ದೂರದ ಸಂಬಂಧಿಗಳಿಗೆ ವರದಕ್ಷಿಣೆ ನಿಷೇಧ ಕಾಯ್ದೆ ಅನ್ವಯವಾಗದು| High court

High court
High court
Published on
ಬೆಂಗಳೂರು: ವರದಣೆ ಕಿರುಕುಳಕ್ಕೆ ಸಂಬಂಧಿಸಿದ ಸಾವಿನ ಪ್ರಕರಣಗಳನ್ನು ಪತಿ, ಆತನ ರಕ್ತ ಸಂಬಂಧಿಗಳು (ಪಾಲಕರು, ಸೋದರ, ಸೋದರಿಯರು), ವಿವಾಹದ ಮೂಲಕ ಪತಿಯ ಕುಟುಂಬಕ್ಕೆ ಸೇರಿದವರು (ಓರಗಿತ್ತಿ, ನಾದಿನಿಯ ಪತಿ) ಅಥವಾ ದತ್ತು ಸ್ವೀಕಾರದ ಮೂಲಕ ಪತಿಯ ಕುಟುಂಬದ ಸದಸ್ಯರಾದವರ ವಿರುದ್ಧ ಮಾತ್ರ ದಾಖಲಿಸಲು ಅವಕಾಶವಿದೆ. ಮದುವೆ ಮಾತುಕತೆ ನಡೆಸಿದರು ಎಂದ ಮಾತ್ರಕ್ಕೆ ದೂರದ ಸಂಬಂಧಿಗಳನ್ನು ಈ ಕಾಯ್ದೆ ಅಡಿಯಲ್ಲಿ ಆರೋಪಿಗಳನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್​ ಸ್ಪಷ್ಪಡಿಸಿದೆ.
ಮದುವೆಯಾದ ಕೆಲವೇ ತಿಂಗಳಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನ ವಿನಯ ಕುಮಾರ್​ ಮತ್ತು ಆತನ ಪಾಲಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅವರನ್ನು ಪ್ರಕರಣದಿಂದ ಕೈಬಿಡಲು ನಿರಾಕರಿಸಿದೆ. ಆದರೆ, ಮದುವೆ ಮಾತುಕತೆ ನಡೆಸಿದ್ದ ದೂರದ ಸಂಬಂಧಿಗಳಿಬ್ಬರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿದೆ.
ಪ್ರಕರಣದ ದೂರುದಾರರು ಮತ್ತು ಆರೋಪಿಗಳು ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಗೊಳಿಸುತ್ತೇವೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಈ ಬೇಡಿಕೆಯನ್ನು ತಿರಸ್ಕರಿಸಿರುವ ನ್ಯಾಯಪೀಠ, ಇದು ಮದುವೆಯಾದ ಕೇವಲ 5 ತಿಂಗಳಲ್ಲೇ ಈ ದುರಂತ ಸಂಭವಿಸಿರುವುದರಿಂದ ಮತ್ತು ವರದಣೆ ಸಾವಿನಂತಹ ಗಂಭೀರ ಪ್ರಕರಣವಾದ ಕಾರಣ ಸಂಧಾನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ:

ಬೆಂಗಳೂರಿನ ಚಂದ್ರ ಲೇಔಟ್​ನ ಸೌಮ್ಯ ಎಂಬುವರ ವಿವಾಹವು ಮೈಸೂರಿನ ವಿನಯ ಕುಮಾರ್​ ಅವರೊಂದಿಗೆ 2024ರ ನವೆಂಬರ್​ನಲ್ಲಿ ನಡೆದಿತ್ತು. ಮದುವೆಯಾದ ನಂತರ ದಂಪತಿ ಅಮೆರಿಕದಲ್ಲಿ ನೆಲೆಸಿದ್ದರು. ಆದರೆ, ಅಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಆರಂಭವಾಗಿತ್ತು. ಸೌಮ್ಯ 2025ರ ಏಪ್ರಿಲ್​ನಲ್ಲಿ ಬೆಂಗಳೂರಿನ ತವರು ಮನೆಗೆ ಮರಳಿದ್ದರು. ನಂತರ ಪತಿಯ ಪಾಲಕರು ಮತ್ತು ಸಂಬಂಧಿಕರು ಸೌಮ್ಯ ಅವರ ಮನೆಗೆ ರಾಜೀ ಸಂಧಾನಕ್ಕೆ ಬಂದಿದ್ದರು. ಅಲ್ಲಿ ಜಗಳ ನಡೆದು ಮಹಿಳೆಯ ಚಾರಿತ್ರ್ಯವನ್ನು ನಿಂದಿಸಿದ್ದರು ಎನ್ನಲಾಗಿದೆ. ಇದರಿಂದ ಮನನೊಂದ ಸೌಮ್ಯ ಏ. 24ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಚಂದ್ರ ಲೇಔಟ್​ ಪೊಲೀಸರು ಪ್ರಕರಣ ದಾಖಲಿಸಿ ಚಾರ್ಜ್​ಸೀಟ್​ ಸಲ್ಲಿಸಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net