ಬಗ್ಗೆ ವಿಚಾರವಿನಿಮಯ ನಡೆಸುತ್ತಿದ್ದಾರೆ. ಇದರ ಫಲಶ್ರುತಿಯಾಗಿ, ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ತೆರವು ಮಾಡುವ ಕಾರ್ಯ ಈಗ ಜಾರಿಯಲ್ಲಿದೆ. 

ಫುಟ್​ಪಾತ್ ಮೇಲೆ ಬೋರ್ಡ್​ಗಳನ್ನು ಹಾಕುವುದು, ಅಲ್ಲಲ್ಲಿ ವಾಹನ ನಿಲುಗಡೆ, ಅತಿಕ್ರಮಣ, ಬೀದಿಬದಿ ಅಂಗಡಿಗಳು- ಇತ್ಯಾದಿ ಕಾರಣಕ್ಕೆ ನಡೆದುಹೋಗುವವರು ವಿಪರೀತ ತೊಂದರೆ ಎದುರಿಸಬೇಕಾಗಿದೆ. ಸಚಿವ ಕೃಷ್ಣ ಬೈರೇಗೌಡ ಅವರೇ ಹೇಳಿರುವ ಪ್ರಕಾರ, ವರ್ಷಕ್ಕೆ ಸುಮಾರು 300 ಮಂದಿ ಪಾದಚಾರಿಗಳು ಪ್ರಾಣಕಳೆದುಕೊಳ್ಳುತ್ತಿದ್ದಾರೆ. ಇದು ನಿಜಕ್ಕೂ ಗಂಭೀರ ವಿಚಾರ. ಅದರಲ್ಲೂ ಮಕ್ಕಳು, ಮಹಿಳೆಯರು, ವೃದ್ಧರು ಭಯದಲ್ಲೇ ನಡೆಯುವ ಪರಿಸ್ಥಿತಿ ಇದೆ. ಹೀಗಾಗಿ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ತೆರವು ಮಾಡಿ, ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾದುದು ಪಾಲಿಕೆಗಳ ಕರ್ತವ್ಯ. ಇದಲ್ಲದೆ, ಅಸ್ತವ್ಯಸ್ತ ಫುಟ್​ಪಾತ್​ಗಳು ಬೆಂಗಳೂರಿನಂಥ ಅಂತಾರಾಷ್ಟ್ರೀಯ ಖ್ಯಾತಿಯ ನಗರದ ಇಮೇಜಿಗೆ ಧಕ್ಕೆ ತರುತ್ತವೆಯೆಂಬುದನ್ನೂ ಪರಿಗಣಿಸಬೇಕಾಗುತ್ತದೆ. ಆದರೆ, ಈ ಕಾರ್ಯದ ವೇಳೆ ಸಂಬಂಧಪಟ್ಟವರು ಮಾನವೀಯ ನೆಲೆಯಲ್ಲಿಯೂ ಆಲೋಚಿಸಬೇಕಾಗುತ್ತದೆ. 

ಬೀದಿಬದಿ ಅಂಗಡಿಗಳ ಮೂಲಕ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದು, ಅವರ ಜೀವನೋಪಾಯಕ್ಕೆ ತೊಂದರೆ ಆಗದ ಹಾಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವತ್ತಲೂ ಸರ್ಕಾರ ಗಮನಹರಿಸಬೇಕಾಗುತ್ತದೆ. ಈಗ ನಡೆಯುತ್ತಿರುವ ಕಾರ್ಯಾಚರಣೆ ವೇಳೆ ಇಂಥ ಅಂಗಡಿಕಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆಯನ್ನೂ ನಡಸಿದ್ದಾರೆ. ಅನೇಕ ವರ್ಷಗಳಿಂದ ಇದ್ದವರನ್ನು ಒಮ್ಮೆಲೆ ತೆರವುಗೊಳಿಸಿದರೆ ಅವರಿಗೆ ತೊಂದರೆಯಾಗುತ್ತದೆಯೆನ್ನುವುದು ನಿಜ. ಅದೇ ಹೊತ್ತಿಗೆ, ನೈಜ ಸಮಸ್ಯೆಗಳಿಗೆ ಕಿವಿಯಾಗಿ, ಪರಿಹಾರ ಸೂಚಿಸಬೇಕಾದುದು ಸರ್ಕಾರದ ಆದ್ಯ ಕೆಲಸವೂ ಹೌದು. 

ಈಗಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಹೊಸ ಪಾದಚಾರಿ ನೀತಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಅದರ ರೂಪುರೇಷೆ ಹೇಗಿರುತ್ತದೆ ಎಂಬುದು ಮುಂದೆ ಗೊತ್ತಾಗಬೇಕಿದೆ. ಹಾಗೇ, ಅಕ್ರಮ ಫ್ಲೆಕ್ಸ್ ಮತ್ತು ಬ್ಯಾನರ್​ಗಳಿಗೆ ದಂಡ ವಿಧಿಸುವ ಪ್ರಸ್ತಾಪವನ್ನೂ ಅವರು ಮುಂದಿಟ್ಟಿದ್ದಾರೆ. ಇದು ಸಹ ಬಹಳ ದಿನಗಳಿಂದ ಇರುವ ಸಮಸ್ಯೆ. ನಗರದ ಅಂದಗೆಡಿಸುವಲ್ಲಿ ಇಂಥ ಕಾನೂನುಬಾಹಿರ ಫ್ಲೆಕ್ಸ್ ಮತ್ತು ಬ್ಯಾನರುಗಳ ಪಾತ್ರವೂ ಇದೆ. ಅಂದಹಾಗೆ, ಪಾದಚಾರಿ ಮಾರ್ಗಗಳ ಸಮಸ್ಯೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ; ರಾಜ್ಯದ ಬೇರೆ ನಗರಗಳಲ್ಲೂ ಇದೆ. ಹಾಗೇ, ಇದು ಒಂದೆರಡು ದಿನ ಅಥವಾ ತಿಂಗಳಲ್ಲಿ ಆದ ಸಮಸ್ಯೆಯೂ ಅಲ್ಲ. ವರ್ಷಾನುಗಟ್ಟಲೆಯಿಂದ ಕ್ರಮೇಣ ಆಗಿರುವ ರಗಳೆ. ನಮ್ಮಲ್ಲಿ ನಗರಗಳ ಬೆಳವಣಿಗೆ

ಯೋಜಿತ ರೀತಿಯಲ್ಲಿ ಆಗದಿರುವುದು ಸಮಸ್ಯೆಯ ಮೂಲ. ಇಂಥ ವಿಷಯಗಳನ್ನು ಆರಂಭದಲ್ಲಿಯೇ ಸರಿಯಾಗಿ ಗುರುತಿಸಿ, ನಿರ್ವಹಣೆ ಮಾಡದಿರುವುದು ಕೂಡ ಸಮಸ್ಯೆ ಗಂಭೀರ ಸ್ವರೂಪ ತಾಳುವುದಕ್ಕೆ ಕಾರಣ. ಸರ್ಕಾರಗಳು ಮತ್ತು ಅಧಿಕಾರಿವರ್ಗ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಮತ್ತು ಉತ್ತರದಾಯಿತ್ವವನ್ನು ನಿಗದಿಮಾಡಬೇಕಿದೆ. ನಮ್ಮ ನಗರಗಳನ್ನು ವ್ಯವಸ್ಥಿತವಾಗಿಸಲು ನಗರಯೋಜನಾ ತಜ್ಞರ ನೆರವನ್ನೂ ಪಡೆಯಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net