

ಪ್ರಮುಖ ಮುಖ್ಯಾಂಶಗಳು
ಇ-ಸೈಕಲ್ ಸಂಚಾರಕ್ಕೆ ಟೆಂಡರ್ ಅಡ್ಡಿ!
ನಗರದ 18 ಸ್ಥಳಗಳಲ್ಲಿ ಬೈಸಿಕಲ್ ತಾಣ | ನಿರ್ವಹಣೆ ಗುತ್ತಿಗೆ ಮುಗಿದ ಹಿನ್ನೆಲೆ ಸ್ಥಳಾಂತರ
ಆನಂದ ಭಮ್ಮನ್ನವರ ಬೆಳಗಾವಿ
ಸ್ಮಾರ್ಟ್ ಸಿಟಿ ಯೋಜನೆಡಿ `ಹಸಿರು ಬೆಳಗಾವಿ' ನಿರ್ಮಾಣ ಉದ್ದೇಶದಿಂದ 33 ಕೋಟಿ ರೂ.ಖರ್ಚು ಮಾಡಿ ಆರಂಭಿಸಿದ್ದ ಸೈಕಲ್ ಸೇವೆ ನಿರ್ವಹಣೆ ಗುತ್ತಿಗೆ ಮುಗಿದ ನಂತರ ಸೈಕಲ್ ಸಂಚಾರ ಸ್ಥಗಿತಗೊಂಡಿದ್ದು, ಜನರಿಗೆ ಸೈಕಲ್ ಸೇವೆ ಇಲ್ಲದಂತಾಗಿದೆ.
ಸಂಚಾರ ಸಿಕ್ಕು (ಸಂಚಾರ ದಟ್ಟಣೆ) ನಿಯಂತ್ರಣ, ಪರಿಸರಸ್ನೇಹಿ ಸೈಕಲ್ ಬಳಕೆಯನ್ನು ಉತ್ತೇಜಿಸಲು ಸ್ಮಾರ್ಟ್ ಸಿಟಿ ಯೋಜನೆ `ಬೈಸಿಕಲ್ ಸರ್ವೀಸ್ ನೆಟ್‌ವರ್ಕ್' ಮೂಲಕ ೩೩ ಕೋಟಿ ರೂ. ಅನುದಾನದಲ್ಲಿ 1.5 ಮೀಟರ್ ಅಗಲದ 31 ಕಿಮೀ ಪ್ರತ್ಯೇಕ ಸೈಕಲ್ ಟ್ರ್ಯಾಕ್ ನಿರ್ಮಿಸಿ 2022ರಲ್ಲಿ 100 ಸಾಮಾನ್ಯ ಸೈಕಲ್, 100 ವಿದ್ಯುತ್ ಚಾಲಿತ ಬೈಸಿಕಲ್ ಮತ್ತು 50 ಇ-ಬೈಕ್‌ಗಳನ್ನು ಜನಸೇವೆಗೆ ಮುಕ್ತಗೊಳಿಸಲಾಗಿದೆ. ಜಾಗೃತಿ ಕೊರತೆಯಿಂದ ಇರುವ ಸ್ಥಳಗಳಲ್ಲಿ ಸೈಕಲ್‌ಗಳು ಬಳಕೆ ಅಷ್ಟಾಗಿ ಇರಲಿಲ್ಲ.
18 ಸ್ಥಳಗಳಲ್ಲಿ ಸೈಕಲ್ ಸೇವೆ:
ನಗರದ ರಾಣಿ ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ಮಹಾರಾಜ ವೃತ್ತ, ಆರ್‌ಪಿಡಿ ಕಾಲೇಜು, ರಸ್ತೆ ಕಾಲೇಜು ರಸ್ತೆ, ತಿಳಕವಾಡಿ ಮೊದಲ ಗೇಟ್, ವ್ಯಾಕ್ಸಿನ್ ಡಿಪೋ ಮೈದಾನ, ಉದ್ಯಮಬಾಗ, ಕೇಂದ್ರ ಬಸ್ ನಿಲ್ದಾಣ, ಕಣಬರ್ಗಿ ರಸ್ತೆ, ಶ್ರೀನಗರ ಉದ್ಯಾನ, ಕೃಷ್ಣದೇವರಾಯ ವೃತ್ತ, ಎಪಿಎಂಸಿ ರಸ್ತೆ, ಜಾಧವ ರಸ್ತೆ, ಹನುಮಾನ ನಗರ, ಹಿಂಡಲಗಾ ಗಣಪತಿ ಮಂದಿರ ಸೇರಿ ೧೮ ಕಡೆ ಬೈಸಿಕಲ್ ನಿಲುಗಡೆ ತಾಣ ನಿರ್ಮಿಸಲಾಗಿದೆ. ಆದರೆ ಬಳಕೆ ಹಾಗೂ ನಿರ್ವಹಣೆ ಕೊರತೆಯಿಂದ ಸೇವೆ ಸ್ಥಗಿತ ಹಂತ ತಲುಪಿದೆ.
ನಿರ್ವಹಣೆ ಮುಕ್ತಾಯ:
೨೦೨೩ರ ಜನವರಿಯಿಂದ ಸೈಕಲ್ ನಿರ್ವಹಣೆ ಹೊತ್ತಿದ್ದ ಧರಣಿ ಎಂಟರ್ ಪ್ರೆಸ್ ಗುತ್ತಿಗೆ ಅವಧಿ ಕಳೆದ ಡಿಸೆಂಬರ್ ೧೫ಕ್ಕೆ ಮುಕ್ತಾಯವಾಗಿದೆ. ನಂತರ ಇ-ಸೈಕಲ್ ನಿರ್ವಹಣೆ ಇಲ್ಲದೆ ಸ್ಮಾರ್ಟ್ ಸಿಟಿ ಅಕಾರಿಗಳನ್ನು ಪಾಲಿಕೆಗೆ ಹಸ್ತಾಂತರ ಮಾಡುತ್ತಿದ್ದಾರೆ. ಸದ್ಯ ಸೈಕಲ್‌ಗಳು ಓಡಾಟ ನಿಲ್ಲಿಸಿದ್ದು, ಕೋಟ್ಯಂತರ ರೂ. ಹಣ ವ್ಯಯಿಸಿರುವ ಸೈಕಲ್ ಸೇವೆ ಜನರಿಗೆ ಮತ್ತೆ ಪ್ರಾರಂಭಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ.
೧೯,೭೧೭ ಸೈಕಲ್ ಬಳಕೆದಾರರು:
ನಗರದ ೧೮ ಸ್ಥಳಗಳಲ್ಲಿದ್ದ ಸೈಕಲ್ ತಾಣದಿಂದ ೨೦೨೨ ರಿಂದ ೨೦೨೫ರ ಡಿ.೧೫ರವರೆಗೆ ಒಟ್ಟು ೧೯,೭೧೭ ಜನರಿಂದ ಸೈಕಲ್ ಬಳಸಲಾಗಿದೆ. ಮುಖ್ಯವಾಗಿ ಸೈಕಲ್ ಬಳಕೆಯ ಬಗ್ಗೆ ಸರಿಯಾದ ಜಾಗೃತಿ ಇಲ್ಲದೆ ಮತ್ತು ನಿರಾಸಕ್ತಿಯಿಂದ ಸೈಕಲ್ ಬಳಕೆಯಾಗಿಲ್ಲ.
ಕೋಟ್-
ಮೂರು ವರ್ಷದಿಂದ ಸ್ಮಾರ್ಟ್ಸಿಟಿ ಯೋಜನೆಡಿ ಧರಣಿ ಎಂಟರ್‌ಪ್ರೆಸ್ ಸಂಸ್ಥೆ ನಿರ್ವಹಣೆ ಮಾಡುತ್ತಿದೆ. ಈಗ ಅವರ ಅವಧಿ ಮುಗಿದಿದೆ. ಹಾಗೂ ಪಾಲಿಗೆ ಸೈಕಲ್ ಹಸ್ತಾಂತರ ಮಾಡಿದ್ದು, ಹೊಸ ಟೆಂಡರ್ ಕರೆಯಬೇಕಿದೆ.
| ಕವಿತಾ ವಾರಂಗಳ ಎಂಡಿ, ಸ್ಮಾರ್ಟ್ ಸಿಟಿ ಯೋಜನೆ,ಬೆಳಗಾವಿ