ಅಭಿವೃದ್ಧಿ ಎಂದರೆ ಕೇವಲ ಕಣ್ಣಿಗೆ ಕಾಣುವ ಕಟ್ಟಡ, ಸೇತುವೆಗಳಲ್ಲ; ಪ್ರತಿಯೊಬ್ಬ ನಾಗರಿಕನಿಗೂ ಸುರಕ್ಷಿತವಾದ ಕುಡಿಯುವ ನೀರು ಮತ್ತು ನೈರ್ಮಲ್ಯವನ್ನು ಖಾತ್ರಿಪಡಿಸುವುದು ನಿಜವಾದ ಅಭಿವೃದ್ಧಿ. ಸರ್ಕಾರಗಳು ಕೂಡಲೇ ಯುದ್ಧೋಪಾದಿಯಲ್ಲಿ ಹಳೆಯ ಪೈಪ್ಲೈನ್ಗಳ ವೈಜ್ಞಾನಿಕ ಮ್ಯಾಪಿಂಗ್ ಮಾಡಬೇಕು. ಅವುಗಳನ್ನು ಬದಲಿಸಿ ಆಧುನಿಕ ಪೈಪ್ಗಳನ್ನು ಹಾಕಬೇಕು. ನಗರದ ಚರಂಡಿ ವ್ಯವಸ್ಥೆ ಮತ್ತು ನೀರಿನ ಸರಬರಾಜು ಮಾರ್ಗಗಳು ಪರಸ್ಪರ ಬೆರೆಯದಂತೆ ಎಚ್ಚರಿಕೆ ವಹಿಸುವುದು ಆದ್ಯತೆಯಾಗಬೇಕು. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗುವುದನ್ನು ತಡೆಯಲು ಈಗಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ, ಮೆಟ್ರೋ ಸಿಟಿ, ಸ್ಮಾರ್ಟ್ ಸಿಟಿ ಎಂಬ ಹಣೆಪಟ್ಟಿಗಳು ಬರಿ ಕಾಗದದ ಮೇಲಿನ ಘೊಷಣೆಯಾಗಿ ಉಳಿಯುತ್ತವೆ. ಇಂದೋರ್ ಘಟನೆಯಿಂದ ಪಾಠ ಕಲಿತು, ಪ್ರತಿ ರಾಜ್ಯವೂ, ಪ್ರತಿಯೊಂದು ಪಾಲಿಕೆಯೂ ನೀರು ಸರಬರಾಜು ವ್ಯವಸ್ಥೆಯನ್ನು ತುರ್ತಾಗಿ ಆಡಿಟ್ ಮಾಡಬೇಕು.