ಮನೆಯಲ್ಲೇ ವೃದ್ಧ ದಂಪತಿ ಸಂಶಯಾಸ್ಪದ ಸಾವು: ಪೊಲೀಸ್​ ತನಿಖೆಯಲ್ಲಿ ಕೊಲೆ ರಹಸ್ಯ ಬಯಲು, ವೈದ್ಯನೇ​ ವಿಲನ್​! Old Couple

ಕೊಲೆ ಆರೋಪಿ ಡಾ. ಮಲ್ಲೇಶ್​ ಹಾಗೂ ಮೃತ ವೃದ್ಧ ದಂಪತಿ ಚಂದ್ರಪ್ಪ ಮತ್ತು ಜಯಮ್ಮ
ಕೊಲೆ ಆರೋಪಿ ಡಾ. ಮಲ್ಲೇಶ್​ ಹಾಗೂ ಮೃತ ವೃದ್ಧ ದಂಪತಿ ಚಂದ್ರಪ್ಪ ಮತ್ತು ಜಯಮ್ಮ
Published on

ಪ್ರಮುಖ ಮುಖ್ಯಾಂಶಗಳು

  • ಶಿವಮೊಗ್ಗದ ಭೂತನಗುಡಿಯಲ್ಲಿ ಅನುಮಾನಸ್ಪಾದ ರೀತಿಯಲ್ಲಿ ವೃದ್ಧ ದಂಪತಿಯ ಸಾವು
  • ವೃದ್ಧ ದಂಪತಿಯದ್ದು ಸಹಜ ಸಾವಲ್ಲ, ಕೊಲೆ ಎಂಬ ಸ್ಫೋಟಕ ಸಂಗತಿ ತನಿಖೆಯಲ್ಲಿ ಬಯಲು
  • ಚಂದ್ರಪ್ಪ ಅವರ ತಮ್ಮ ಮಗ ಡಾ. ಮಲ್ಲೇಶ್​ನಿಂದಲೇ ಇಂಥದ್ದೊಂದು ಹೀನ ಕೃತ್ಯ
ಭದ್ರಾವತಿ: ನಗರದ ಭೂತನಗುಡಿಯಲ್ಲಿ ಸೋಮವಾರ ತಡರಾತ್ರಿ ಅನುಮಾನಸ್ಪಾದ ರೀತಿಯಲ್ಲಿ ಮೃತಪಟ್ಟ ವೃದ್ಧ ದಂಪತಿಯ ( Old Couple ) ಸಾವಿನ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ವೃದ್ಧ ದಂಪತಿಯದ್ದು ಸಹಜ ಸಾವಲ್ಲ, ಅದೊಂದು ಕೊಲೆ ಎಂಬ ಸ್ಫೋಟಕ ಸಂಗತಿ ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.
ವೃದ್ಧ ದಂಪತಿಯನ್ನು ವಿಐಎಸ್‌ಎಲ್ ನಿವೃತ್ತ ಉದ್ಯೋಗಿ ಚಂದ್ರಪ್ಪ (80), ಪತ್ನಿ ಜಯಮ್ಮ(70) ಎಂದು ಗುರುತಿಸಲಾಗಿದೆ. ದಂಪತಿ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಮಲಗಿರುವ ದಂಪತಿ ಮಂಗಳವಾರ ಬೆಳಗ್ಗೆ ಶವವಾಗಿ ಪತ್ತೆಯಾದರು. ಅಚ್ಚರಿಯ ಸಂಗತಿ ಏನೆಂದರೆ, ಅವರ ಮೈಮೇಲೆ ಯಾವುದೇ ಗಾಯದ ಗುರುತು ಕಂಡುಬಂದಿಲ್ಲ. 
ದಂಪತಿ ಪ್ರತಿದಿನ ಬೆಳಗ್ಗೆ ಮನೆ ಎದುರು ನೀರು ಹಾಕಿ, ಕನಕ ಮಂಟಪದಲ್ಲಿ ವಾಕಿಂಗ್ ಮಾಡುತ್ತಿದ್ದರು. ಆದರೆ, ಮಂಗಳವಾರ ವಾಕಿಂಗ್‌ಗೆ ಹೋಗದಿರುವುದು ಹಾಗೂ ಬಾಗಿಲು ತೆರೆದಿರುವುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಮನೆಯೊಳಗೆ ಹೋಗಿ ನೋಡಿದಾಗ ಮೃತಪಟ್ಟಿರುವುದು ಗೊತ್ತಾಗಿದೆ. ಚಂದ್ರಪ್ಪ ರೂಮಿನಲ್ಲಿ ಹಾಗೂ ಜಯಮ್ಮ ಹಾಲ್‌ನಲ್ಲಿ ಶವವಾಗಿ ಪತ್ತೆಯಾದರು. ದಂಪತಿಗೆ ಮೂವರು ಗಂಡು ಮಕ್ಕಳಿದ್ದು ಬೇರೆ ಬೇರೆ ಜಿಲ್ಲೆಗಳಲ್ಲಿ ವೃತ್ತಿ ಮಾಡುತ್ತಿದ್ದಾರೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹಳೇನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು

ಹಳೇನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಚಂದ್ರಪ್ಪ ಅವರ ತಮ್ಮ ಮಗ ಡಾ. ಮಲ್ಲೇಶ್​ನಿಂದಲೇ ಇಂಥದ್ದೊಂದು ಹೀನ ಕೃತ್ಯ ನಡೆದಿದೆ. ಆರೋಪಿ ಮಲ್ಲೇಶ್ ವೃತ್ತಿಯಲ್ಲಿ ವೈದ್ಯ. ಆತ ಮೈತುಂಬಾ ಸಾಲ ಮಾಡಿಕೊಂಡಿದ್ದ. ಸಾಲದ ಕಿರುಕುಳ ಜಾಸ್ತಿಯಾದ್ದರಿಂದ ತನ್ನ ದೊಡ್ಡಪ್ಪ ಚಂದ್ರಪ್ಪನ ಬಳಿ ಹಣ ಕೇಳಿದ್ದ. ಯಾವಾಗ ಅವರು ಹಣ ಕೊಡಲ್ಲ ಅಂತಾ ಹೇಳಿದರೋ ಅವರನ್ನು ಕೊಲ್ಲಲು ಮಲ್ಲೇಶ್​ ಸಂಚು ರೂಪಿಸಿದ ಎಂದು ಶಿವಮೊಗ್ಗ ಜಿಲ್ಲಾ ಎಸ್​ಪಿ ನಿಖಿಲ್​ ತಿಳಿಸಿದ್ದಾರೆ. 

ಚಿಕಿತ್ಸೆ ನೆಪದಲ್ಲಿ ಹತ್ಯೆ​

ಚಂದ್ರಪ್ಪ ಮತ್ತು ಜಯಮ್ಮ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಮಲ್ಲೇಶ್​ ವೈದ್ಯನಾಗಿದ್ದರಿಂದ ಆತನಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ನೀಡುತ್ತಿದ್ದ ಔಷಧದಲ್ಲಿ ಹೈಡೋಸ್​ ನೀಡಿ ಕೊಲೆ ಮಾಡಿದ್ದಾನೆ. ಹೈ ಡೋಸ್​ ಅನಸ್ತೇಶಿಯಾ ನೀಡಿ ಕೊಂದಿರುವುದು ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಬಳಿಕ ಮಲ್ಲೇಶ್​, ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ಕದ್ದು ಪರಾರಿಯಾಗಿದ್ದ. ಬಳಿಕ ಚಿನ್ನಾಭರಣವನ್ನು ಅಡವಿಟ್ಟು ತನ್ನ ಸಾಲ ತೀರಿಸಲು ಮುಂದಾಗಿದ್ದ. ಅಂತಿಮವಾಗಿ ಪೊಲೀಸ್​ ತನಿಖೆಯಲ್ಲಿ ಮಲ್ಲೇಶ್​ ಸಿಕ್ಕಿಬಿದ್ದಿದ್ದಾನೆ.
ಚಂದ್ರಪ್ಪ ಮತ್ತು ಜಯಮ್ಮರ ಮಕ್ಕಳು ಎಷ್ಟೇ ಕರೆ ಮಾಡಿದರೂ ತಂದೆ-ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸ್ಥಳೀಯರಿಗೆ ಫೋನ್​ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳೀಯರು ಮನೆಯ ಒಳಗಡೆ ಹೋಗಿ ನೋಡಿದಾಗ ವೃದ್ಧ ದಂಪತಿ ಶವವಾಗಿ ಪತ್ತೆಯಾದರು. ನಂತರದ ಪೊಲೀಸ್​ ತನಿಖೆಯಲ್ಲಿ ಸಹಜ ಸಾವಲ್ಲ, ಕೊಲೆ ಅನ್ನೋದು ಬಯಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net