ಕಾಲ್ಪನಿಕ ಲೋಕಕ್ಕೆ ಪ್ರೇರಿತರಾಗಬೇಡಿ

Don't be drawn into a fantasy world.
Don't be drawn into a fantasy world.
Published on
ಶಿರಾ: ಸಂವಿಧಾನ ಶಿಲ್ಪಿ ಬಿ.ಆರ್​.ಅಂಬೇಡ್ಕರ್​ ಅವರು ಕೇವಲ ಒಂದು ಜಾತಿಗೆ ಸೀಮಿತರಲ್ಲ, ಅವರು ಈ ದೇಶದ ಸ್ವತ್ತು ಎಂದು ಬೆಂಗಳೂರಿನ ಕೆಸ್ಟ್​ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಹ.ರಾ.ಮಹೇಶ್​ ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ, ತುಮಕೂರು ವಿವಿಯ ಡಾ.ಬಿ.ಆರ್​. ಅಂಬೇಡ್ಕರ್​ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಡಾ. ಬಿ.ಆರ್​.ಅಂಬೇಡ್ಕರ್​ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಬಾ ಸಾಹೇಬ್​ ಡಾ. ಬಿ.ಆರ್​. ಅಂಬೇಡ್ಕರ್​ ವಿಚಾರಗಳು ಮತ್ತು ಭಾರತದ ಸಂವಿಧಾನ ಎಂಬ ವಿಷಯದ ಕುರಿತು ವಿಶೇಷ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಸಿನಿಮಾಗಳ ಕಾಲ್ಪನಿಕ ಲೋಕದಿಂದ ಪ್ರೇರಿತರಾಗಿ ಹಾದಿ ತಪ್ಪಬಾರದು. ಸಮಾಜಕ್ಕಾಗಿ ಬದುಕಿದ ಅಂಬೇಡ್ಕರ್​ ಅವರಂತಹ ಮಹನೀಯರನ್ನು ತಮ್ಮ ಜೀವನದ ನೈಜ ಐಕಾನ್​ಗಳನ್ನಾಗಿ ಸ್ವೀಕರಿಸಬೇಕು. ಅವರ ಚಿಂತನೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ದಾರಿದೀಪವಾಗಲಿ. ಪ್ರಕೃತಿಯಲ್ಲಿ ಜಾತಿ ಎಂಬ ಭೇದವಿಲ್ಲ, ಅದು ಮನುಷ್ಯನಿಗೆ ಅಂಟಿದ ರೋಗವಾಗಿದೆ. ನಮ್ಮಲ್ಲಿ ಮೊದಲು ಬದಲಾವಣೆ ತಂದುಕೊಂಡರೆ ಮಾತ್ರ ದೇಶವನ್ನು ಬದಲಿಸಲು ಸಾಧ್ಯ ಎಂದರು.
ಜಾತಿಗೊಂದು ಉದ್ಯೋಗ ಎಂಬ ಪದ್ಧತಿಯಿದ್ದ ಕಾಲದಲ್ಲಿ ಸಾಮಾಜಿಕ ಅವಮಾನಗಳನ್ನು ಸಹಿಸಿಕೊಂಡು ಓದಿದವರು ಅಂಬೇಡ್ಕರ್​. ಅವರ ಮಟ್ಟಿಗೆ ಓದು ಎಂದರೆ ಕೇವಲ ಪದವಿ ಪಡೆಯುವುದಾಗಿರಲಿಲ್ಲ, ಅದು ಸಮಾಜವನ್ನೇ ಪರಿವರ್ತಿಸುವ ಶಕ್ತಿಯಾಗಿತ್ತು. ಬುದ್ಧ, ಬಸವಣ್ಣನವರ ತತ್ವಗಳಿಂದ ಪ್ರೇರಿತರಾದ ಅಂಬೇಡ್ಕರ್​ ಅವರು ಪರಿವರ್ತನೆಯ ಪ್ರತಿಬಿಂಬವಾಗಿ ನಮ್ಮ ಮನದಲ್ಲಿದ್ದಾರೆ. ನೈಜ ಶಿಕ್ಷಣವು ಸತ್ಯ ಮತ್ತು ಅಸತ್ಯಗಳನ್ನು ಪರೀಕ್ಷಿಸುವ ಜ್ಞಾನವನ್ನು ನೀಡಬೇಕು. ಆದರೆ ಇಂದು ಜಗತ್ತಿನ ನೂರು ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದು ಸಂಸ್ಥೆಯೂ ಇಲ್ಲದಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ತುಮಕೂರು ವಿವಿ ಕಲಾ ನಿಕಾಯದ ಡೀನ್​ ಪ್ರೊ.ಎಂ.ಕೋಟ್ರೇಶ್​ ಮಾತನಾಡಿ, ವಿದ್ಯಾರ್ಥಿಗಳ ಆತ್ಮಾವಲೋಕನಕ್ಕೆ ಈ ಉಪನ್ಯಾಸ ಪ್ರೇರಣೆಯಾಗಿದೆ ಎಂದರು.
ಅಂಬೇಡ್ಕರ್​ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಕೇಶವ, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎ.ಬಿ.ಬಾಳಪ್ಪ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಡಿ.ಆರ್​.ಹೊನ್ನಾಂಜನಯ್ಯ, ಐ.ಕ್ಯೂ.ಎ.ಸಿ ಸಂಚಾಲಕ ಡಾ. ಟಿ.ಎಸ್​.ಪ್ರಭಾಸ್​ ಪಂಡಿತ್​ , ಗಾಯತ್ರಿ, ಪುಷ್ಪಲತಾ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net