ತಾವರೆಕೆರೆಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ನಂದಗುಡಿ ಪೊಲೀಸ್ ಠಾಣೆ ಸಿಪಿಐ ಶಾಂತಾರಾಮ್ ಚಾಲನೆ ನೀಡಿದರು. ಪಿಡಿಒ ಮುನಿಗಂಗಯ್ಯ, ಪ್ಯಾರಾ ಕಾನೂನು ಸ್ವಯಂ ಸೇವಕ ಡಾ.ನಟರಾಜ್, ಗ್ರಾಪಂ ಮಾಜಿ ಅಧ್ಯಕ್ಷರಾದ ರವಿಕುಮಾರ್, ಮಂಜುನಾಥ್, ಟಿ.ನಾಗರಾಜ್, ಪ್ರೌಢಶಾಲಾ ಮುಖ್ಯಶಿಕ್ಷಕ ಗುಲ್ಬದನ್ ತಾರಾ, ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಪ್ರವಿಣ್ ಇದ್ದರು.
ನಂದಗುಡಿ : ಮಾದಕವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡುವ ಜತೆಗೆ ದೇಶದ ಪ್ರಗತಿಯೂ ಪರೋಕ್ಷವಾಗಿ ಕುಂಠಿತವಾಗುತ್ತದೆ ಎಂದು ನಂದಗುಡಿ ಪೊಲೀಸ್ ಠಾಣೆಯ ವೃತ್ತ ಆರಕ್ಷಕ ನಿರೀಕ್ಷಕ ಶಾಂತಾರಾಮ್ ತಿಳಿಸಿದರು.
ತಾವರೆಕೆರೆಯಲ್ಲಿ ನಂದಗುಡಿ ಪೋಲಿಸ್ ಠಾಣೆ, ಗ್ರಾಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಡ್ರಗ್ಸ್ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಜಾಥಾ ಮತ್ತು ಮಕ್ಕಳ ಕಾನೂನುಗಳ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಹಾಗೂ ಭವಿಷ್ಯದ ಗುರಿಗಳತ್ತ ಗಮನ ಹರಿಸಬೇಕು ಎಂದರು.
ಪ್ಯಾರಾ ಕಾನೂನು ಸ್ವಯಂ ಸೇವಕ ಡಾ.ನಟರಾಜ್ ಎಂ.ಎನ್.ಆರ್ ಮಾತನಾಡಿ, ಸಾಮಾಜಿಕ ಮಾಧ್ಯಮಗಳು ಹಾಗೂ ಸ್ನೇಹಿತರ ಪ್ರೇರೇಪಣೆಯಿಂದ ದುಶ್ಚಟಗಳಿಗೆ ದಾಸರಾಗಿ ಆರೋಗ್ಯ ಜತೆಗೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಅಣ್ವಸ್ತ್ರಗಳೇ ಬೇಕೆಂದಿಲ್ಲ. ಮಾದಕ ವಸ್ತುಗಳ ಬಳಕೆಯಲ್ಲಿ ತೊಡಗಿದರೆ ಸಾಕು. ಮಕ್ಕಳಿಗಾಗಿಯೇ ಪ್ರತ್ಯೇಕ ಕಾನೂನು, ಹಕ್ಕುಗಳಿದ್ದು, ಇಂತಹ ಅರಿವು ಕಾರ್ಯಕ್ರಮಗಳ ಮೂಲಕ ಮಾಹಿತಿ ನೀಡಬೇಕು ಎಂದರು.
ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆ, ಲೈಂಗಿಕ ದೌರ್ಜನ್ಯ, ಬಾಲ್ಯವಿವಾಹ ಸೇರಿದಂತೆ ಮಾದಕ ವಸ್ತುಗಳ ಸಾಗಾಟಕ್ಕೆ ಮಕ್ಕಳನ್ನು ಬಳಸಿಕೊಳ್ಳುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದರೆ ಮಕ್ಕಳ ಸಹಾಯವಾಣಿ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆ ಮಕ್ಕಳಿಗೆ ಚಟವಾಗಿ ಪರಿಣಮಿಸಿದೆ. ಆದ್ದರಿಂದ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಗಮನಹಿಸಿ ಪುಸ್ತಕ ಓದುವ, ಕ್ರೀಡೆ ಅಥವಾ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರೇರೆಪಿಸಬೇಕು.