ರಾಜ್ಯಪಾಲರು ಓಡಿ ಹೋದರು ಅನ್ನೋದು ಬೇಡ ಜೋರಾಗಿ ನಡೆದು ಹೋದರು ಎನ್ನೋಣವೇ: ಸಿಎಂ

cm siddaramaiah
cm siddaramaiah
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಪಾಲರು ಒಂದು ಪ್ಯಾರ ಓದಿ, ದಡದಡನೆ ಪೀಠದಿಂದ ಇಳಿದು ಹೊರಟರು
  • ರಾಷ್ಟ್ರಗೀತೆಗೆ ಅಗೌರವ ಮಾಡಬಾರದಿತ್ತು ಎನ್ನುವುದಷ್ಟೆ ನಮ್ಮ ಅಸಮಾಧಾನ
ಬೆಂಗಳೂರು:
ರಾಜ್ಯಪಾಲರು ಓಡಿ ಹೋದರು ಎನ್ನುವ ಮಾತಿಗೆ ವಿವಾದ ಏಕೆ? ರಾಜ್ಯಪಾಲರು ಜೋರಾಗಿ ಹೋದರು ಎಂದು ಹೇಳೋಣ ಬಿಡಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದಾಗ ಸದನ ನಗೆಗಡಲಿನಲ್ಲಿ ಕ್ಷಣ ಕಾಲ ನಗೆಗಡಲಿನಲ್ಲಿ ಮುಳುಗಿತು.
ರಾಜ್ಯಪಾಲರು ಒಂದು ಪ್ಯಾರ ಓದಿ, ದಡದಡನೆ ಪೀಠದಿಂದ ಇಳಿದು ಹೊರಟರು. ನಾನೇ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರನ್ನು ನೋಡಿ ಎಂದೆ. ಆಗ ಅವರು ರಾಜ್ಯಪಾಲರನ್ನು ಓಡಿ ಹೋಗಿ ಹಿಂಬಾಲಿಸಿದರು. ಬಳಿಕ ನಾನೂ ಅವರ ಜೊತೆಗೆ ಸೇರಿಕೊಂಡೆ. ಆಚೆ ಅವರ ಕಾರಿನ ತನಕ ಹೋಗಿ ಬೀಳ್ಕೊಟ್ಟು ಬಂದಿದ್ದೇವೆ. ಇದು ವಾಸ್ತವವಾಗಿ ನಡೆದ ಘಟನೆ ಎಂದು ಸಿಎಂ ಸದನಕ್ಕೆ ವಿವರಣೆ ನೀಡಿದರು.
ರಾಜ್ಯಪಾಲರು ಒಂದು ಪ್ಯಾರ ಭಾಷಣವನ್ನಷ್ಟೆ ಓದಿದ್ದಾರೆ ಎಂದಾಗಲಿ, ಭಾಷಣ ಓದಲಿಲ್ಲ ಎಂದಾಗಲಿ ನಮ್ಮ ವಿವಾದವಿಲ್ಲ. ಶಿಷ್ಟಾಚಾರದ ಪ್ರಕಾರ ರಾಷ್ಟ್ರಗೀತೆಗೆ ಗೌರವ ನೀಡದೆ, ಅಗೌರವ ಮಾಡಿದ್ದರ ಬಗ್ಗೆ ಅಷ್ಟೆ ನಾವು ಮಾತನಾಡುತ್ತಿದ್ದೇವೆ ಎಂದರು.
ಶಿಷ್ಟಚಾರ ಪ್ರಕಾರ ನಡೆದಿದ್ದೇವೆ: ಎಚ್.ಕೆ.ಪಾಟೀಲ್
