ದೊಡ್ಡಬಳ್ಳಾಪುರ : ಸೂರತ್ ಸೀರೆಗಳಿಂದ ದೊಡ್ಡಬಳ್ಳಾಪುರ ನೇಯ್ಗೆ ಉದ್ಯಮ ಬಿಕ್ಕಟ್ಟಿಗೆ ಸಿಲುಕಿದ್ದು, ನೇಯ್ಗೆ ಉದ್ಯಮ ಉಳಿಸುವಂತೆ ಆಗ್ರಹಿಸಿ ಜ.5ರಂದು ದೊಡ್ಡಬಳ್ಳಾಪುರ ಬಂದ್ಗೆ ಕರೆ ನೀಡಲಾಗಿದೆ ಎಂದು ರಾಜ್ಯ ನೇಕಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್ ತಿಳಿಸಿದರು.
ನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ನಿಂದ ದೊಡ್ಡಬಳ್ಳಾಪುರಕ್ಕೆ ಸೀರೆಗಳು ಬರುತ್ತಿದ್ದು, ಇದರಿಂದ ದೊಡ್ಡಬಳ್ಳಾಪುರದ ನೇಯ್ಗೆ ಉದ್ಯಮ ನೆಲಕಚ್ಚಿದೆ. ಸೂರತ್ನಿಂದ ಬರುತ್ತಿರುವ ಸೀರೆ ಆಧುನಿಕ ಮಗ್ಗಗಳಿಂದ ತಯಾರಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಸೂರತ್ ಸೀರೆ ಮಾರಾಟವಾಗುತ್ತಿವೆ. ಇದರಿಂದ ನಮ್ಮ ಸೀರೆಗಳು ಬೇಡಿಕೆ ಕಳೆದುಕೊಂಡಿದೆ. ಈ ಹಿಂದೆ ನೇಯ್ಗೆ ಉದ್ಯಮ ಉಳಿಸುವಂತೆ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಗಿತ್ತು. ಚಿಕ್ಕಬಳ್ಳಾಪುರ ಲೋಕಸಭಾ ಸಂಸದರಿಗೂ ಮನವಿ ಮಾಡಲಾಗಿದೆ. ಅವರು ಜವಳಿ ಸಚಿವರಿಗೆ ಪತ್ರ ಕೂಡ ನೀಡಿದ್ದಾರೆ ಎಂದರು.
ನೇಕಾರ ಮುಖಂಡರ ಜತೆಗೆ ಜವಳಿ ಸಚಿವರೊಂದಿಗೂ ಸಭೆ ನಡೆಸಲಾಗಿತ್ತು. ಆದರೂ ಸದನದಲ್ಲಿ ನಮ್ಮ ಸಮಸ್ಯೆ ಚರ್ಚೆ ಆಗಿಲ್ಲ. ಹೋರಾಟದ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ. ಇದರಿಂದ ದೊಡ್ಡಬಳ್ಳಾಪುರ ಬಂದ್ಗೆ ಮುಂದಾಗಿದ್ದು, ಈ ಬಗ್ಗೆ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳೊಂದಿಗೆ ಸಭೆ ನಡೆಸಲಾಗಿದೆ. ಅವರೂ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಆಟೋಚಾಲಕರು, ಬೀದಿಬದಿ ವ್ಯಾಪಾರಸ್ಥರೂ ಇದಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ನೇಕಾರರ ಬದುಕನ್ನು ಉಳಿಸಲು ಬಂದ್ ಮಾಡಲಾಗುತ್ತಿದೆ. ಪವರ್ ಲೂಮ್ ರಿಸರ್ವೇಷನ್ ಕಾಯ್ದೆ ಜಾರಿ ತರುವ ಮೂಲಕ ಲಾಳಿ ಸಹಿತ ಮಗದಲ್ಲಿನ ಉತ್ಪನ್ನಗಳನ್ನು ರೇಪಿಯರ್ನಲ್ಲಿ ಮಗ್ಗದಲ್ಲಿ ನೇಯದಂತೆ ಕ್ರಮವಹಿಸಬೇಕು ಎಂದರು.
ನೇಕಾರರ ದೊಡ್ಡಬಳ್ಳಾಪುರ ಬಂದ್ಗೆ ವಿವಿಧ ಪಕ್ಷಗಳು ಬೆಂಬಲ ನೀಡಿದ್ದಾರೆ. ಹಲವು ವರ್ಷದಿಂದ ನೇಕಾರಿಕೆ ಮಾಡಿಕೊಂಡು ಬರುತ್ತಿದ್ದೇವೆ. ಸೂರತ್ ಸೀರೆಗಳಿಂದ ನೇಯ್ಗೆ ಉದ್ಯಮಕ್ಕೆ ಸಮಸ್ಯೆಯಾಗುತ್ತಿದೆ. ಸರ್ಕಾರ ನಮ್ಮ ಸಮಸ್ಯೆ ಕೇಳುತ್ತಿಲ್ಲ. ಹೀಗಾಗಿ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ.