ಮತ್ತಿನ ಚಾಲನೆ ಮೃತ್ಯುವಿಗೆ ಆಹ್ವಾನ; ವಿಜಯವಾಣಿ, ಆಡ್-6, ಕರ್ನಾಟಕ ಟಿವಿ ಸಹಯೋಗ

ಮತ್ತಿನ ಚಾಲನೆ ಮೃತ್ಯುವಿಗೆ ಆಹ್ವಾನ
ಮತ್ತಿನ ಚಾಲನೆ ಮೃತ್ಯುವಿಗೆ ಆಹ್ವಾನ
Published on
ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿರುವ ಯುವಜನತೆ ಮದ್ಯಪಾನಮಾಡಿ ವಾಹನ ಚಲಾಯಿಸುವುದರಿಂದ ಏನೆಲ್ಲ ಅಪಾಯ ಎದುರಾಗಲಿವೆ ಎಂಬ ವಿಚಾರವನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೀದಿ ನಾಟಕದ ಮೂಲಕ ಮನಮುಟ್ಟುವಂತಹ ಸಂದೇಶ ರವಾನಿಸಿದರು. ಜನಜಾಗೃತಿಯ ಭಾಗವಾಗಿ ‘ವಿಜಯವಾಣಿ, ಆಡ್ 6 ಹಾಗೂ ಕರ್ನಾಟಕ ಟಿವಿ ಸಹಭಾಗಿತ್ವದಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯವು ‘ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ’ ಅಭಿಯಾನ ನಡೆಸಿತು.
ಮಂಗಳವಾರ ಬೆಳಗ್ಗೆ ನಗರದ ಎಂ.ಜಿ. ರಸ್ತೆಯಲ್ಲಿರುವ ಮಹಾತ್ಮಗಾಂಧಿ ಪ್ರತಿಮೆಯಿಂದ ಆರಂಭವಾದ ಅಭಿಯಾನವು ಅನಿಲ್ ಕುಂಬ್ಳೆ ವೃತ್ತ, ರಂಗೋಲಿ ಮೆಟ್ರೋ, ಬ್ರಿಗೇಡ್ ವೃತ್ತದ ಮೂಲಕ ಮತ್ತೆ ಅನಿಲ್ ಕುಂಬ್ಳೆ ವೃತ್ತದಲ್ಲಿ ಕೊನೆಗೊಂಡಿತು. ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ 25 ತಂಡಗಳು ಭಿತ್ತಿಪತ್ರಗಳನ್ನು ಹಿಡಿದು ವಾಹನ ಸವಾರರಿಗೆ ಜಾಗೃತಿ ಮೂಡಿಸಿದವು. ಸಿಗ್ನಲ್​ನಲ್ಲಿ ನಿಂತಿದ್ದ ವಾಹನಗಳ ಬಳಿ ಹೋದ ವಿದ್ಯಾರ್ಥಿಗಳ ತಂಡವು ಕುಡಿದು ವಾಹನ ಚಲಾಯಿಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿತು.

ನಾಟಕದ ಮೂಲಕ ಜಾಗೃತಿ

ಕುಡಿತದಿಂದ ಕುಟುಂಬ ಮತ್ತು ವೈಯಕ್ತಿಕ ಜೀವನದ ಮೇಲೆ ಸಂಭವಿಸಬಹುದಾದ ಪರಿಣಾಮಗಳನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ಅಭಿನಯಿಸಿದರು. ಕುಡಿದು ವಾಹನ ಚಲಾಯಿಸಿ ಅಪಘಾತದಲ್ಲಿ ಮೃತಪಟ್ಟರೆ ಅವರನ್ನೇ ನಂಬಿರುವ ಕುಟುಂಬ ಸದಸ್ಯರು ಬೀದಿಪಾಲಾಗಬೇಕಾಗುತ್ತದೆ. ಹೆಂಡತಿ ಮಕ್ಕಳಿಗೆ ದಿಕ್ಕಿಲ್ಲದಂತಾಗುತ್ತದೆ ಎಂಬ ದೃಶ್ಯಾವಳಿಗಳನ್ನು ತಮ್ಮ ಕಲಾಚಾತುರ್ಯ ಮೂಲಕ ಪ್ರದರ್ಶಿಸಿ ಪ್ರೇಕ್ಷಕರನ್ನು ಆಕರ್ಷಿಸಿದರು. ಅಪ್ಪನಿಗಾಗಿ ಮನೆಯಲ್ಲಿ ಕಾಯುತ್ತಿದ್ದ ಮಗು, ಗಂಡನ ಬರುವಿಕೆಯನ್ನೇ ಎದುರು ನೋಡುತ್ತಿದ್ದ ಹೆಂಡತಿ, ಹೊಸ ಜೀವನ ಕಟ್ಟಿಕೊಳ್ಳುವ ರಸಕ್ಷಣದಲ್ಲಿರುವ ಯುವತಿಯರ ಗೋಳು ಹೇಗಿರುತ್ತದೆ ಎಂಬ ದೃಶ್ಯಗಳು ನೈಜ ಅಭಿನಯದಿಂದ ಕೂಡಿದ್ದವು.