ಇದಕ್ಕೂ ಮುನ್ನ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ರಾಜ್ಯಪಾಲರಿಗೆ ಅಗೌರವ ಮಾಡುವ ಕೆಲಸವನ್ನು ನಾವು ಯಾರೂ ಮಾಡಿಲ್ಲ. ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿಗಳು, ಎರಡೂ ಸದನದ ಸ್ಪೀಕರ್, ಸಭಾಪತಿ ಮತ್ತು ನಾನು ಸ್ವಾಗತ ಮಾಡಿಕೊಂಡಿದ್ದೇವೆ. ಹಾಗೆಯೇ ಶಿಷ್ಟಾಚಾರದ ಪ್ರಕಾರ ಬೀಳ್ಕೊಟ್ಟಿದ್ದೇವೆ. ಆದರೆ ಅವರು ಹೋಗುವ ಭರದಲ್ಲಿ ರಾಷ್ಟ್ರಗೀತೆಗೆ ಅಗೌರವ ಮಾಡಬಾರದಿತ್ತು ಎನ್ನುವುದಷ್ಟೆ ನಮ್ಮ ಅಸಮಾಧಾನ. ಇದು ರಾಷ್ಟ್ರಗೀತೆಗೆ ಅಷ್ಟೇ ಅಲ್ಲ, ಇಡೀ ಸದನಕ್ಕೆ ಮಾಡಿದ ಅಗೌರವ ಎಂದು ಹೇಳಿದರು.
ರಾಜ್ಯಪಾಲರು ಹೋಗುವ ಸಂದರ್ಭದಲ್ಲಿ ಅವರಿಗೆ ಅಡ್ಡಿಯುಂಟು ಮಾಡಿದರು ಎನ್ನುವ ಸದಸ್ಯರು ಈ ಮನೆಯಲ್ಲಿ ಇಲ್ಲ. ಅವರು ಮೇಲ್ಮನೆ ಸದಸ್ಯರಾಗಿದ್ದಾರೆ. ಹಾಗಾಗಿ ಅವರ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ ಎಂದರು.
ನೀವು ಲಾಯರ್‌ಗಳಲ್ಲ, ನಾನು ಜಡ್ಜ್ ಅಲ್ಲ:
ಘಟನೆಯ ಜಟಾಪತಿ ನಡುವೆ ಮಧ್ಯೆ ಪ್ರವೇಶಿಸಿ ಸ್ಪೀಕರ್ ಯು.ಟಿ.ಖಾದರ್, ಎರಡೂ ಕಡೆಯ ವಾದ ವಿವಾದ ಮಾಡಲು ನೀವೆಲ್ಲ ಲಾಯರ್‌ಗಳಲ್ಲ. ಇದನ್ನೆಲ್ಲ ಆಲಿಸಿ ತೀರ್ಪು ನೀಡಲು ನಾನು ಜಡ್ಜ್ ಅಲ್ಲ. ಈಗಾಗಲೇ ಘಟನೆ ನಡೆದು ಹೋಗಿದೆ. ಏಕೆ ಹೀಗಾಗಿದೆ ಎನ್ನುವುದನ್ನು ವಿಷದವಾಗಿ ಪರಿಶೀಲಿಸಬೇಕಿದೆ. ಆದುದರಿಂದ ಈಗಲೇ ರೂಲಿಂಗ್ ಕಾಯ್ದಿರಿಸಿಕೊಂಡಿದ್ದೇನೆ. ಈಗಲೇ ರೂಲಿಂಗ್ ನೀಡಲು ಆಗುವುದಿಲ್ಲ ಎಂದು ಹೇಳಿದರು.
ಇದೇ ಅಧಿವೇಶನ ಮುಗಿಯುವುದರೊಳಗಾಗಿ ನಿಮ್ಮ ರೂಲಿಂಗ್ ನೀಡಿ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದಾಗ ಸ್ಪೀಕರ್ ಸಮ್ಮತಿಸಿದರು.

*ಎರಡೂ ಕಡೆಯ ವಾದ ವಿವಾದ ಮಾಡಲು ನೀವೆಲ್ಲ ಲಾಯರ್‌ಗಳಲ್ಲ. ಇದನ್ನೆಲ್ಲ ಆಲಿಸಿ ತೀರ್ಪು ನೀಡಲು ನಾನು ಜಡ್ಜ್ ಅಲ್ಲ.

-ಯು.ಟಿ.ಖಾದರ್, ಸ್ಪೀಕರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net