ಇ -ಆಫೀಸ್​ ಅನುಷ್ಠಾನ ಕಡ್ಡಾಯ

Dr. Ishwar Ullagaddi
Dr. Ishwar Ullagaddi
Published on
ಧಾರವಾಡ: ಬೆಳಗಾವಿ ವಿಭಾಗ ವ್ಯಾಪ್ತಿಯ ಎಲ್ಲಾ ಬಿಇಓ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಪಾರದರ್ಶಕ ಮತ್ತು ತ್ವರಿತಗತಿಯ ಕಡತ ವಿಲೇವಾರಿ ಮತ್ತು ಆಡಳಿತದ ಕಾರ್ಯನಿರ್ವಹಣೆಗೆ ಪೂರಕವಾಗಿ ಇ- ಆಫೀಸ್​ ಕಡ್ಡಾಯ ಅನುಷ್ಠಾನಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಸೂಚನೆ ನೀಡಿದರು.
ನಗರದ ಡಯಟ್​ ಡೆಪ್ಯೂಟಿ ಚೆನ್ನಬಸಪ್ಪ ಸಮಾವೇಶ ಭವನದಲ್ಲಿ ಬುಧವಾರ ಆಯೋಜಿಸಿದ್ದ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ 9 ಜಿಲ್ಲೆಗಳ ಇಲಾಖಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ ವಿಭಾಗದ 59 ತಾಲೂಕುಗಳ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ 3ರಿಂದ 10ನೇ ತರಗತಿಯ ಎಲ್ಲ ವಿದ್ಯಾಥಿರ್ಗಳು 2026ರ ಜನವರಿ ಅಂತ್ಯದೊಳಗಾಗಿ ಮೂಲಭೂತ ಭಾಷಾಜ್ಞಾನ ಮತ್ತು ಸಂಖ್ಯಾಜ್ಞಾನ ಗಳಿಸಬೇಕು. ಇಲಾಖೆಯ ಮಹತ್ವದ ಕಾರ್ಯಕ್ರಮಗಳಾದ ಎಫ್​ಎಲ್​ಎನ್​, ಎಲ್​ಬಿಎ ನಿಖರ ಅನುಷ್ಠಾನ ಹಾಗೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಸಾಧಿಸಲು 29 ಅಂಶಗಳ ಕಾರ್ಯಕ್ರಮ ಅನುಷ್ಠಾನ ಹಾಗೂ ಮಿಷನ್​ 40+ ಗುರಿಯೊಂದಿಗೆ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಲ್ಲ ಶಾಲೆಗಳ ಮುಖ್ಯಶಿಕ್ಷಕರು ಮತ್ತು ವಿಷಯ ಶಿಕ್ಷಕರು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
* ಶಿಸ್ತು ಕ್ರಮದ ಎಚ್ಚರಿಕೆ: ಶಾಲಾ ವಿದ್ಯಾಥಿರ್ಗಳಿಗೆ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನ ಉಪಹಾರವು ಸಂರ್ಪೂಣ ಶುಚಿ-ರುಚಿಯಾಗಿರುವಂತೆ ಗಮನಹರಿಸಬೇಕು. ಜತೆಗೆ ಆಹಾರ ಧಾನ್ಯಗಳ ಸುರಕ್ಷತೆ ಬಗ್ಗೆ ಗಮನಹರಿಸುವಂತೆ ಸೂಚಿಸಿ, ಪ್ರಮಾದಗಳು ಕಂಡುಬಂದರೆ ತಪ್ಪಿತಸ್ಥರಿಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಈಶ್ವರ ಎಚ್ಚರಿಕೆ ನೀಡಿದರು.
ಅಪರ ಆಯುಕ್ತರ ಕಚೇರಿಯ ನಿರ್ದೇಶಕ ಈಶ್ವರ ನಾಯ್ಕ, ಸಹ ನಿರ್ದೇಶಕಿ ಜಯಶ್ರೀ ಕಾರೇಕರ, ಉಪ ನಿರ್ದೇಶಕ ಗಿರೀಶ ಪದಕಿ, ಸಾರ್ವಜನಿಕ ಸಂಪರ್ಕಾಧಿಕಾರಿ ಸುಜಾತಾ ತಿಮ್ಮಾಪೂರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net