8 ದಿನದಲ್ಲಿ 3,716 ಎಫ್​ಐಆರ್

ವರ್ಷಾಚರಣೆ ಹಿನ್ನೆಲೆಯಲ್ಲಿ ಭದ್ರತೆಗಾಗಿ ಬೆಂಗಳೂರು ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ಮೇಲೆ ಐದು ದಿನದಲ್ಲಿ 3,716 ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಡಿ.22 ರಿಂದ 29ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿರುವ ನಗರ ಸಂಚಾರ ಪೊಲೀಸರು, 2,66,325 ವಾಹನ ಚಾಲಕರ ತಪಾಸಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ರೀತಿಯ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು ಜನದಟ್ಟಣೆ, ಆಯಕಟ್ಟಿನ ಸ್ಥಳಗಳಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಕೈಗೊಂಡಿದ್ದಾರೆ.
ಡ್ರಂಕ್ ಆಂಡ್ ಡ್ರೖೆವ್ ಪ್ರಕರಣಗಳಲ್ಲಿ ಬಹುತೇಕರು ರಾತ್ರಿ ವೇಳೆ ಕುಡಿದು ವಾಹನ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಡಿ.22ರ ಮೊದಲ ದಿನವೇ ನಗರಾದ್ಯಂತ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ 1,295 ಎಫ್​ಐಆರ್ ದಾಖಲಿಸಿಕೊಂಡು, 89,236 ವಾಹನ ತಪಾಸಣೆ ನಡೆಸಿದ್ದಾರೆ. ವರ್ಷಾಚರಣೆ ಹಿಗ್ಗಿನಲ್ಲಿ ಜನ ಮೈಮರೆಯುವುದರಿಂದ ಸಾಕಷ್ಟು ಅಪಘಾತಗಳಾಗಿ ಸಾವು-ನೋವು ಸಂಭವಿಸಿವೆ. ಈ ಹಿಂದಿನ ವರ್ಷಗಳಲ್ಲಿ ಹಲವು ಪ್ರಕರಣಗಳು ನಡೆದು ಸವಾರರು ಮೃತಪಟ್ಟಿದ್ದಾರೆ, ಇಲ್ಲವೇ ಗಾಯಗೊಂಡು ಸಮಸ್ಯೆಗೆ ಒಳಗಾಗಿದ್ದಾರೆ. ಹೀಗಾಗಿ 2026ರ ವರ್ಷಾಚರಣೆ ಸೂತಕವಾಗದೆ ಸುರಕ್ಷಿತವಾಗಿರಲಿ ಎಂಬುದು ಅಭಿಯಾನದ ಉದ್ದೇಶವಾಗಿದೆ.

