ಡಿ ಕೆ ಶಿವಕುಮಾರ್ ಜಾತಿ ನೋಡಿ ರಾಜಕಾರಣ ಮಾಡಿದವರಲ್ಲ. ಅವರು ಕಳೆದ ಎಂಟು ವರ್ಷಗಳಲ್ಲಿ ಪಕ್ಷಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಹಣ ಖರ್ಚು ಮಾಡಿ ನಿಸ್ವಾರ್ಥವಾಗಿ ದುಡಿದಿದ್ದಾರೆ. ರಾಜ್ಯದಲ್ಲಿ 136 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅವರ ಪಾತ್ರ ಬಹಳ ಪ್ರಮುಖವಾಗಿದೆ. ಕಳೆದ ಆರು ತಿಂಗಳಿಂದ ಅವರನ್ನು ಮುಖ್ಯಮಂತ್ರಿ ಮಾಡುವ ವಿಚಾರದ ಬಗ್ಗೆ ಮಕರ ಸಂಕ್ರಾಂತಿ, ಯುಗಾದಿ, ಪಂಚ ರಾಜ್ಯಗಳ ಚುನಾವಣೆ ಎಂದು ಕಾಲಹರಣ ಮಾಡುತ್ತಿದ್ದು ಕೂಡಲೇ ಅವರನ್ನು ಹೈಕಮಾಂಡ್ ಮಾತು ಕೊಟ್ಟಂತೆ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಯುತವಾಗಿ ನಡೆಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಹಾಗೂ ರಾಷ್ಟ್ರ ಮಟ್ಟದ ಚುನಾವಣಾ ಪ್ರಚಾರ ಕಾರ್ಯದಲ್ಲಿ ಮುಂಚೂಣಿ ನಾಯಕರಾಗಿ ಪ್ರಾಮಾಣಿಕವಾಗಿ ಕಾರ್ಯವೆಸಗುತ್ತಿರುವ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಉಳಿಯಬಹುದು ಎಂದು ಸ್ವಾಮೀಜಿ ಹೇಳಿದರು. ನಿಯೋಗದೊಂದಿಗೆ ಸುಲೇಪೇಟೆ ವಿಶ್ವಕರ್ಮ ಏಕದಂಡಗಿ ಮಠದ ಶ್ರೀ ದೊಡ್ಡೇಂದ್ರ ಸ್ವಾಮೀಜಿ ಹಾಗೂ ಉಪ್ಪಾರ ಸಮಾಜದ ಭಗೀರಥ ಸ್ವಾಮೀಜಿ ಜೊತೆಗಿದ್ದರು