ಕುಡಿಯುವ ನೀರಿಲ್ಲದೆ ಪರದಾಟ

ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಕೆಟ್ಟುನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಮಂಜೇಗೌಡ, ಸುಮಾ, ಪುನೀತ್, ಗೋವಿಂದೇಗೌಡ, ಕಾಂತರಾಜು ಇತರರು ಇದ್ದರು.
ಕಿಕ್ಕೇರಿ ಹೋಬಳಿಯ ಆನೆಗೊಳ ಗ್ರಾಮದಲ್ಲಿ ಕೆಟ್ಟುನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಪ್ರತಿಭಟನೆ ನಡೆಸಿದರು. ಮಂಜೇಗೌಡ, ಸುಮಾ, ಪುನೀತ್, ಗೋವಿಂದೇಗೌಡ, ಕಾಂತರಾಜು ಇತರರು ಇದ್ದರು.
Published on
ಕಿಕ್ಕೇರಿ: ಹೋಬಳಿಯ ಗಡಿಭಾಗವಾದ ಆನೆಗೊಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ತುರ್ತಾಗಿ ಬಗೆಹರಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಆಗ್ರಹಿಸಿದರು.

ಗುರುವಾರ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಜಮಾಯಿಸಿದ ರೈತ ಸಂಘದ ಸದಸ್ಯರು, ಗ್ರಾಮಸ್ಥರು ಸ್ಥಳೀಯ ಆಡಳಿತದ ವಿರುದ್ಧ ಘೋಷಣೆ ಕೂಗಿದರು.

ಸುಮಾರು ದಿನಗಳಿಂದ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ನೀರು ಬರುತ್ತಿಲ್ಲ. ಇರುವ ಏಕೈಕ ನೀರಿನ ಕೇಂದ್ರ ಇದಾಗಿದೆ. ಜಲಜೀವನ್ ಮಿಷನ್‌ನಿಂದಲೂ ನೀರಿನ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವರಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.

ಅನೈರ್ಮಲ್ಯ ತಾಂಡವ: ಅಲ್ಲದೆ ಘಟಕದ ಸುತ್ತ ತ್ಯಾಜ್ಯದ ರಾಶಿಯಿದ್ದು, ಅನೈರ್ಮಲ್ಯ ಮನೆ ಮಾಡಿದೆ. ಜತೆಗೆ ಘಟಕದ ಬಳಿ ಫಾಸ್ಟ್‌ಫುಡ್, ಮಾಂಸದ ಹೋಟೆಲ್‌ಗಳಿದ್ದು, ಅವುಗಳಿಂದ ಉತ್ಪತ್ತಿಯಾಗುವ ಮಾಂಸದ ತ್ಯಜ್ಯವನ್ನು ಎಲ್ಲೆಂದರಲ್ಲಿ ಹಾಕಲಾಗಿದೆ. ಇದರೊಂದಿಗೆ ಮದ್ಯದ ಬಾಟಲ್‌ಗಳನ್ನು ಬಿಸಾಡಲಾಗುತ್ತಿದೆ. ಮಲ, ಮೂತ್ರ ವಿಸರ್ಜನೆಯಿಂದಲೂ ಇಡೀ ಪರಿಸರ ಹಾಳಾಗಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿ, ಇದೇ ಅಧ್ವಾನ ಮುಂದುವರಿದರೆ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಆನೆಗೊಳ ಘಟಕದ ಅಧ್ಯಕ್ಷ ಚಿಕ್ಕತರಹಳ್ಳಿ ಮಂಜೇಗೌಡ, ಸದಸ್ಯರಾದ ಸುಮಾ ಹರೀಶ್, ಆನೆಗೊಳ ಮಂಜೇಗೌಡ, ಪುನೀತ್, ಗೋವಿಂದೇಗೌಡ, ಕಾಂತರಾಜು, ಪುರುಷೋತ್ತಮ್, ಪುಟ್ಟರಾಜು, ಕುಮಾರ್, ಸೊಂಭಣ್ಣ, ಅಂಚೇಬೀರನಹಳ್ಳಿ ಮಂಜುನಾಥ್, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net