ಖುಷಿಯಾಗಿರಲಿ ಹೊಸ ವರ್ಷಾರಂಭ

ಹೊಸ ಕನಸುಗಳು, ಯೋಜನೆಗಳ ಗುರಿಯೊಂದಿಗೆ ಹೊಸ ವರ್ಷವನ್ನು ಆರಂಭಿಸಬೇಕು ಎಂಬ ಮಹದಾಸೆಗಳನ್ನು ಹೊತ್ತಿರುತ್ತೀರಿ. ಇಂತಹ ಸಂದರ್ಭದಲ್ಲಿ ಕ್ಷಣಮಾತ್ರದ ಸುಖಕ್ಕಾಗಿ ಮದ್ಯಪಾನ ಮಾಡಿ ಮತ್ತು ವಾಹನಗಳನ್ನು ಚಲಾಯಿಸುವ ಮೂಲಕ ಜೀವನಕ್ಕೆ ಸಂಚಕಾರ ತಂದುಕೊಳ್ಳಬೇಡಿ ಎಂಬುದೇ ಅಭಿಯಾನದ ಆಶಯವಾಗಿದೆ. ಜೀವನದಲ್ಲಿ ಕುಡಿದು ಎಂಜಾಯ್ ಮಾಡುವುದಕ್ಕಿಂತ ಕೌಟುಂಬಿಕ ದೃಷ್ಟಿಯಿಂದ ಇನ್ನೂ ಮಹತ್ತರ ಜವಾಬ್ದಾರಿಗಳು ಹೆಗಲ ಮೇಲಿರುತ್ತವೆ. ಹೀಗಾಗಿ, ಈ ಹೊಸ ವರ್ಷವು ತಮ್ಮಲ್ಲಿ ಮಂಗಳಕರವಾಗಿರಲಿ. ಇದಕ್ಕಾಗಿ ಸುರಕ್ಷತೆ ದೃಷ್ಟಿಯಿಂದ ಪಾರ್ಟಿಗಳಲ್ಲಿ ಭಾಗವಹಿಸುವ ಮೂಲಕ ಖುಷಿ ಖುಷಿಯಾಗಿ ಹೊಸ ವರ್ಷಕ್ಕೆ ಕಾಲಿಡಿ ಮತ್ತು ಹೊಸ ವರ್ಷವು ಎಲ್ಲರಿಗೂ ಶುಭವನ್ನೇ ತರಲಿ ಎಂದು ಈ ಸಂದರ್ಭದಲ್ಲಿ ಶುಭಕಾಮನೆಗಳನ್ನು ತಿಳಿಸಲು ಬಯಸುತ್ತೇವೆ.
ಬೆಂಗಳೂರು ಸೇರಿ ರಾಜ್ಯಾದ್ಯಂತ ಹೊಸ ವರ್ಷಾಚರಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅದರಲ್ಲೂ ಕುಡಿದು ವಾಹನ ಚಾಲನೆ ಮಾಡುವವರಿಂದ ಆಗುವ ತೊಂದರೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸರು ‘ಸೆಲೆಬ್ರೆಟ್ ರೆಸ್ಪಾನ್ಸಿಬಿಲಿಟಿ’ ಘೋಷವಾಕ್ಯದೊಂದಿಗೆ ಬಂದೋಬಸ್ತ್ ಕಲ್ಪಿಸಿದ್ದಾರೆ. ಸುಗಮ ಸಂಚಾರ, ಮಹಿಳೆಯರ ಸುರಕ್ಷತೆ, ಜನದಟ್ಟಣೆ ನಿಯಂತ್ರಣ ಮುಖ್ಯವಾಗಿದೆ. 2026ನೇ ವರ್ಷದಲ್ಲಿ ಎಲ್ಲರೂ ಹೊಸಚೈತನ್ಯ, ಹೊಸ ಗುರಿಗಳೊಂದಿಗೆ ನಡೆಯಲಿ ಎಂದು ಹಾರೈಸುತ್ತೇನೆ - ಡಾ.ಜಿ. ಪರಮೇಶ್ವರ, ಗೃಹ ಸಚಿವ

