ಕುಡಿಯುವ ನೀರಿಗೆ ಸಮಸ್ಯೆಯಾಗದಿರಲಿ

ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಎಂ.ಆರ್ ಮಂಜುನಾಥ್, ಶ್ರೀರೂಪಾ, ಜವರೇಗೌಡ, ಮೋನಾರೋತ್, ದಿನೇಶ್‌ಕುಮಾರ್ ಮೀನಾ ಇತರರಿದ್ದರು.
ಮಲೆಮಹದೇಶ್ವರ ಬೆಟ್ಟದಲ್ಲಿ ಸಚಿವ ಕೆ. ವೆಂಕಟೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಎಂ.ಆರ್ ಮಂಜುನಾಥ್, ಶ್ರೀರೂಪಾ, ಜವರೇಗೌಡ, ಮೋನಾರೋತ್, ದಿನೇಶ್‌ಕುಮಾರ್ ಮೀನಾ ಇತರರಿದ್ದರು.
Published on
ಹನೂರು: ಗ್ರಾಮ ಪಂಚಾಯಿತಿಗಳಲ್ಲಿ ಲಭ್ಯವಿರುವ 15ನೇ ಹಣಕಾಸು ಯೋಜನೆಯ ಅನುದಾನವನ್ನು ಸಂಪೂರ್ಣ ಬಳಕೆ ಮಾಡಿಕೊಂಡು ಜನರಿಗೆ ಸಮಸ್ಯೆಯಾಗದಂತೆ ಅವಶ್ಯಕತೆಗೆ ಅನುಗುಣವಾಗಿ ಕುಡಿಯುವ ನೀರು ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚಿಸಿದರು.
ತಾಲೂಕಿನ ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದಲ್ಲಿ ಮಂಗಳವಾರ ಕುಡಿಯುವ ನೀರು, ಮೇವು ಹಾಗೂ ಇನ್ನಿತರೆ ಸಮಸ್ಯೆಗಳ ನಿವಾರಣೆ ಸಂಬಂಧ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆದು ಮಾತನಾಡಿದರು.
ಈ ಬಾರಿ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆ ಜಿಲ್ಲೆಯಲ್ಲಿ ಅದರಲ್ಲೂ ಹನೂರು ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಹಾಗಾಗಿ ಜನರಿಗೆ ಕುಡಿಯುವ ನೀರನ್ನು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ ನೀರಿನ ಸಮಸ್ಯೆ ತಲೆದೂರುವ ಗ್ರಾಮಗಳಿಗೆ ಖಾಸಗಿ ಪಂಪ್‌ಸೆಟ್ ಹಾಗೂ ಟ್ಯಾಂಕರ್ ಮೂಲಕ ಕೂಡಲೇ ನೀರು ಒದಗಿಸಬೇಕು. ಇದೀಗ ಬೇಸಿಗೆ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ತಲೆದೂರಿರುವುದರಿಂದ ಗ್ರಾಪಂನಲ್ಲಿ ಲಭ್ಯವಿರುವ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸದೇ ಸಂಪೂರ್ಣ ಹಣವನ್ನು ಕುಡಿಯುವ ನೀರಿನ ಸಮಸ್ಯೆಯ ನಿವಾರಣೆಗೆ ಬಳಕೆ ಮಾಡಿಕೊಳ್ಳಿ. ಬೋರ್ ಕೊರೆಯಿಸುವಿಕೆ, ಪೈಪ್‌ಲೈನ್ ಕಾಮಗಾರಿ ಹಾಗೂ ಇನ್ನಿತರೆ ಅಗತ್ಯ ಕಾರ್ಯಗಳನ್ನು ಕೈಗೊಂಡು ಜನರ ಬೇಡಿಕೆಗೆ ತಕ್ಕಂತೆ ನೀರೋದಗಿಸಬೇಕು. ಜತೆಗೆ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಿಸುವುದರಿಂದ ಅಧಿಕಾರಿಗಳು ಕಚೇರಿಯಲ್ಲಿ ಹೆಚ್ಚು ಕೂರದೇ ಗ್ರಾಮಕ್ಕೆ ತೆರಳಿ ವಾಸ್ತವ ಸ್ಥಿತಿಯನ್ನು ಅರಿಯಬೇಕು. ಖಾಸಗಿ ಬೋರ್‌ಗಳ ಪಟ್ಟಿಯನ್ನು ತಯಾರಿಸಬೇಕು. ತುರ್ತು ಸಮಸ್ಯೆ ಎದುರಾಗುವ ಗ್ರಾಮಗಳಲ್ಲಿ ಕೂಡಲೇ ನೀರು ಪೂರೈಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಸೂಚಿಸಿದರು.
31 ಹಳ್ಳಿಗಳಲ್ಲಿ ನೀರಿನ ಕೊರತೆ ಸಾಧ್ಯತೆ: ಚಾ.ನಗರ ತಾಪಂ ಇಒ ಗಿರಿಧರ್ ಮಾತನಾಡಿ, ಚಾ.ನಗರ ತಾಲೂಕಿನಲ್ಲಿ 43 ಗ್ರಾಪಂಗಳಿದ್ದು, ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಮಳೆಯ ಪ್ರಸ್ತುತ ಸ್ಥಿತಿ ಇದೇ ರೀತಿ ಮುಂದುವರಿದರೆ ತಾಲೂಕಿನ 25 ಗ್ರಾಪಂ ವ್ಯಾಪ್ತಿಯ 31 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಬಗ್ಗೆ ಅಗತ್ಯ ಮುಂಜಾಗ್ರತಾ ಕ್ರಮವಹಿಸುವಂತೆ ಸಚಿವರು ಸೂಚಿಸಿದರು. ನಗರಸಭೆಯ ಅಧಿಕಾರಿಗಳು ಮಾತನಾಡಿ, 31 ವಾರ್ಡ್‌ಗಳ ಪೈಕಿ 7 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಸಂಬಂಧಪಟ್ಟ ಇಂಜಿನಿಯರ್ ಅವರಿಂದ ಮಾಹಿತಿ ಪಡೆದ ಸಚಿವರು ಕುಡಿಯುವ ನೀರಿನ ಸಂಬಂಧ ಕೈಗೊಂಡಿರುವ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದರು. ಕೊಳ್ಳೇಗಾಲ ತಾಪಂ ಇಒ ಗುರುಶಾಂತಪ್ಪ ಅವರು ಸದ್ಯದ ಮಟ್ಟಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ ಎಂದರು.
ಜಾನುವಾರುಗಳಿಗೆ ಕಾಡಲಿದೆ ಮೇವಿನ ಸಮಸ್ಯೆ: ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಂಜುನಾಥ್ ಮಾತನಾಡಿ, ಜಿಲ್ಲೆಯ ಚಾ.ನಗರ, ಗುಂಡ್ಲುಪೇಟೆ ತಾಲೂಕಿನ 10 ಗ್ರಾಮಗಳಲ್ಲಿ ಹಾಗೂ ಹನೂರಿನ 15 ಗ್ರಾಮಗಳಲ್ಲಿ ಸುಮಾರು 10 ಸಾವಿರ ಜಾನುವಾರುಗಳಿಗೆ ಮುಂದಿನ ದಿನಗಳಲ್ಲಿ ಮೇವಿನ ಸಮಸ್ಯೆ ಎದುರಾಗಲಿದೆ. ಇದರಿಂದ ಮೇವು ಬ್ಯಾಂಕ್ ಅಗತ್ಯವಾಗಿದೆ. ಸದ್ಯ 22 ವಾರಕ್ಕೆ ಸಾಕಾಗುವಂತೆ ಮೇವು ಲಭ್ಯವಿದೆ. ಇನ್ನು ಗ್ರಾಮಗಳಲ್ಲಿ ತೊಟ್ಟಿಗಳನ್ನು ರಿಪೇರಿಪಡಿಸಿ ನೀರು ತುಂಬಿಸಿದರೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಇದಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಅವರು ಪಟ್ಟಿ ಸಂಗ್ರಹಿಸಿ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಕ್ರಮವಹಿಸುವಂತೆ ಸೂಚಿಸಿದರು.
ಇದೇ ವೇಳೆ ಬೆಂಕಿ ಅವಘಡ ತಡೆಗಟ್ಟುವ ಸಂಬಂಧ ಡಿಸಿಎಫ್ ಭಾಸ್ಕರ್ ಅವರಿಂದ ಮಾಹಿತಿ ಪಡೆದ ಸಚಿವರು, ಬೇಸಿಗೆ ವೇಳೆ ಅರಣ್ಯದಲ್ಲಿ ಕಾಡ್ಗಿಚ್ಚು ಉಂಟಾಗದಂತೆ ಅಗತ್ಯ ಕ್ರಮವಹಿಸಬೇಕು. ಈ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಇನ್ನು ಸಭೆಯಲ್ಲಿ ಹನೂರು ತಾಲೂಕಿನ ಪ್ರತಿ ಗ್ರಾಪಂ ಪಿಡಿಒಗಳಿಂದ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ಮಾಹಿತಿ ಪಡೆದ ಸಚಿವರು ಅಗತ್ಯ ಸಲಹೆ ನೀಡಿದರು. ಈ ಬಗ್ಗೆ ಮುತುವರ್ಜಿ ವಹಿಸುವಂತೆ ತಾಪಂ ಇಒ ಉಮೇಶ್ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಜಿಪಂ ಸಿಇಒ ಮೋನಾರೋತ್, ಉಪ ಕಾರ್ಯದರ್ಶಿ ಶ್ರುತಿ, ಎಸಿ ದಿನೇಶ್‌ಕುಮಾರ್ ಮೀನಾ, ಡಿಸಿಎಫ್ ಸುರೇಂದ್ರ, ತಹಸೀಲ್ದಾರ್‌ರಾದ ಹನೂರಿನ ಕೆ.ಎನ್ ಚೈತ್ರಾ, ಕೊಳ್ಳೇಗಾಲದ ಬಸವರಾಜು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.
1.90 ಕೋಟಿ ಅನುದಾನ ಅಗತ್ಯ: ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ, ಹನೂರು ತಾಲೂಕಿನಲ್ಲಿ ಈ ಬಾರಿ ಸಮರ್ಪಕ ಮಳೆಯಾಗದ ಹಿನ್ನೆಲೆ ಅಂತರ್ಜಲ ಮಟ್ಟ ಕುಸಿದಿರುವ ಪರಿಣಾಮ ಈಗಾಗಲೇ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರಿದ್ದು, ಜನರು ನೀರಿಗಾಗಿ ಸಮಸ್ಯೆ ಎದುರಿಸುವಂತಾಗಿದೆ. ಅಧಿಕಾರಿಗಳು ನೀರಿನ ಸಮಸ್ಯೆಯನ್ನು ನಿವಾರಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಮುಂದಿನ 4 ತಿಂಗಳ ಕಾಲ ನೀರಿನ ಸಮಸ್ಯೆಯನ್ನು ನಿಭಾಯಿಸಬೇಕಾದರೆ 1.90 ಕೋಟಿ ರೂ. ಅನುದಾನದ ಅಗತ್ಯವಿದೆ. ಆದ್ದರಿಂದ ಸರ್ಕಾರದಿಂದ ಅನುದಾನ ದೊರಕಿಸಿ ಕೊಡುವಂತೆ ಮನವಿ ಮಾಡಿದರು. ಜತೆಗೆ ಕಾಡಂಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಅರಣ್ಯ ಇಲಾಖೆಯಿಂದ ಸಮಸ್ಯೆ ಇದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net