ಫುಡ್ ಡೆಲಿವರಿ ಸೋಗಿನಲ್ಲಿ ಡ್ರಗ್ಸ್ ದಂಧೆ

Drug racket
Drug racket
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಹೊಸ ಜಾಲ ಸಕ್ರಿಯ
  • ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರ ಭಾಗಿ
  • ತಡರಾತ್ರಿ ಡೆಲಿವರಿ ದಂಧೆ ಜೋರು
  • ಪೊಲೀಸರ ಕಣ್ಣು ತಪ್ಪಿಸಿ ಕೃತ್ಯ

ಬೆಂಗಳೂರು:

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದರೂ, ಕಳ್ಳಸಾಗಣೆ ಜಾಲ ಹೊಸ ಮಾರ್ಗ ತೆರೆದುಕೊಳ್ಳುತ್ತಿದೆ. ಇದೀಗ ಫುಡ್ ಡೆಲಿವರಿ ಬಾಯ್‌ಗಳ ಸೋಗಿನಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಜಾಲ ಸಕ್ರಿಯವಾಗಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ಇ-ಕಾಮರ್ಸ್ ಹಾಗೂ ಆನ್‌ಲೈನ್ ಅಗ್ರಿಗೇಟರ್ ಸಂಸ್ಥೆಗಳ ಹೆಸರಿನಲ್ಲಿ ಆಹಾರ ಮತ್ತು ಅಗತ್ಯ ವಸ್ತುಗಳ ವಿತರಣೆಯೊಂದಿಗೆ, ಕೆಲವರು ಇದೇ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಎಂಡಿಎಂಎ, ಕೊಕೇನ್, ಗಾಂಜಾ ಸೇರಿ ವಿವಿಧ ಮಾದಕ ವಸ್ತುಗಳನ್ನು ವ್ಯಸನಿಗಳಿರುವ ಸ್ಥಳಗಳಿಗೆ ತಲುಪಿಸುತ್ತಿದ್ದಾರೆ.

ಪಾಸಣೆ ಮತ್ತು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಪೆಡ್ಲರ್‌ಗಳು ಪರ್ಯಾಯ ಮಾರ್ಗಗಳ ಮೂಲಕ ತಮ್ಮ ಜಾಲವನ್ನು ವಿಸ್ತರಿಸಿಕೊಂಡಿದ್ದಾ. ಜೊಮ್ಯಾಟೋ, ಸ್ವಿಗ್ಗಿ, ಬ್ಲಿಂಕಿಟ್, ಜೆಪ್ಟೋ, ಪೋರ್ಟರ್ ಸೇರಿ ವಿವಿಧ ಆನ್‌ಲೈನ್ ಸೇವೆಗಳ ಮಾದರಿಯ ಉಡುಪು ಹಾಗೂ ಬ್ಯಾಗ್‌ಗಳನ್ನು ಬಳಸಿಕೊಂಡು ಅನುಮಾನ ಬಾರದ ರೀತಿಯಲ್ಲಿ ಮಾದಕವಸ್ತು ಪೂರೈಕೆ ಮಾಡುತ್ತಿದ್ದಾರೆ.

ಹೊರ ರಾಜ್ಯದ ಯುವಕರ ಬಳಕೆ:

ಈ ಜಾಲದಲ್ಲಿ ಕೇರಳ, ತಮಿಳುನಾಡು, ಛತ್ತೀಸ್‌ಗಢ, ಒಡಿಶಾ, ಅಸ್ಸಾಂ ಹಾಗೂ ರಾಜಸ್ಥಾನ ಸೇರಿ ವಿವಿಧ ರಾಜ್ಯಗಳ ಯುವಕರನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನಲಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಹಣ ಗಳಿಸುವ ಆಸೆಯಿಂದ ಕೆಲವು ವಿದ್ಯಾವಂತ ಯುವಕರು ಕೂಡ ಈ ಅಕ್ರಮ ಚಟುವಟಿಕೆಯಲ್ಲಿ ತೊಡಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ತಡರಾತ್ರಿ ಈ ಕೃತ್ಯ ಜೋರಾಗಿ ನಡೆಯುತ್ತಿದೆ ಎಂಬ ಆರೋಪವಿದೆ.

ಆಹಾರ ಪ್ಯಾಕೆಟ್‌ಗಳಲ್ಲಿ ವಿದೇಶದಿಂದ ಡ್ರಗ್ಸ್:

ವಿದೇಶಗಳಿಂದ ಮಕ್ಕಳ ಆಹಾರ, ಚಾಕೊಲೇಟ್, ಬಿಸ್ಕತ್ ಹಾಗೂ ಸಾಕುಪ್ರಾಣಿಗಳ ಆಹಾರದ ಪ್ಯಾಕೆಟ್‌ಗಳ ರೂಪದಲ್ಲಿ ಹಲವು ಮಾದರಿಯ ಡ್ರಗ್ಸ್ ಬೆಂಗಳೂರಿಗೆ ತಲುಪುತ್ತಿದೆ. ನಂತರ ಅವುಗಳನ್ನು ಫುಡ್ ಡೆಲಿವರಿ ಸಿಬ್ಬಂದಿಯ ಸೋಗಿನಲ್ಲಿರುವ ಕೂರಿಯರ್‌ಗಳ ಮೂಲಕ ವಿದೇಶಿ ಪೆಡ್ಲರ್‌ಗಳು ಹಾಗೂ ಸ್ಥಳೀಯ ದಂಧೆಕೋರರಿಗೆ ತಲುಪಿಸಲಾಗುತ್ತಿದೆ.
ಮಾದಕ ವಸ್ತು ವ್ಯಸನಿಗಳು, ಐಟಿ-ಬಿಟಿ ಉದ್ಯೋಗಿಗಳು, ಕಾಲೇಜು ಯುವಕ, ಯುವತಿಯರು ಹಾಗೂ ಖಾಯಂ ಗಿರಾಕಿಗಳಿಗೆ ಸಲಿಸಾಗಿ ಡ್ರಗ್ಸ್ ಪೂರೈಕೆ ಮಾಡಲಾಗುತ್ತಿದೆ. ಈ ಹೊಸ ವಿಧಾನವನ್ನು ಪತ್ತೆಹಚ್ಚಲು ಪೊಲೀಸರು ತಾಂತ್ರಿಕ ನಿಗಾವಹಿಕೆ, ಗುಪ್ತಚರ ಮಾಹಿತಿ ಸಂಗ್ರಹ ಹಾಗೂ ವಿಶೇಷ ಕಾರ್ಯಾಚರಣೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

58 ಲಕ್ಷ ಮೌಲ್ಯದ ಕೊಕೇನ್ ಜಪ್ತಿ

ಡೆಲೆವರಿ ಸಿಬ್ಬಂದಿಯೊಬ್ಬ 58 ಲಕ್ಷ ರೂ.ಮೌಲ್ಯದ ಡ್ರಗ್ಸ್‌ನ್ನು ಚಾಕೊಲೇಟ್ ಬಾಕ್ಸ್‌ಗಳ್ಲಿ ಸಾಗಣೆ ಮಾಡುತ್ತಿರುವುದನ್ನು ಚಾಮರಾಜಪೇಟೆ ಪೊಲೀಸರು ಪತ್ತೆ ಮಾಡಿದ್ದಾರೆ. ಸಣ್ಣ ಚಾಕೊಲೇಟ್ ಬಾಕ್ಸ್‌ಗಳಲ್ಲಿ ಅಡಗಿಸಿಟ್ಟಿದ್ದ ಕೊಕೇನ್ ಸಮೇತ ಉತ್ತರ ಪ್ರದೇಶದ ಆರೋಪಿ ರಾಜು ಎಂಬಾತನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ. ತಡರಾತ್ರಿ ಅಪಾರ್ಟ್‌ಮೆಂಟ್ ಸಿಬ್ಬಂದಿಗೆ ಆಹಾರ ತಲುಪಿಸುವ ನೆಪದಲ್ಲಿ ಅದೇ ಏರಿಯಾದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿದ್ದ ವ್ಯಕ್ತಿಗೆ ಕೊಕೇನ್ ತಲುಪಿಸಿದ್ದಾನೆ. ಹೀಗೆ ಹಲವರು ುಡ್ ಡೆಲೆವರಿ ಹೆಸರಿನಲ್ಲಿ ನಗರದಲ್ಲಿ ಡ್ರಗ್ಸ್ ದಂಧೆಯಲ್ಲಿ ತೋಡಗಿದ್ದಾರೆ.

ಹೆಚ್ಚಾಗಿ ವಿದೇಶಿ ಪ್ರಜೆಗಳು ಶಾಮಿಲು

ನೈಜೀರಿಯಾ, ಬ್ಯಾಂಕಾಂಕ್, ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳಿಂದ ಬೆಂಗಳೂರು, ತಮಿಳುನಾಡು, ಕೇರಳ ಮತ್ತು ದೆಹಲಿ ಏರ್‌ಪೋರ್ಟ್ ತಲಪುತ್ತಿರುವ ವಿದೇಶಿ ಡ್ರಗ್ಸ್, ನಂತರ ರೈಲ್ವೆ, ಸಾರ್ವಜನಿಕರ ಸಾರಿಗೆ ಬಸ್, ಗೂಡ್ಸ್ ವಾಹನಗಳ ಮೂಲಕ ಬೆಂಗಳೂರಿಗೆ ಆಮದಾಗುತ್ತಿದೆ. ಈ ಜಾಲದ ಹಿಂದೆ ವಿದೇಶಿ ಪ್ರಜೆಗಳ ಕೈವಾಡ ಅಡಗಿರುವ ಪರಿಣಾಮ ಅವರ ಸಲಹೆ, ಸೂಚನೆಯಂತೆ ಇ-ಕಾಮರ್ಸ್ ಮೂಲಕ ಡ್ರಗ್ಸ್ ದಂಧೆ ವಿಸ್ತರಣೆಯಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net