5 ವರ್ಷಗಳಲ್ಲಿ 60,115 ಮಂದಿ ಸಾವು

ರಾಜ್ಯದಲ್ಲಿ ಕಳೆದ 5 ವರ್ಷದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 60,115 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಅತಿಹೆಚ್ಚು ಪ್ರಕರಣಗಳು ಬೆಂಗಳೂರು ನಗರದಲ್ಲೇ ವರದಿಯಾಗಿದ್ದು, 4,154 ಜನ ಸಾವಿಗೀಡಾಗಿದ್ದಾರೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದರಿಂದಲೂ ಅಪಘಾತಗಳ ಪ್ರಮಾಣ ಜಾಸ್ತಿಯಾಗುತ್ತಿದೆ.
ಪೊಲೀಸ್ ಇಲಾಖೆ ಕೊಟ್ಟಿರುವ ಮಾಹಿತಿ ಅನ್ವಯ 2021ರಿಂದ 2025ರ (ಅಕ್ಟೋಬರ್​ವರೆಗೆ) 2.13 ಲಕ್ಷ ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿವೆ. ಚಾಲಕರ ನಿರ್ಲಕ್ಷ್ಯ, ಮದ್ಯಪಾನ ಮಾಡಿ ವಾಹನ ಚಾಲನೆ, ಅತಿವೇಗ ಹಾಗೂ ಅಜಾಗರೂಕತೆ, ಪರವಾನಗಿ ಇಲ್ಲದೇ ಇರುವುದು ಸೇರಿ ವಿವಿಧ ಮಾದರಿಯ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸರಾಸರಿ 11 ಸಾವಿರಕ್ಕೂ ಹೆಚ್ಚು ಜನ ಮೃತಪಡುತ್ತಿದ್ದಾರೆ. 5 ವರ್ಷಗಳಲ್ಲಿ 1,69,315 ಜನ ಗಾಯಗೊಂಡಿದ್ದಾರೆ. 2024ರಲ್ಲಿ 39,228 ಪ್ರಕರಣ ದಾಖಲಾಗಿದ್ದು, 10,319 ಜನ ಪ್ರಾಣ ಕಳೆದುಕೊಂಡಿದ್ದರು.
2025ರ ಜನವರಿಯಿಂದ ಅಕ್ಟೋಬರ್​ವರೆಗೆ ನಡೆದ 21,937 ಅಪಘಾತಗಳಲ್ಲಿ 5,975 ಮಂದಿ ಜೀವ ಕಳೆದುಕೊಂಡಿದ್ದು, 27,456 ಗಾಯಗೊಂಡಿದ್ದಾರೆ. ಆ ಪೈಕಿ ಬೆಂಗಳೂರು ನಗರದಲ್ಲಿ ಅತಿಹೆಚ್ಚು 4,098 ಅಪಘಾತಗಳು ನಡೆದ ಪರಿಣಾಮ 700 ಸಾವು ಸಂಭವಿಸಿವೆ, 3,612 ಜನ ಗಾಯಗೊಂಡಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಅತಿಹೆಚ್ಚು ಅಪಘಾತಗಳು ಸಂಭವಿಸಿರುವ ವರದಿಯಾಗಿವೆ.

ಭದ್ರತೆಗೆ 20 ಸಾವಿರ ಪೊಲೀಸರು

ಬೆಂಗಳೂರಿನ ವಿವಿಧೆಡೆ ನಡೆಯುವ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ನಗರದಲ್ಲಿ ಹೊಸ ಸಂಭ್ರಮಾಚರಣೆಯ ಕರ್ತವ್ಯಕ್ಕೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆಗೆ 14 ಸಾವಿರ ಪೊಲೀಸರು, 2500 ಟ್ರಾಫಿಕ್ ಪೊಲೀಸರು, 88 ಕೆಎಸ್​ಆರ್​ಪಿ ಪ್ಲಟೂನ್ಸ್, 21 ಸಿಎಆರ್, 266 ಹೊಯ್ಸಳ ವಾಹನ, 250 ಕೋಬ್ರಾ ವಾಹನಗಳನ್ನು ನಿಯೋಜಿಸಲಾಗುತ್ತಿದೆ. 400 ಟ್ರಾಫಿಕ್ ವಾರ್ಡನ್​ಗಳನ್ನು ನಿಯೋಜಿಸಲಾಗಿದೆ. ಜನದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್ ಸೇರಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ಸ್ ಸೇರಿ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
ಹೊಸ ವರ್ಷದ ಆಚರಣೆಯಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ 8 ಲಕ್ಷಕ್ಕೂ ಹೆಚ್ಚು ಜನ ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯನ್ನು ಹೆಚ್ಚು ಜನ ಸೇರುವ ಸ್ಥಳಗಳೆಂದು ಗುರುತಿಸಲಾಗಿದೆ. ಈ ಬಾರಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನ ಸೇರಲಿದ್ದಾರೆ ಎಂದು ಅಂದಾಜು ಮಾಡಲಾಗಿದೆ ಎಂದರು.

