ಹನೂರು: ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಆದರ್ಶ ಹಾಗೂ ಬದುಕಿನ ಚಿಂತನೆಗಳು ಇಂದಿಗೂ ಜೀವಂತ. ಆದ್ದರಿಂದ ಪ್ರತಿಯೊಬ್ಬರೂ ಇವರ ಆದರ್ಶಗಳನ್ನು ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕಿದೆ ಎಂದು ತಾಲೂಕು ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಸೋಮಶೇಖರ್ ಅಭಿಪ್ರಾಯಪಟ್ಟರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಬುಧವಾರ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಆಯೋಜಿಸಿದ್ದ ಡಾ. ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರು 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತರು. ಮಠದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಧರ್ಮಗಳ ಹಾಗೂ ಸಮಾಜದ ಏಳಿಗೆಗೆ ಶ್ರಮಿಸಿದರು ಎಂದರು.
ದೇಶ ಹಾಗೂ ಸಮಾಜದ ಪ್ರಗತಿಯ ಬಗ್ಗೆ ಕಳಕಳಿ ಹೊಂದಿದ್ದ ಶ್ರೀಗಳು ಮುಂದಿನ ಪೀಳಿಗೆಯ ಪ್ರಗತಿಗೆ ಪಣ ತೊಟ್ಟಿದ್ದರು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜತೆಗೆ ಮಠದಲ್ಲಿ ಆಶ್ರಯ ನೀಡಿ ಆಶ್ರಯದಾತರಾಗಿದ್ದರು. ತ್ರಿವಿಧ ದಾಸೋಹ ನಡೆಸಿ ವಿಶ್ವವ್ಯಾಪಿ ಜನಮನ್ನಣೆ ಗಳಿಸಿದರು. ಶ್ರೀಗಳ ಆದರ್ಶ ಸಮಾಜಕ್ಕೆ ದಾರಿದೀಪವಾಗಿದೆ ಎಂದರು.
ಸಂಸ್ಮರಣೆ ಅಂಗವಾಗಿ ಮಹಾಸಭಾದ ವತಿಯಿಂದ ಅನ್ನಸಂತರ್ಪಣೆ ವಿತರಿಸಲಾಯಿತು. ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ಮುರುಡೇಶ್ವರಸ್ವಾಮಿ, ನಿರ್ದೇಶಕ ಜಗದೀಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಗಲ ಕುಮಾರ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಪಪಂ ಮಾಜಿ ಅಧ್ಯಕ್ಷೆ ಮುಮ್ತಾಜ್ ಬಾನು, ಮುಖಂಡರಾದ ಶಾಗ್ಯ ರವಿ, ಸಿದ್ದಪ್ಪ, ರಾಜುಗೌಡ, ನಟರಾಜು, ನಾಗೇಂದ್ರ ಇತರರು ಇದ್ದರು.