ಮುಧೋಳದ ಎಸ್.ಆರ್. ಕಂಠಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿನಿಯರ ಒಕ್ಕೂಟ ಮತ್ತು ಮಹಿಳಾ ಸಬಲೀಕರಣ ಕೋಶ ಉದ್ಘಾಟನಾ ಸಮಾರಂಭದಲ್ಲಿ ಪ್ರಾಚಾರ್ಯ ಸುಷ್ಮಾದೇವಿ ಒಡೆಯರ್ ಅವರಿಗೆ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಜರಕುಂಟಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡೂರ, ಉಷಾ ಬೆಳಗಲಿ ಇತರರಿದ್ದರು.
ಮುಧೋಳ: ಮನೆಯಲ್ಲಿ ತಯಾರಿಸಿದ ತಾಜಾ ಮತ್ತು ಶುದ್ಧ ಆಹಾರ ಸೇವಿಸುವುದರಿಂದ ದೇಹ ಹಾಗೂ ಮನಸ್ಸು ಆರೋಗ್ಯಕರವಾಗಿರುತ್ತದೆ ಎಂದು ಬಾಗಲಕೋಟೆಯ ಅಕ್ಕಮಹಾದೇವಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯೆ ಸುಷ್ಮಾದೇವಿ ಒಡೆಯರ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.
ನಗರದ ಬಿವಿವಿ ಸಂಘದ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ಕಾಲೇಜಿನ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2026-27ನೇ ಸಾಲಿನ ವಿದ್ಯಾರ್ಥಿನಿಯರ ಒಕ್ಕೂಟ ಮತ್ತು ಮಹಿಳಾ ಸಬಲೀಕರಣ ಕೋಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯಲ್ಲಿ ಅಡುಗೆ ಮಾಡುವಾಗ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದರಿಂದ ಸೋಂಕು ಹರಡುವುದು ತಪ್ಪುತ್ತದೆ. ಮನೆ ಊಟದಲ್ಲಿ ಕಡಿಮೆ ಎಣ್ಣೆ, ಕಡಿಮೆ ಮಸಾಲೆ ಹಾಗೂ ಅಗತ್ಯ ಪೋಷಕಾಂಶಗಳಿರುತ್ತವೆ. ಇದು ಹೊಟ್ಟೆಗೆ ಹಗುರವಾಗಿದ್ದು ಬೇಗ ಜೀರ್ಣವಾಗುವುದರಿಂದ ಗ್ಯಾಸ್ ಅಥವಾ ಅಜೀರ್ಣ ಸಮಸ್ಯೆಗಳು ಬರುವುದಿಲ್ಲ. ಜಂಕ್ ಫುಡ್ ಸೇವನೆ ಕಡಿಮೆಯಾಗಿ ದೇಹದ ತೂಕ ನಿಯಂತ್ರಣದಲ್ಲಿರುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರ ಒಕ್ಕೂಟದ ಮೂಲಕ ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ ಮತ್ತು ಸಾರ್ವಜನಿಕವಾಗಿ ಮಾತನಾಡುವ ಕೌಶಲ ಬೆಳೆಸಿಕೊಳ್ಳಬಹುದು. ಮಹಿಳಾ ಸಬಲೀಕರಣವೆಂದರೆ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಮಾನ ಹಕ್ಕು ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಪಡೆಯುವುದಾಗಿದೆ. ವಿದ್ಯಾರ್ಥಿನಿಯರು ಕಲಿಕೆಯೊಂದಿಗೆ ಛಲ, ಆತ್ಮವಿಶ್ವಾಸ ಹಾಗೂ ಹೊಣೆಗಾರಿಕೆ ರೂಢಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ ಜರಕುಂಟಿ ಮಾತನಾಡಿ, ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಯಶಸ್ವಿಯಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡೂರ, ಉಷಾ ಬೆಳಗಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರ ಒಕ್ಕೂಟ ಮತ್ತು ಮಹಿಳಾ ಸಬಲೀಕರಣ ಕೋಶದ ಅಧ್ಯಕ್ಷೆ ವಿದ್ಯಾ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಶಾರದಾ ಬಿರಾದಾರ ಪರಿಚಯಿಸಿದರು. ಪ್ರೊ.ಶಿಲ್ಪಾ ಹುಲಸದ ಸ್ವಾಗತಿಸಿದರು, ಪ್ರೊ.ಲಲಿತಮ್ಮ ಕಲ್ಯಾಣಶೆಟ್ಟಿ ನಿರೂಪಿಸಿದರು, ಪ್ರೊ. ಕವಿತಾ ಕೊಡಗ ವಂದಿಸಿದರು. ಪ್ರೀತಿ ಸಂಗಡಿಗರು ಪ್ರಾರ್ಥಿಸಿದರು.