ಎಲ್ಲೆಲ್ಲಿ ಸಂಚಾರ ನಿಷೇಧ

ಸಂಭ್ರಮಾಚರಣೆಯ ಪ್ರಮುಖ ಸ್ಥಳವಾಗಿರುವ ಎಂ.ಜಿ. ರಸ್ತೆ ಹಾಗೂ ಬಿಗ್ರೇಡ್ ರಸ್ತೆಗಳಲ್ಲಿ ಡಿ.31ರ ರಾತ್ರಿ 8 ರಿಂದ ತಡರಾತ್ರಿ 2 ಗಂಟೆವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್​ನಿಂದ ಅಪೇರಾ ಜಂಕ್ಷನ್​ವರೆಗೆ, ಚರ್ಚ್ ಸ್ಟ್ರೀಟ್​ನ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್​ವರೆಗೆ, ರೆಸಿಡೆನ್ಸಿ ರಸ್ತೆಯ ಆಶೀರ್ವಾದಮ್ ಜಂಕ್ಷನ್​ನಿಂದ ಮೆಯೊ ಹಾಲ್ ಜಂಕ್ಷನ್​ವರೆಗೆ, ಎಂ.ಜಿ. ರಸ್ತೆ ಜಂಕ್ಷನ್​ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್​ಬಿಐ) ವೃತ್ತದವರೆಗೆ ನಿಷೇಧಿಸಲಾಗಿದೆ.

ಸುರಕ್ಷತೆಗೆ ಕೈಗೊಂಡ ಕ್ರಮಗಳು

ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಅನುವು ಮಾಡಿಕೊಡಲಾಗುವುದು. ಬಾರ್ ಆಂಡ್ ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್, ಮನರಂಜನಾ ಸ್ಥಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಇದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್, 180 ಕಡೆ ಫೋಕಸ್ ಲೈಟ್​ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ 250 ಕಡೆ ತಾತ್ಕಾಲಿಕವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೇಫ್ಟಿ ಶೆಲ್ಟರ್​ಗಳು, ಆಂಬುಲೆನ್ಸ್​ಗಳನ್ನು ನಿಯೋಜಿಸಲಾಗುತ್ತಿದೆ. ಜನದಟ್ಟಣೆಯ ಮೇಲೆ ಡ್ರೋನ್ ಕ್ಯಾಮೆರಾಗಳಿಂದ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ಡಾ. ಪರಮೇಶ್ವರ ತಿಳಿಸಿದರು.
ಮದ್ಯ ಸೇವಿಸಿ ವಾಹನ ಚಾಲನೆ ಮಾಡುವುದು ಬಹಳ ಅಪಾಯಕಾರಿ. ರಸ್ತೆ ಅಪಘಾತಗಳಿಗೆ ಇದು ಕೂಡ ಒಂದು ಮುಖ್ಯ ಕಾರಣ ಎಂಬುದು ಅಧಿಕೃತ ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಜೀವ ಮತ್ತು ಜೀವನ ಅಮೂಲ್ಯ. ಸಂಭ್ರಮಾಚರಣೆ ಇರಲಿ. ಆದರೆ ಅದು ಅತಿರೇಕ ಆಗದಿರಲಿ. ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಎಷ್ಟೋ ಅವಘಡಗಳನ್ನು ತಪ್ಪಿಸಬಹುದು. ಈ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನಕ್ಕೆ ವಿಜಯವಾಣಿ ಕೈಜೋಡಿಸಿದೆ.
| ಡಾ. ಆನಂದ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರು, ವಿಆರ್​ಎಲ್ ಸಮೂಹ ಸಂಸ್ಥೆಗಳು
2025ರ ಡಿಸೆಂಬರ್ ಕೊನೆಯ ಸಂದರ್ಭ ಹೊಸ ವರ್ಷಕ್ಕೆ ಕಾಯುತ್ತಿರುವ ಮಂದಿ ಸಂಭ್ರಮಾಚರಣೆ ನಡುವೆ ಡ್ರಿಂಕ್ ಆಂಡ್ ಡ್ರೖೆವ್ ಮಾಡಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳದಿರಲಿ. ಈ ಹಿಂದೆ ಪ್ರತೀ ವರ್ಷವೂ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕುಡಿದು ವಾಹನ ಚಲಾಯಿಸಿ ಸಾಕಷ್ಟು ಅಪಘಾತಗಳಾಗಿ ಸಾವು-ನೋವು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ 2026ರ ಸಂಭ್ರಮಾಚರಣೆ ಸೂತಕ ಆಗದೆ ಸುರಕ್ಷಿತವಾಗಿರಲಿ.
| ಕೆ.ಎಂ.ಶಿವಕುಮಾರ್ ಪ್ರಧಾನ ಸಂಪಾದಕ, ಕರ್ನಾಟಕ ಟಿವಿ
ಎಲ್ಲರಿಗೂ 2026 ಹೊಸ ವರ್ಷದ ಶುಭಾಶಯಗಳು. ಈ ಘಳಿಗೆ ತಮ್ಮೆಲ್ಲರಿಗೂ ಹೊಸತನ ತರಲಿ. ಹೊಸ ಹೊಸ ಜವಾಬ್ದಾರಿಗಳು, ದೊಡ್ಡ ಹುದ್ದೆಗಳನ್ನು ಏರುವಂತಾಗಲಿ. ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮತ್ತು ಮೈಮರೆಯದೆ ಹೊಸ ವರ್ಷವನ್ನು ಬರಮಾಡಿಕೊಳ್ಳಿ. ಪಾರ್ಟಿಗಳಿಗಿಂತ ಫ್ಯಾಮಿಲಿ ಮುಖ್ಯ ಎಂಬುದು ಗಮನದಲ್ಲಿರಲಿ.
| ವಿಜಯಕಲಾ ಸುಧಾಕರ್ ಮಾಲೀಕರು, ಆಡ್-6
ಮದ್ಯಪಾನ ಮಾಡಿ ವಾಹನ ಚಾಲನೆ ನಿಯಂತ್ರಣಕ್ಕೆ ಒಂದು ವಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ವರ್ಷ ಸಂಭ್ರಮಾಚರಣೆಗೆ ಇಲಾಖೆಯಿಂದ ಎಲ್ಲ ರೀತಿಯ ಭದ್ರತೆ, ಸುರಕ್ಷತೆ ನೀಡಲಾಗುತ್ತಿದೆ. ಆದರೆ, ಕುಡಿದ ಮತ್ತಿನಲ್ಲಿ ಅತಿರೇಕದ ವರ್ತನೆ, ಪುಂಡಾಟ, ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಜನರು ನಗರದ ವಿವಿಧ ಕಡೆ ಸೇರುವ ನಿರೀಕ್ಷೆ ಇದೆ.
| ಸೀಮಂತ್​ಕುಮಾರ್ ಸಿಂಗ್ ಬೆಂಗಳೂರು ನಗರ ಪೊಲೀಸ್ ಆಯುಕ್ತ
ಹೊಸವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಕುಡಿದು ವಾಹನ ಚಾಲನೆ ಮಾಡುವವರ ಪತ್ತೆಗೆ ನಗರದ 166 ಕಡೆ ಚೆಕ್​ಪೋಸ್ಟ್ ತೆರೆಯಲಾಗಿದೆ. ಈವರೆಗೆ 3,716 ವಾಹನ ಸವಾರರ ವಿರುದ್ಧ ಡಿಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆ ಡಿ.31ರ ರಾತ್ರಿವರೆಗೆ ಮುಂದುವರಿಯಲಿದೆ. ನಾಗರಿಕರು ಸ್ವಂತ ವಾಹನ ಬಳಕೆ ಮಾಡದೆ ಅಂದು ಮೆಟ್ರೋ, ಬಿಎಂಟಿಸಿ, ಕ್ಯಾಬ್​ಗಳಲ್ಲಿ ಸಂಚರಿಸಬೇಕು. ಕುಡಿದು ವಾಹನ ಚಾಲನೆ, ವ್ಹೀಲಿಂಗ್ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಬಗ್ಗೆ ಸಾರ್ವಜನಿಕರು 112ಗೆ ಕರೆ ಮಾಡಿ ಮಾಹಿತಿ ನೀಡಬೇಕು.
| ಕಾರ್ತಿಕ್ ರೆಡ್ಡಿ, ಸಂಚಾರ ವಿಭಾಗದ ಜಂಟಿ ಆಯುಕ್ತ
ಹೊಸ ವರ್ಷದ ಸಂದರ್ಭದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂಬುದರ ಬಗ್ಗೆ ಅರಿವು ಮೂಡಿಸಲು ಕೈಗೊಂಡಿರುವ ಈ ಅಭಿಯಾನ ಉತ್ತಮವಾಗಿದೆ. ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಸಹಜವಾಗಿ ತಮಗೂ ಅಪತ್ತು, ಬೇರೆಯವರಿಗೂ ಆಪತ್ತು ಉಂಟಾಗುತ್ತದೆ. ಹಾಗಾಗಿ, ಇಂತಹ ಆಪತ್ತಿಗೆ ಜನರು ಬಲಿಯಾಗಬಾರದು. ಅಭಿಯಾನಕ್ಕೆ ನನ್ನ ಬೆಂಬಲ ಇದೆ.
| ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕ
ಹೊಸವರ್ಷ ಮಾತ್ರವಲ್ಲದೆ ಇತರ ಸಂದರ್ಭದಲ್ಲೂ ಕುಡಿದು ವಾಹನ ಚಲಾಯಿಸಬಾರದು. ಹೊಸ ವರ್ಷದಲ್ಲಿ ಕೆಲವರು ಮೈಮರೆತು ಉದ್ಧಟತನದಿಂದ ವರ್ತಿಸುತ್ತಾರೆ. ಮದ್ಯಪಾನದಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಅಪಘಾತ ಸಂಭವಿಸಿ ನೀವು ಮಾತ್ರವಲ್ಲದೆ ಬೇರೆಯವರ ಪ್ರಾಣಕ್ಕೂ ಕಂಟಕವಾಗುತ್ತದೆ. ಹಾಗಾಗಿ, ಹೊಸ ವರ್ಷದ ವೇಳೆ ಜನರು ಜೋಪಾನವಾಗಿ ಇರಬೇಕು.
| ಡಾ. ಸಿ.ಎನ್.ಮಂಜುನಾಥ್, ಸಂಸದ
ಕುಡಿದು ವಾಹನ ಚಲಾಯಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ವರ್ಷದ ಕೊನೇ ಅಥವಾ ಹೊಸ ವರ್ಷದಲ್ಲಿ ಬರೀ ಮದ್ಯ ಸೇವಿಸಿ ಆಚರಿಸಬೇಕಾ? ಬೇರೆ ಮಾರ್ಗಗಳಿಂದ ಹೊಸ ವರ್ಷವನ್ನು ಆಚರಿಸಬಹುದು. ಇಂತಹ ಚಟಕ್ಕೆ ನಿಮ್ಮ ಪ್ರಾಣ ಮತ್ತು ಬೇರೆ ಪ್ರಾಣಕ್ಕೂ ತೊಂದರೆ ಕೊಡುವುದು ಸರಿಯಲ್ಲ. ಮನೆಯಲ್ಲಿ ಪಾಲಕರು, ಪತ್ನಿ, ಮಕ್ಕಳು ಇರುತ್ತಾರೆ. ಅವರಿಗೋಸ್ಕರವಾಗಿ ಮದ್ಯ ಸೇವಿಸಬೇಡಿ.
| ಪ್ರೊ. ಕೃಷ್ಣೇಗೌಡ, ಹಿರಿಯ ಚಿಂತಕ
ನಮ್ಮ ಜೀವ ನಮ್ಮ ಕೈಯಲ್ಲೇ ಇದೆ. ಮದ್ಯಪಾನ ಮಾಡಿ ಯಾರೂ ವಾಹನ ಚಲಾಯಿಸಬೇಡಿ. ಸಂಭ್ರಮ ಸಂಭ್ರಮವಾಗಿ ಇರಬೇಕೇ ಹೊರತು ಸಂತಾಪವಾಗಬಾರದು. ಎಲ್ಲರೂ ಕೈಜೋಡಿಸುವ ಮೂಲಕ ಈ ಅಭಿಯಾನ ಯಶಸ್ವಿಗೊಳಿಸೋಣ.
| ಕಾಕ್ರೋಜ್, ಸುಧೀರ್ ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net