ವೈದ್ಯಕೀಯ ಕಾಲೇಜುಗಳಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಡಿ: ಕೆಇಎ ಸೂಚನೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ‘ಪ್ರವೇಶ ಮೇಲ್ವಿಚಾರಣಾ ಸಮಿತಿ’ ಅಧ್ಯಕ್ಷ ನ್ಯಾ. ರಾಮಚಂದ್ರ ಡಿ. ಹುದ್ದರ್ ವಿದ್ಯಾರ್ಥಿಗಳಿಗೆ ಸೂಚನೆ
  • ಕಾಲೇಜುಗಳು ಹೆಚ್ಚುವರಿ ಶುಲ್ಕ ಕೇಳಿದ್ದಲ್ಲಿ ಕೆಇಎ ‘ಪ್ರವೇಶ ಮೇಲ್ವಿಚಾರಣಾ ಸಮಿತಿ’ ಸಂಪರ್ಕಿಸಿ
  • ವಿದ್ಯಾರ್ಥಿಗಳು ತಮ್ಮ ಹಂಚಿಕೆಯ ಸಮಯದಲ್ಲಿ ಕೆಇಎಗೆ ಶುಲ್ಕವನ್ನು ಪಾವತಿಸಿರುತ್ತಾರೆ. ಸಂಗ್ರಹಿಸಿದ ವಿಶ್ವವಿದ್ಯಾಲಯ ಶುಲ್ಕವನ್ನು ಕೆಇಎ ನೇರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ರವಾನಿಸಿದೆ
ಬೆಂಗಳೂರು: ವೈದ್ಯಕೀಯ ಪದವಿ ಮತ್ತು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ಎಲ್ಲ ರೀತಿಯ ಶುಲ್ಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕವೇ ಪಡೆದಿರಲಾಗಿದೆ. ಒಂದು ವೇಳೆ ಪಾವತಿಸಿರುವ ಶುಲ್ಕದ ಜತೆಗೆ ಕಾಲೇಜುಗಳು ಹೆಚ್ಚುವರಿ ಶುಲ್ಕವನ್ನು ಪ್ರವೇಶದ ಸಮಯದಲ್ಲಿ ಕೇಳಿದ್ದಲ್ಲಿ ಕೆಇಎ ‘ಪ್ರವೇಶ ಮೇಲ್ವಿಚಾರಣಾ ಸಮಿತಿ’ಯನ್ನು ಸಂಪರ್ಕಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಈ ಸಂಬಂಧ ಸಮಿತಿ ಅಧ್ಯಕ್ಷ ನ್ಯಾ. ರಾಮಚಂದ್ರ ಡಿ. ಹುದ್ದರ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕೆಲವು ವೈದ್ಯಕೀಯ ಕಾಲೇಜುಗಳು ತಮ್ಮ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶದ ಸಮಯದಲ್ಲಿ ವಿಶ್ವವಿದ್ಯಾಲಯ ಶುಲ್ಕವನ್ನು ಸಂಗ್ರಹಿಸುತ್ತಿವೆ ಎಂದು ತಿಳಿದುಬಂದಿದೆ. ಆದರೆ, ವಿದ್ಯಾರ್ಥಿಗಳು ತಮ್ಮ ಹಂಚಿಕೆಯ ಸಮಯದಲ್ಲಿ ಕೆಇಎಗೆ ಶುಲ್ಕವನ್ನು ಪಾವತಿಸಿರುತ್ತಾರೆ. ಸಂಗ್ರಹಿಸಿದ ವಿಶ್ವವಿದ್ಯಾಲಯ ಶುಲ್ಕವನ್ನು ಕೆಇಎ ನೇರವಾಗಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ರವಾನಿಸಿದೆ ಎಂದು ತಿಳಿಸಿದ್ದಾರೆ.
ವೈದ್ಯಕೀಯ ಕಾಲೇಜುಗಳು ರಾಜ್ಯ ಸರ್ಕಾರದೊಂದಿಗೆ ಮಾಡಿಕೊಂಡ ಒಮ್ಮತದ ಒಪ್ಪಂದದ ಪ್ರಕಾರ, ಅನುಮತಿ ನೀಡದ ಠೇವಣಿ ಮತ್ತು ಇತರ ಶುಲ್ಕಗಳನ್ನು ಒತ್ತಾಯಪೂರ್ವಕವಾಗಿ ಸಂಗ್ರಹಿಸುತ್ತಿವೆ ಎಂಬ ದೂರುಗಳು ಬಂದಿದೆ. 30 ಸಾವಿರ ರೂ. ಕೌಶಲ ಪ್ರಯೋಗಾಲಯ ಶುಲ್ಕ ಮತ್ತು 15 ಸಾವಿರ ರೂ. ಇತರ ಶುಲ್ಕವನ್ನು ಸಂಗ್ರಹಿಸುತ್ತಿವೆ ಎಂದು ತಿಳಿದು ಬಂದಿದೆ.
ಅಂತಹ ಶುಲ್ಕಗಳನ್ನು ವಿದ್ಯಾರ್ಥಿಗಳು ಪಾವತಿಸಬಾರದು. ಯಾವುದೇ ಕಾಲೇಜುಗಳಿಗೆ ಪಾವತಿಸಿದ್ದರೆ, ಪರಿಹಾರಕ್ಕಾಗಿ ಪ್ರವೇಶ ಮೇಲ್ವಿಚಾರಣಾ ಸಮಿತಿಯನ್ನು ಸಂಪರ್ಕಿಸಬಹುದು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net