ಕಟ್ಟು ಪದ್ಧತಿಯಡಿ ನಾಲೆಗಳಿಗೆ ನೀರು ಹರಿಸಿ

ಕೆ.ಆರ್.ಸಾಗರದ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಕಚೇರಿ ಮುಂದೆ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
ಕೆ.ಆರ್.ಸಾಗರದ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಕಚೇರಿ ಮುಂದೆ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿ ತಾಯಿ ಹೋರಾಟ ಸಮಿತಿ
  • ಮುಖಂಡ ಕೆ.ಎಸ್ ನಂಜುಂಡೇಗೌಡ ನೇತೃತ್ವ

ಕೆ.ಆರ್.ಸಾಗರ:

ಕೆ.ಆರ್.ಸಾಗರ ಅಣೆಕಟ್ಟೆಯಿಂದ ನದಿಗೆ ಬಿಟ್ಟಿರುವ ಸುಮಾರು 2,294 ಕ್ಯೂಸೆಕ್ ನೀರು ಎಲ್ಲಿಗೆ ಹರಿಯುತ್ತಿದೆ ಹಾಗೂ ಕಟ್ಟು ಪದ್ಧತಿಯಡಿ ಶೀಘ್ರ ನಾಲೆಗಳಿಗೆ ನೀರು ಹರಿಸಲು ಕಾರ್ಯಪಾಲಕ ಇಂಜಿನಿಯರ್ ಸೂಚನೆ ನೀಡಬೇಕೆಂದು ಒತ್ತಾಯಿಸಿ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಭೂಮಿ ತಾಯಿ ಹೋರಾಟ ಸಮಿತಿ ವತಿಯಿಂದ ಇಲ್ಲಿನ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.

ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನದಿಗೆ ಹರಿಯುತ್ತಿರುವ ನೀರಿನ ಬಗ್ಗೆ ಸೂಕ್ತ ಮಾಹಿತಿ ಕೊಡಲು ಕಳ್ಳಾಟ ಏಕೆ. ರೈತರ ಬೆಳೆಗಳಿಗೆ ನೀರು ಕೊಡುತ್ತೇವೆ ಎಂದು ಹೇಳದ ಸಚಿವರು ಹಾಗೂ ಶಾಸಕರು, ನದಿಗೆ ನೀರು ಬಿಡುತ್ತಿಲ್ಲ ಎನ್ನುತ್ತಾರೆ. 2 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಎಲ್ಲಿಗೆ ಹೋಗುತ್ತಿದೆ ಎಂದು ಅಧಿಕಾರಿಗಳು ತಿಳಿಸಬೇಕು. ನಮ್ಮ ವ್ಯಾಪ್ತಿಯ ಬೆಳೆಗಳಿಗೆ ಕಟ್ಟು ಪದ್ಧತಿಯಡಿ ನೀರು ಹರಿಸುವುದರ ಜತೆಗೆ ಈಗ ನಷ್ಟವಾಗಿರುವ ಬೆಳೆಗಳಿಗೆ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದರು.
ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಕಾರ್ಯಪಾಲಕ ಇಂನಿಯರ್ ಬೆಂಗಳೂರಿಗೆ ತೆರಳಿರುವ ಕಾರಣ ಹಿರಿಯ ಅಧಿಕಾರಿಗಳ ಸೂಚನೆಯಂತೆ ಪ್ರಭಾರ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲೋಹಿತ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಅಣೆಕಟ್ಟೆಯಿಂದ ಕೇವಲ ಕುಡಿಯುವ ನೀರು ಮತ್ತು ಇತರ ಉದ್ದೇಶಕ್ಕಾಗಿ ಬಿಡಲಾಗಿದೆ. ಅಣಕಟ್ಟೆಯಿಂದ ಹೆಚ್ಚು ನೀರು ಹೋಗುತ್ತಿಲ್ಲ. ಸಭೆ ನಂತರ ರೈತರಿಗೆ ಎಷ್ಟು ನೀರು ಕೊಡಬೇಕೆಂಬುದರ ಬಗ್ಗೆ ಮಾಹಿತಿ ಸಿಗಲಿದೆ ಎಂದು ತಿಳಿಸಿದ ಬಳಿಕ ಪ್ರತಿಭಟನೆ ಅಂತ್ಯವಾಯಿತು.
ಭೂಮಿ ತಾಯಿ ಹೋರಾಟ ಸಮಿತಿ ಸದಸ್ಯರಾದ ಕೃಷ್ಣೇಗೌಡ, ಮಹದೇವು, ಎಂ.ಕೃಷ್ಣ, ವಸಂತಕುಮಾರ್, ಮಹಾಲಿಂಗು, ಸ್ವಾಮಿ, ಕಿರಂಗೂರು ಮಹದೇವು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net